ದೇಶಮೈಸೂರು

ಲೋಕಸಭಾ ಚುನಾವಣಾ ಫಲಿತಾಂಶದ ಬಳಿಕ ಕೇಂದ್ರದಲ್ಲಿ ಸರ್ಕಾರ ರಚನೆ ಹೇಗೆ?

ಬೆಂಗಳೂರು (ಮೇ.22): ಭಾರತ ಸಂಸತ್ತು ಎರಡು ಸದನಗಳನ್ನು ಹೊಂದಿದೆ. ಇವುಗಳನ್ನು ರಾಜ್ಯಸಭೆ ಮತ್ತು ಲೋಕಸಭೆ ಎಂದು ಕರೆಯಲಾಗುತ್ತದೆ. ಲೋಕಸಭಾ ಸದನವೂ 545 ಸದಸ್ಯರನ್ನು ಹೊಂದಿರುತ್ತದೆ. ಭಾರತದ ಸಂವಿಧಾನದ ಪ್ರಕಾರ ಈ ಪೈಕಿ 543 ಸದಸ್ಯರು ಚುನಾವಣಾ ಕ್ಷೇತ್ರಗಳಿಂದ ಐದು ವರ್ಷಗಳಿಗೊಮ್ಮೆ ಒಂದು ಅವಧಿಗಾಗಿ ಚುನಾಯಿಸಲ್ಪಡುತ್ತಾರೆ. ಇನ್ನು ಗರಿಷ್ಠ ಇಬ್ಬರು ಸದಸ್ಯರನ್ನು ಆಂಗ್ಲ ಭಾರತೀಯ ಸಮುದಾಯದ ಪ್ರತಿನಿಧಿಗಳೆಂದು ನೇಮಿಸಲಾಗುತ್ತದೆ.

ಸಂವಿಧಾನದ 324ನೇ ವಿಧಿಯ ಅಡಿಯಲ್ಲಿ ಸೃಷ್ಟಿಸಲ್ಪಟ್ಟ ಕೇಂದ್ರ ಚುನಾವಣಾ ಆಯೋಗ ಭಾರತದಲ್ಲಿ ಚುನಾವಣೆಗಳನ್ನು ನಡೆಸುತ್ತದೆ. ಚುನಾವಣೆ ಪ್ರಕ್ರಿಯೆ ಒಮ್ಮೆ ಶುರುವಾದರೆ, ಆಯೋಗ ಅಧಿಕೃತವಾಗಿ ಫಲಿತಾಂಶ ಘೋಷಿಸುವವರೆಗೂ ರಾಜಕೀಯ ಪಕ್ಷಗಳು ಕಾಯಬೇಕಾಗುತ್ತದೆ. ಈ ಮಧ್ಯೆ ಯಾವುದೇ ನ್ಯಾಯಾಲವೂ ಆಯೋಗ ವಿಚಾರದಲ್ಲಿ ಮಧ್ಯಪ್ರವೇಶಿಸುವಂತೆ ಇಲ್ಲ ಎಂಬುದು ಒಂದು ಸುಸ್ಥಾಪಿತ ನಡುವಳಿಕೆ. ಚುನಾವಣೆಗಳ ಸಂದರ್ಭದಲ್ಲಿ ಆಯೋಗಕ್ಕೆ ಅಗಾಧ ಅಧಿಕಾರ ನೀಡಲಾಗಿರುತ್ತದೆ. ಅಗತ್ಯ ಬಿದ್ದರೆ ಒಂದು ನಾಗರಿಕ ನ್ಯಾಯಾಲಯದಂತೆಯೇ ಆಯೋಗ ಕಾರ್ಯನಿರ್ವಹಿಸಬಹುದಾದ ಮಟ್ಟಿಗೆ ಅಧಿಕಾರವಿರುತ್ತದೆ.

ಭಾರತದಲ್ಲಿ ಚುನಾವಣೆಗೆ ಸಂಬಂಧಿಸಿದ ಪ್ರಕ್ರಿಯೆ, ಕನಿಷ್ಟಪಕ್ಷ ಒಂದು ತಿಂಗಳ ಅವಧಿಯನ್ನು ತೆಗೆದುಕೊಳ್ಳುತ್ತದೆ. ಸಾರ್ವತ್ರಿಕ ಚುನಾವಣೆಗಳಿಗೆ ಮಾತ್ರ ಈ ಅವಧಿಯೂ ಮತ್ತಷ್ಟು ಹೆಚ್ಚಾಗಿರುತ್ತದೆ. ಮತದಾನ ಮಾಡಲು ಓರ್ವ ವ್ಯಕ್ತಿಯು ಹೊಂದಿರಬೇಕಾದ ಅರ್ಹತೆಯನ್ನು ಭಾರತೀಯ ಸಂವಿಧಾನ ನಿಗದಿಪಡಿಸಿದೆ. 18 ವರ್ಷ ವಯಸ್ಸಿಗಿಂತ ಮೇಲಿರುವ ಯಾವುದೇ ವ್ಯಕ್ತಿಯು ಮತದಾರರ ಅಧಿಕೃತ ಪಟ್ಟಿಗೆ ಸೇರಲು ಅರ್ಹನಾಗಿರುತ್ತಾನೆ. ತಮ್ಮ ಹೆಸರುಗಳನ್ನು ದಾಖಲಿಸಿಕೊಳ್ಳುವುದು ಅರ್ಹ ಮತದಾರರ ಹೊಣೆಗಾರಿಕೆಯಾಗಿರುತ್ತದೆ.

ಚುನಾವಣೆಗಳಿಗೆ ಮುಂಚಿತವಾಗಿಯೇ ನಾಮಪತ್ರ ಸಲ್ಲಿಸುವ ದಿನಾಂಕ, ಮತದಾನದ ದಿನಾಂಕ, ಮತ ಎಣಿಕೆಯ ದಿನಾಂಕ ಪ್ರಕಟಿಸಲಾಗುತ್ತದೆ. ದಿನಾಂಕ ಪ್ರಕಟವಾದ ಬೆನ್ನಲ್ಲೇ ಚುನಾವಣಾ ಮಾದರಿ ನೀತಿಸಂಹಿತೆ ಜಾರಿಗೆ ಬರುತ್ತದೆ. ಚುನಾವಣಾ ಪ್ರಚಾರವನ್ನು ನಡೆಸುವುದಕ್ಕಾಗಿ ಯಾವ ಪಕ್ಷವೂ ಸರ್ಕಾರಿ ಸಂಪನ್ಮೂಲಗಳನ್ನು ಬಳಸುವಂತಿರುವುದಿಲ್ಲ. ಮತದಾನ ನಡೆಯುವ ದಿನಕ್ಕೆ 48 ಗಂಟೆಗಳಿಗೂ ಮುಂಚಿತವಾಗಿಯೇ ಬಹಿರಂಗ ಚುನಾವಣಾ ಪ್ರಚಾರ ನಿಲ್ಲಿಸಬೇಕು ಎಂದು ಷರತ್ತು ಹಾಕಲಾಗುತ್ತದೆ. ಅದಾದ ನಂತರ ಮನೆಮನೆ ಪ್ರಚಾರ ಮಾಡಬಹುದು. ಭಾರತೀಯ ರಾಜ್ಯಗಳಿಗೆ ಸಂಬಂಧಿಸಿದಂತೆ ಒಂದು ಚುನಾವಣಾ-ಪೂರ್ವ ಪ್ರಕ್ರಿಯೆಯು ಅಗತ್ಯವಾಗಿದೆ.

ಮತದಾನ ದಿನಕ್ಕೆ 24 ಗಂಟೆಗೆ ಮುನ್ನವೇ ಚುನಾವಣಾ ಪ್ರಚಾರಗಳು ಕೊನೆಗೊಳ್ಳುತ್ತವೆ. ಸರ್ಕಾರಿ ಶಾಲೆಗಳು ಮತ್ತು ಕಾಲೇಜುಗಳನ್ನು ಮತದಾನ ಕೇಂದ್ರಗಳಾಗಿ ಆರಿಸಲಾಗುತ್ತದೆ. ಪ್ರತಿ ಜಿಲ್ಲೆಯ ಜಿಲ್ಲಾಧಿಕಾರಿಯು ಮತದಾನ ಪ್ರಕ್ರಿಯೆಯ ಉಸ್ತುವಾರಿಯನ್ನು ಹೊತ್ತಿರುತ್ತಾನೆ. ಅನೇಕ ಮತದಾನ ಕೇಂದ್ರಗಳಿಗೆ ಸರ್ಕಾರಿ ನೌಕರರನ್ನು ನೇಮಿಸಲಾಗುತ್ತದೆ.

ಭಾರತದ ನಿಶ್ಚಿತ ಭಾಗಗಳಲ್ಲಿ ಅತೀವವಾಗಿ ಚಾಲ್ತಿಯಲ್ಲಿರುವ, ಮತಗಟ್ಟೆ ವಶಪಡಿಸಿಕೊಳ್ಳಲಾಗುತ್ತದೆ. ಈ ಮೂಲಕ ನಡೆಯುವ ಚುನಾವಣಾ ಅಕ್ರಮವನ್ನು ತಡೆಗಟ್ಟಲೆಂದು ಮತಪೆಟ್ಟಿಗೆಗಳ ಬದಲಿಗೆ ವಿದ್ಯುನ್ಮಾನ ಮತದಾನ ಯಂತ್ರಗಳನ್ನು ಸಂಪೂರ್ಣವಾಗಿ ಬಳಕೆಗೆ ತಂದಿದೆ. ಜತೆಗೆ ಇವಿಎಂನಲ್ಲಿ ದಾಖಲಾದ ಮತಗಳನ್ನು ದೃಢೀಕರಿಸುವ ಸಲುವಾಗಿ ವಿವಿಪ್ಯಾಟ್​ಗಳನ್ನು ಕೂಡ ಚುನಾವಣಾ ಆಯೋಗ ಅಳವಡಿಸಿದೆ.

ಚುನಾವಣಾ ದಿನದ ನಂತರ ಭಾರೀ ಭದ್ರತೆಯ ನಡುವೆ ಇವಿಎಂ ಯಂತ್ರಗಳನ್ನು ಶೇಖರಿಸಿಡಲಾಗುತ್ತದೆ. ಮತದಾನ ಮುಗಿದ ನಂತದ ಮತಗಳ ಎಣಿಕೆಗಾಗಿ ಒಂದು ದಿನ ನಿಗದಿಪಡಿಸಲಾಗುತ್ತದೆ. ಮತಗಳನ್ನು ತಾಳೆ ಲೆಕ್ಕದಲ್ಲಿ ವಿಶಿಷ್ಟವಾಗಿ ದಾಖಲು ಮಾಡಲಾಗುತ್ತದೆ. ಬಳಿಕ ಕೆಲವೇ ಗಂಟೆಗಳಲ್ಲಿ ಜನ ನೀಡಿದ ತೀರ್ಮಾನ ಹೊರಬೀಳುತ್ತದೆ. ಗೆದ್ದ ಉಮೇದುವಾರನನ್ನು ಆಯಾ ಚುನಾವಣಾ ಕ್ಷೇತ್ರದ ವಿಜಯಿ ಎಂದು ಘೋಷಿಸಲಾಗುತ್ತದೆ.

ಇನ್ನು ಅತಿಹೆಚ್ಚು ಸ್ಥಾನಗಳನ್ನು ಗೆದ್ದು ದೊಡ್ಡಪಕ್ಷ ಅಥವಾ ಒಂದಷ್ಟು ಪಕ್ಷಗಳ ಒಕ್ಕೂಟವನ್ನು ಹೊಸ ಸರ್ಕಾರದ ರಚನೆಗೆಂದು ರಾಷ್ಟ್ರಪತಿಯವರು ಆಹ್ವಾನಿಸುತ್ತಾರೆ. ಬಳಿಕ ಸದನದಲ್ಲಿ ಯಾವ ಪಕ್ಷ ವಿಶ್ವಾಸಮತ ಯಾಚನೆಯಲ್ಲಿ ತನ್ನ ಬಹುಮತವನ್ನು ಸಾಬೀತುಪಡಿಸುತ್ತದೋ ಅದು ಹೊಸ ಸರ್ಕಾರ ರಚಿಸಬಹುದು.

ಒಂದು ವೇಳೆ ಸದನದಲ್ಲಿ ಬಹುಮತ ಸಾಬೀತುಪಡಿಸಲು ಸಾಧ್ಯವಾಗದಿದ್ದರೆ, ಎರಡನೆಯ ಸ್ಥಾನದಲ್ಲಿದ್ದ ಪಕ್ಷ ಅಥವಾ ಒಕ್ಕೂಟಕ್ಕೆ ರಾಷ್ಟ್ರಪತಿಗಳು ಅವಕಾಶ ಕಲ್ಪಿಸಬಹುದು. ಅಥವಾ ಮರುಚುನಾವಣೆ ಅಥವಾ ರಾಷ್ಟ್ರಪತಿ ಆಳ್ವಿಕೆಯನ್ನೂ ಹೇರಬಹುದು. ಅದು ರಾಷ್ಟ್ರಪತಿಗಳ ವಿವೇಚನೆಗೆ ಬಿಟ್ಟ ವಿಚಾರವಾಗಿರುತ್ತದೆ. ಇದೇ ಮೇ 23ರಂದು 17ನೇ ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬೀಳಲಿದ್ದು, ಅಧಿಕಾರ ಚುಕ್ಕಾಣಿ ಯಾರು ಹಿಡಿಯಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ. (ಎನ್.ಬಿ)

Leave a Reply

comments

Related Articles

error: