Uncategorized

ಮಡಿಕೇರಿಯಲ್ಲಿ ಇಫ್ತಾರ್ ಸಂಗಮ : ಎಲ್ಲಾ ಧರ್ಮಗ್ರಂಥಗಳ ಸಾರವನ್ನು ಅರಿತುಕೊಳ್ಳಿ : ಅಕ್ಬರಲಿ ಉಡುಪಿ ಕರೆ

ರಾಜ್ಯ(ಮಡಿಕೇರಿ) ಮೇ 24 : – ಮನುಷ್ಯ ಹುಟ್ಟುವಾಗ ಯಾವುದೇ ಧರ್ಮದೊಂದಿಗೆ ಹುಟ್ಟುವುದಿಲ್ಲ, ಹಾದಿ ತಪ್ಪುವ ಮನುಷ್ಯರನ್ನು ಎಚ್ಚರಿಸುವುದಕ್ಕಾಗಿ ಧರ್ಮಗಳು ರಚನೆಯಾಗಿವೆ. ಧರ್ಮಗಳೆಲ್ಲವೂ ಒಂದೇ ಎನ್ನುವ ಬಾಂಧವ್ಯದ ಸಂದೇಶವನ್ನು ಬಿತ್ತರಿಸಿವೆ, ಹಾಗಾಗಿ ಎಲ್ಲರೂ ಒಂದೇ ಎಂಬ ಭಾವನೆ ಪ್ರತಿಯೊಬ್ಬರಲ್ಲಿ ಮೂಡಬೇಕು ಎಂದು ಕರ್ನಾಟಕ ಜಮಾಅತ್ ಇಸ್ಲಾಮೀ ರಾಜ್ಯ ಸಲಹಾ ಸಮಿತಿ ಸದಸ್ಯ ಅಕ್ಬರಲಿ ಉಡುಪಿ ಕರೆ ನೀಡಿದ್ದಾರೆ.
ನಗರದ ಕಾರುಣ್ಯ ಸದನದಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ವತಿಯಿಂದ ರಂಜಾನ್ ಅಂಗವಾಗಿ ಆಯೋಜಿಸಿದ್ದ ಇಫ್ತಾರ್ ಸಂಗಮ ಕಾರ್ಯಕ್ರಮದಲ್ಲಿ ಪಾಲ್ಗೊಂಡು ರಂಜಾನ್ ಸಂದೇಶ ನೀಡುತ್ತಾ ಅವರು ಮಾತನಾಡಿದರು.
ಸಹೋದರತೆ, ಸಾಮರಸ್ಯ, ಸಮಾನತೆಯಿಂದ ಕೂಡಿ ಬಾಳುವುದನ್ನು ಹೇಳಿಕೊಡುವುದೇ ನಿಜವಾದ ಮನುಷ್ಯ ಧರ್ಮ, ಇಂತಹ ಧರ್ಮದ ಪಾಲನೆ ಅಗತ್ಯ ಎಂದು ಹೇಳಿದರು.
`ಭಗವದ್ಗೀತೆ, ಬೈಬಲ್, ಕುರಾನ್ ಗ್ರಂಥಗಳು ಇನ್ನೊಂದು ಧರ್ಮವನ್ನು ನೋಯಿಸುವಂತಹ ಬೋಧನೆ ಮಾಡಿಲ್ಲ. ಜಾತಿ ಬೇಧ ಮರೆತು ಎಲ್ಲವನ್ನು ತಿಳಿದುಕೊಳ್ಳಬೇಕು. ಎಲ್ಲಾ ಧರ್ಮಗ್ರಂಥಗಳ ಸಾರವನ್ನು ತಿಳಿದವರು ಮಾತ್ರ ಸ್ವಸ್ಥ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ರಂಜಾನ್ 1 ತಿಂಗಳ ಉಪವಾಸ ದೇವರ ಭಯದೊಂದಿಗೆ ನಿಷ್ಠೆಯಿಂದ ಬದುಕಲು ಕಲಿಸುತ್ತದೆ. ಉಪವಾಸ ಬಡತನ, ಹಸಿವು, ನೋವುಗಳನ್ನು ಕಲಿಸುವುದರ ಜತೆಗೆ ಮಾತು ಹಾಗೂ ಮನಸ್ಸಿಗೂ ಹತೋಟಿ ನೀಡುವುದರಿಂದ ಉಪವಾಸಕ್ಕೆ ಹೆಚ್ಚು ಮಹತ್ವ ನೀಡಲಾಗಿದೆ ಎಂದು ತಿಳಿಸಿದರು.
ಜಮಾಅತ್ ಇಸ್ಲಾಮೀ ಹಿಂದ್ ಮಂಗಳೂರು ವಲಯ ಸಂಚಾಲಕ ಯು. ಜನಾಬ್ ಅಬ್ದುಲ್ ಸಲಾಮ್ ಮಾತನಾಡಿ, ಮುಸ್ಲಿಂ ಸಮುದಾಯ ಒಂದು ತಿಂಗಳು ಅತ್ಯಂತ ಪಾವಿತ್ರ್ಯದಿಂದ ಪಾಲಿಸಿದ ವ್ರತಾಚರಣೆ ಜೊತೆಗೆ ವ್ಯಕ್ತಿತ್ವ, ವೈಯಕ್ತಿಕ ಜೀವನದಲ್ಲೂ ಸುಧಾರಣೆ ಕಾಣಬೇಕಿದೆ’ ಎಂದು ಹೇಳಿದರು.
ಉಪವಾಸದ ಅರ್ಥವೇ ಭಗವಂತನ ಸಾಮೀಪ್ಯ. ಬದುಕನ್ನು ಪ್ರೀತಿಯಿಂದ ಆರಂಭಿಸಿ ಪ್ರೀತಿಯಿಂದಲೇ ಮುಗಿಸುವುದರ ಜತೆಗೆ ಸಮಾಜದ ಒಳಿತಿಗಾಗಿ ಬದುಕಬೇಕಿದೆ ಎಂದು ಸಲಹೆ ನೀಡಿದರು.
ಹಿರಿಯ ಪತ್ರಕರ್ತ ಜಿ.ರಾಜೇಂದ್ರ ಮಾತನಾಡಿ, ಎಲ್ಲಾ ಧರ್ಮಗಳ ಉದ್ದೇಶವು ಮನುಷ್ಯ ಹೃದಯಗಳನ್ನು ಒಂದುಗೂಡಿಸುವುದಾಗಿದೆ. ಎಲ್ಲರೊಂದಿಗೆ ಸಾಮರಸ್ಯದಿಂದ ಬಾಳಿದಾಗ ಮಾತ್ರ ಉತ್ತಮ ಬದುಕು ಮತ್ತು ಸಮಾಜ ನಿರ್ಮಾಣಕ್ಕೆ ಸಾಧ್ಯವೆಂದು ಅಭಿಪ್ರಾಯಪಟ್ಟರು. ಯುವಕರೇ ಹೆಚ್ಚಿರುವ ದೇಶದಲ್ಲಿ ಯುವಕರಿಗೆ ಉತ್ತಮ ಮಾರ್ಗದರ್ಶನವನ್ನು ಶಿಕ್ಷಕರು, ಪೋಷಕರು ಸರಿಯಾದ ಸಮಯದಲ್ಲೇ ನೀಡಬೇಕು, ಶಾಲಾ, ಕಾಲೇಜು ಹಂತದಲ್ಲಿ ವಿದ್ಯಾರ್ಥಿಗಳಿಗೆ ಪರಿಪೂರ್ಣ ಶಿಕ್ಷಣವನ್ನು ಕಲಿಸಿ ಉತ್ತಮ ಪ್ರಜೆಯಾಗಿ ಬದುಕುವುದನ್ನು ಹೇಳಿಕೊಡಬೇಕೆಂದು ಕಿವಿಮಾತು ಹೇಳಿದರು.
ಫೀ.ಮಾ.ಕೆ.ಎಂ.ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲ ಟಿ.ಡಿ.ತಿಮ್ಮಯ್ಯ ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ಮಾನವೀಯತೆ ಮರೆಯಾಗುತ್ತಿದೆ. ಬಡವ, ಶ್ರೀಮಂತ, ಜಾತಿ ಧರ್ಮಗಳೆಂದು ವಿಂಗಡಣೆ ಮಾಡಿ ಜನ ಸ್ವಾರ್ಥ ಬದುಕು ಕಾಣುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಎಲ್ಲಾ ಧರ್ಮಗಳು ಮಾನವ ಧರ್ಮವೇ ದೊಡ್ಡದು ಎಂದು ಹೇಳುತ್ತವೆ. ಇದನ್ನು ಪಾಲಿಸುವ ಮೂಲಕ ಮಾನವೀಯತೆಯ ಅರ್ಥವನ್ನು ಕಂಡುಕೊಳ್ಳಬೇಕೆಂದು ಕಿವಿಮಾತು ಹೇಳಿದರು.
ಮಡಿಕೇರಿ ವೈದ್ಯಕೀಯ ಕಾಲೇಜಿನ ಉಪನ್ಯಾಸಕ ಡಾ.ಸತೀಶ್ ಶಿವಮಲ್ಲಯ್ಯ, ಜಮೀಯ ಮಸೀದಿ ಅಧ್ಯಕ್ಷ ಮಹಮ್ಮದ್ ಇಮ್ರಾನ್, ಎಂ. ಅಬ್ದುಲ್ಲಾ, ಎಂ.ಎಂ.ಹಾರೂನ್, ಜಮಾಅತೆ ಇಸ್ಲಾಮೀ ಹಿಂದ್‍ನ ಪ್ರಮುಖರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಎಲ್ಲಾ ಧರ್ಮೀಯರು ಸಹಬೋಜನ ಮಾಡುವ ಮೂಲಕ ಇಫ್ತಾರ್ ಸಂಗಮವನ್ನು ಅರ್ಥಪೂರ್ಣಗೊಳಿಸಿದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: