ಕರ್ನಾಟಕಪ್ರಮುಖ ಸುದ್ದಿ

ಮಂಡ್ಯ-ತುಮಕೂರು ಸೋಲು : ಜೆಡಿಎಸ್​ ನಾಯಕರಿಗೆ ಎಚ್​ಡಿಕೆ ಕ್ಲಾಸ್​

ಬೆಂಗಳೂರು (ಮೇ 24): ಮಂಡ್ಯ ಹಾಗೂ ತುಮಕೂರಿನಲ್ಲಿ ಜೆಡಿಎಸ್​ ಅಭ್ಯರ್ಥಿಗಳಾದ ನಿಖಿಲ್​ ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ಎಚ್​​​ಡಿ ದೇವೇಗೌಡ ಸ್ಪರ್ಧಿಸಿ ಪರಾಭವಗೊಂಡಿದ್ದರು. ದೊಡ್ಡ ಗೆಲುವಿನ ನಿರೀಕ್ಷೆಯಲ್ಲಿದ್ದ ಗೌಡರ ಕುಟುಂಬಕ್ಕೆ ಶಾಕ್​ ಕಾದಿತ್ತು. ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್​ ವಿರುದ್ಧ ನಿಖಿಲ್ ಕುಮಾರಸ್ವಾಮಿ​ ಹಾಗೂ ತುಮಕೂರು ಬಿಜೆಪಿ ಅಭ್ಯರ್ಥಿ ಬಸವರಾಜ್​ ವಿರುದ್ಧ ದೇವೇಗೌಡ ಸೋತಿದ್ದರು. ಈ ವಿಚಾರಕ್ಕೆ ಸಂಬಂಧಿಸಿ ಎಚ್​ಡಿಕೆ ಜೆಡಿಎಸ್​ ನಾಯಕರಿಗೆ ಫುಲ್​ ಕ್ಲಾಸ್​ ತೆಗೆದುಕೊಂಡಿದ್ದಾರೆ.

ನಿನ್ನೆ ಬೆಳಗ್ಗೆ ಮತ ಎಣಿಕೆ ವೇಳೆ ನಿಖಿಲ್​-ಸುಮಲತಾ ನಡುವೆ ಹಾವು ಏಣಿ ಆಟ ಮುಂದುವರೆದಿತ್ತು. ಆದರೆ, ಮಧ್ಯಾಹ್ನ ವೇಳೆಗೆ ಸುಮಲತಾ ಲೀಡ್​ ಕಾಯ್ದುಕೊಂಡರು. ಸುಮಾರು 1.30 ಲಕ್ಷ ಮತಗಳ ಅಂತರದಿಂದ ಅವರು ಗೆಲುವು ಸಾಧಿಸಿದ್ದರು. ಅಲ್ಲದೆ, ದೇವೇಗೌಡ 12 ಸಾವಿರ ಮತಗಳ ಅಂತರದಿಂದ ಪರಾಭವಗೊಂಡಿದ್ದರು. ಈ ಬೆಳವಣಿಗೆ ಬೆನ್ನಲ್ಲೇ ಎಚ್​ಡಿಕೆ ತಮ್ಮ ನಿವಾಸದಲ್ಲಿ ಸಭೆ ಕರೆದಿದ್ದರು.

ಮಂಡ್ಯ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು, ಮಂಡ್ಯ ಮಾಜಿ ಸಂಸದ ಶಿವರಾಮೇಗೌಡ, ಸಾ.ರಾ.ಮಹೇಶ್ ಮೊದಲಾದವರು ಸಭೆಯಲ್ಲಿ ಪಾಲ್ಗೊಂಡಿದ್ದರು. ಸಂಜೆ ಆರಂಭವಾದ ಸಭೆ ತಡರಾತ್ರಿಯವರೆಗೂ ನಡೆದಿತ್ತು. ಈ ವೇಳೆ ಎಚ್​ಡಿಕೆ ಹಾಗೂ ಎಚ್​ಡಿಡಿ ಜೆಡಿಎಸ್​​ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರಂತೆ. ನಿಮ್ಮನ್ನು ನಂಬಿ ಇಷ್ಟು ದೊಡ್ಡ ಜವಾಬ್ದಾರಿ ನೀಡಿದ್ದರೂ, ಅದನ್ನು ಸರಿಯಾಗಿ ನಿರ್ವಹಿಸಿಲ್ಲ ಎಂದು ಕುಮಾರಸ್ವಾಮಿ ಹಾಗೂ ದೇವೇಗೌಡರು ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗಿದೆ. (ಎನ್.ಬಿ)

Leave a Reply

comments

Related Articles

error: