ಕರ್ನಾಟಕಪ್ರಮುಖ ಸುದ್ದಿ

ಮೋದಿಗೆ ಅಭಿನಂದನೆ, ರಾಜ್ಯ ಕಾಂಗ್ರೆಸ್​ ನಾಯಕರ ಬಗ್ಗೆ ದೇವೇಗೌಡರ ಬೇಸರ

ಬೆಂಗಳೂರು (ಮೇ 23): ಲೋಕಸಭಾ ಚುನಾವಣೆಯಲ್ಲಿ ಅನಿರೀಕ್ಷಿತ ಸೋಲು ಕಂಡಿರುವ ಸಮ್ಮಿಶ್ರ ಸರ್ಕಾರ ತೀವ್ರ ಕಂಗೆಟ್ಟಿದೆ. ರಾಜ್ಯದಲ್ಲಿ 12-13 ಸ್ಥಾನ ಗೆಲ್ಲುವ ನಿರೀಕ್ಷೆ ಇಟ್ಟುಕೊಂಡಿದ್ದ ಕಾಂಗ್ರೆಸ್​ಗೆ ಬರಸಿಡಿಲು ಬಡಿದಂತಾಗಿದೆ. ಬಿಜೆಪಿ ಹೆಚ್ಚಿನ ಕ್ಷೇತ್ರಗಳಲ್ಲಿ ಗೆದ್ದು ಮೇಲುಗೈ ಸಾಧಿಸಿದೆ. ಇನ್ನೂ ಜೆಡಿಎಸ್​ ನಾಯಕರು ಕಾಂಗ್ರೆಸ್​ ಜೊತೆ ಮೈತ್ರಿ ಮಾಡಿಕೊಂಡು ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿದ್ದಕ್ಕೆ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

ಜೆಡಿಎಸ್​ ವರಿಷ್ಠ, ಮಾಜಿ ಪ್ರಧಾನಿ ದೇವೇಗೌಡ ಕಾಂಗ್ರೆಸ್​ ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೈತ್ರಿ ಮಾಡಿಕೊಂಡು ಮಂಡ್ಯ ಹಾಗೂ ತುಮಕೂರಿನಲ್ಲಿ ಹೀನಾಯ ಸೋಲು ಅನುಭವಿಸುವಂತಾಯಿತು ಎಂದು ಪಶ್ಚಾತ್ತಾಪ ಪಡುತ್ತಿದ್ಧಾರೆ. ತಮ್ಮ ಮಗ ಸಿಎಂ ಎಚ್​.ಡಿ.ಕುಮಾರಸ್ವಾಮಿ ಬಳಿ ತಮ್ಮ ಸಂಕಟವನ್ನು ಹೇಳಿಕೊಂಡಿದ್ದಾರೆ. ಇವರ ಸಹವಾಸ ಬೇಕಿತ್ತಾ ನಮಗೆ. ಇವರ ಸಹವಾಸದಿಂದ ನಮಗೆ ಈ ಗತಿ ಬಂತಲ್ಲ. ಅವರು ನಮ್ಮನ್ನು ಸಂಪೂರ್ಣವಾಗಿ ಮುಳುಗಿಸಿದರಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಫಲಿತಾಂಶದ ಬಗ್ಗೆ ಚರ್ಚಿಸುವಾಗ ದೇವೇಗೌಡರು ತಮ್ಮ ಮನದ ನೋವನ್ನು ಎಚ್​ಡಿಕೆ ಬಳಿ ಹೇಳಿಕೊಂಡಿದ್ಧಾರೆ. ತುಮಕೂರಿನಲ್ಲಿ ಬಿಜೆಪಿ ಅಭ್ಯರ್ಥಿ ಜಿ.ಎಸ್​.ಬಸವರಾಜು ವಿರುದ್ಧ 12,887 ಮತಗಳ ಅಂತರದಿಂದ ಹೀನಾಯ ಸೋಲು ಕಂಡಿದ್ದಾರೆ. ಮಂಡ್ಯದಲ್ಲಿ ತಮ್ಮ ಮೊಮ್ಮಗ ನಿಖಿಲ್​ ಕುಮಾರಸ್ವಾಮಿ ಪಕ್ಷೇತರ ಅಭ್ಯರ್ಥಿ ಸುಮಲತಾ ವಿರುದ್ಧ ಭಾರೀ ಮತಗಳ ಅಂತರದಿಂದ ಸೋಲು ಅನುಭವಿಸಿದ್ದಾರೆ. ಮೈತ್ರಿ ಅಭ್ಯರ್ಥಿ ನಿಖಿಲ್​ 5,75,740 ಮತಗಳನ್ನು ಪಡೆದರೆ, ಸ್ವತಂತ್ರ ಅಭ್ಯರ್ಥಿ ಸುಮಲತಾ ಬರೋಬ್ಬರಿ 7,01,122 ಮತಗಳನ್ನು ಪಡೆದು ಜಯಭೇರಿ ಬಾರಿಸಿದ್ದಾರೆ.

ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜಯದ ಅಭಿನಂದನೆ ಸಲ್ಲಿಸಿದ್ದಾರೆ.

I thank the voters, leaders, party workers of both @JanataDal_S & @INCIndia and everyone who supported me.Our work towards betterment of the society will never stop.
Congratulations to all the elected MPs.
Congratulations to @narendramodi on the big victory.
H D Devegowda (@H_D_Devegowda) May 23, 2019

ಚುನಾವಣೆಯಲ್ಲಿ ಸಹಕರಿಸಿದ ಮುಖಂಡರಿಗೆ, ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರಿಗೆ ಧನ್ಯವಾದ ಹೇಳಿದ್ದಾರೆ. ಚುನಾಯಿತ ಹೊಸ ಸಂಸದರಿಗೆ ಅಭಿನಂದನೆ ತಿಳಿಸಿದ್ದಾರೆ. ಸಮಾಜದ ಒಳಿತಿಗಾಗಿ ನಮ್ಮ ಕೆಲಸ ನಿಲ್ಲುವುದಿಲ್ಲ ಎಂದು ಟ್ವೀಟ್​ ಮೂಲಕ ತಿಳಿಸಿದ್ದಾರೆ. (ಎನ್.ಬಿ)

Leave a Reply

comments

Related Articles

error: