ದೇಶಪ್ರಮುಖ ಸುದ್ದಿ

ರಾತ್ರಿಯಿಡೀ ಇವಿಎಂ – ಸ್ಟ್ರಾಂಗ್ ರೂಮ್‍ ಕಾವಲು ಕಾಯ್ದ ವಿರೋಧ ಪಕ್ಷಗಳು!

ನವದೆಹಲಿ (ಮೇ 22): ನಾಳೆ ಲೋಕಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದ್ದು, ಹಲವು ರಾಜ್ಯಗಳಲ್ಲಿ ವಿರೋಧ ಪಕ್ಷಗಳ ನಾಯಕರು ಇವಿಎಂಗಳನ್ನು ಇರಿಸಲಾಗಿರುವ ಸ್ಟ್ರಾಂಗ್​ ರೂಂ ಹೊರಭಾಗದಲ್ಲಿ ರಾತ್ರಿಯಿಂದ ಕಾವಲು ಕಾಯುತ್ತಿದ್ದಾರೆ.

ಇವಿಎಂಗಳನ್ನು ತಿರುಚಲಾಗುತ್ತದೆ ಎಂಬ ಆರೋಪ ಕೇಳಿಬಂದ ಕಾರಣದಿಂದ ವಿರೋಧ ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರು ಇವಿಎಂ ಇರಿಸಲಾದ ಸ್ಥಳಗಳಲ್ಲಿ ಕಾವಲಿದ್ದಾರೆ. ಹಾಗೆಯೇ ಉತ್ತರಪ್ರದೇಶದಲ್ಲಿ ಇವಿಎಂಗಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂಬ ವಿಡಿಯೋ ವೈರಲ್ ಆದ ಬಳಿಕ ಇದಕ್ಕೆ ಪ್ರತಿಭಟನೆಯನ್ನೂ ಮಾಡಲಾಗಿದೆ.

ಮಧ್ಯಪ್ರದೇಶದ ಭೋಪಾಲ್ ಅಭ್ಯರ್ಥಿ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಮತ್ತು ಅವರ ಹೆಂಡತಿ ಸೆಂಟ್ರಲ್​ ಜೈನ್​ನಲ್ಲಿ ಇವಿಎಂಗಳನ್ನು ಇರಿಸಲಾಗಿರುವ ಸ್ಟ್ರಾಂಗ್​ ರೂಂ ಬಳಿಗೆ ರಾತ್ರಿ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಉತ್ತರಪ್ರದೇಶದ ಮೀರುತ್ ಮತ್ತು ರಾಯ್​ಬರೇಲಿಯಲ್ಲಿ ಇವಿಎಂಗಳನ್ನು ಇರಿಸಲಾದ ಸ್ಟ್ರಾಂಗ್ ರೂಂ ಹೊರಭಾಗದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಕಾವಲು ಕಾಯ್ದರು. ಗಾಂಧಿ ಕುಟುಂಬದ ಭದ್ರಕೋಟೆಯಾಗಿರುವ ಈ ಕ್ಷೇತ್ರದಿಂದ ಸೋನಿಯಾ ಗಾಂಧಿ ಸ್ಪರ್ಧೆ ಮಾಡಿದ್ದಾರೆ.

ಐದು ರಾಜ್ಯಗಳಲ್ಲಿ ಇವಿಎಂಗಳನ್ನು ಯಾವುದೇ ಭದ್ರತೆ ಇಲ್ಲದೇ ಸಾಗಿಸುತ್ತಿರುವ ಹಲವು ವಿಡಿಯೋಗಳು ವೈರಲ್ ಆದ ಬಳಿಕ 22 ವಿರೋಧ ಪಕ್ಷಗಳು ಮಂಗಳವಾರ ಚುನಾವಣಾ ಆಯೋಗಕ್ಕೆ ಭೇಟಿ ನೀಡಿ ಖಂಡನೆ ವ್ಯಕ್ತಪಡಿಸಿದ್ದವು. ಈ ವೇಳೆ ಮತ ಎಣಿಕೆಗೂ ಮೊದಲು ವಿವಿಪ್ಯಾಟ್​ ಯಂತ್ರವನ್ನು ಗಣನೆಗೆ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದವು. ಇದಕ್ಕೂ ಒಂದು ದಿನದ ಹಿಂದೆ, ಮತ ತಾಳೆ ಹಾಕುವ ಪೇಪಟರ್ ಟ್ರಯಲ್​ ಸ್ಲಿಪ್​ಗಳನ್ನು ಸಂಖ್ಯೆಯನ್ನು ಶೇ.100ಕ್ಕೆ ಏರಿಸಬೇಕು ಎಂಬ ವಿರೋಧ ಪಕ್ಷಗಳ ಮನವಿಯನ್ನು ಸುಪ್ರೀಂಕೋರ್ಟ್​ ತಳ್ಳಿ ಹಾಕಿತ್ತು.

ಛಂಡೀಗಢದಲ್ಲಿ ಕಾಂಗ್ರೆಸ್​ ಕಾರ್ಯಕರ್ತರು ಸೋಮವಾರದಿಂದ ಇವಿಎಂ ಸ್ಟ್ರಾಂಗ್​ ರೂಂ ಹೊರಭಾಗದಲ್ಲಿ ಕಾವಲು ಕಾಯುತ್ತಿದ್ದಾರೆ. ವಿವಿಧ ರಾಜಕೀಯ ಪಕ್ಷಗಳು ಪ್ರತಿನಿಧಿಸಿದ್ದು, ಸ್ಟ್ರಾಂಗ್​ ರೂಂ ಸುತ್ತ ಯಾವುದೇ ಬದಲಾವಣೆ ಆಗದಂತೆ ಮತ್ತು ಸಿಸಿಟಿವಿ ದೃಶ್ಯಾವಳಿಗಳನ್ನು ಗಮನವಿಟ್ಟು ಕಾಯುತ್ತಿದ್ದಾರೆ. ಮುಂಬೈ ಕಾಂಗ್ರೆಸ್​ ಮುಖ್ಯಸ್ಥ ಮಿಲಿಂದ್ ದೋರಾ ರಾಜ್ಯ ಚುನಾವಣಾ ಆಯುಕ್ತರಿಗೆ ಪತ್ರ ಬರೆದು, ಇವಿಎಂಗಳ ಇರಿಸಲಾದ ಸ್ಟ್ರಾಂಗ್ ರೂಂ ಬಳಿ ಹೆಚ್ಚಿನ ಭದ್ರತೆ ಒದಗಿಸುವಂತೆ ಮನವಿ ಮಾಡಿದ್ದಾರೆ. ಸಾಧ್ಯವಾದರೆ, ಸಿಸಿಟಿವಿ ಪಾಸ್​ವರ್ಡ್​ಗಳನ್ನು ಅಭ್ಯರ್ಥಿಗಳಿಗೆ ನೀಡುವಂತೆ ಕೇಳಿಕೊಂಡಿದ್ದಾರೆ. (ಎನ್.ಬಿ)

Leave a Reply

comments

Related Articles

error: