ಮೈಸೂರು

ಅನುತ್ತೀರ್ಣತೆಯನ್ನು ಉತ್ತೀರ್ಣತೆಯಾಗಿ ಬದಲಾವಣೆ ಮಾಡುವುದೇ ಬದುಕಿನ ಒಂದು ದೊಡ್ಡ ಕಲೆ : ಪ್ರೊ.ಸಿ.ನಾಗಣ್ಣ

ದ್ವಿತೀಯ ಪಿಯುಸಿ ಅನುತ್ತೀರ್ಣ ವಿದ್ಯಾರ್ಥಿಗಳಿಗೆ ಉಚಿತ ಬೋಧನಾ ತರಗತಿಗಳ ಶುಭ ಹಾರೈಕೆ

 ಮೈಸೂರು,ಮೇ.25:- ಅನುತ್ತೀರ್ಣತೆಯನ್ನು ಉತ್ತೀರ್ಣತೆಯಾಗಿ ಬದಲಾವಣೆ ಮಾಡುವುದೇ ಬದುಕಿನ ಒಂದು ದೊಡ್ಡ ಕಲೆ ಎಂದು ವಿಮರ್ಶಕ ಪ್ರೊ.ಸಿ.ನಾಗಣ್ಣ ತಿಳಿಸಿದರು.

ಅವರಿಂದು  ಚಾಮರಾಜ ಜೋಡಿ ರಸ್ತೆಯಲ್ಲಿರುವ ಬಾಲಕಿಯರ ಸರ್ಕಾರಿ ಪ.ಪೂ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ, ಅಖಿಲ ಕರ್ನಾಟಕ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಹಿತರಕ್ಷಣಾ ಸಂಘ,ಮೈಸೂರು ಜಿಲ್ಲಾ ಪಿ.ಯು ಒಕ್ಕೂಟ ವತಿಯಿಂದ ದ್ವಿತೀಯ ಪಿಯುಸಿ ಅನುತ್ತೀರ್ಣ ವಿದ್ಯಾರ್ಥಿಗಳಿಗೆ ಉಚಿತ ಬೋಧನಾ ತರಗತಿಗಳ ಶುಭ ಹಾರೈಕೆಯ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರಪಂಚ ಯಾವತ್ತೂ ಕೂಡ ಗೆದ್ದವರ ಪರವಾಗಿರತ್ತೆ. ಗೆದ್ದವರನ್ನು ಹೊಗಳುವ, ಬೆನ್ನುತಟ್ಟಿ, ಭುಜದ ಮೇಲೆ ಹೊತ್ತುಕೊಂಡು ಸಂಭ್ರಮಿಸುವುದನ್ನು ರಾಜಕೀಯದಲ್ಲಿ ನಾವು ಕಾಣುತ್ತೇವೆ. ರಾಜಕೀಯದಲ್ಲಿ ಸೋಲನ್ನೇ ಕಾಣದ ಘಟಾನುಘಟಿ ಹಿರಿಯ ರಾಜಕಾರಣಿಗಳು ಸೋತು ಸುಣ್ಣವಾಗಿ ಮನೆಗೆ ಹೋಗಿರುವುದನ್ನೂ ನೋಡಿದ್ದೇವೆ. ಇಂದು ಸೋತವರ ಬಗ್ಗೆ ಮಾತನಾಡುವುದು ಬಹಳ ಉಚಿತ ಎಂದರು. ಸೋತವರನ್ನು ಸಂತೈಸುವ, ಸಾಂತ್ವನ ಹೇಳುವ ಮತ್ತೆ ಎದ್ದು ನಿಲ್ಲುವಂತೆ ಬೆನ್ನುತಟ್ಟಿ ಪ್ರೋತ್ಸಾಹಿಸುವ ಸಂಖ್ಯೆ ಬಹಳ ವಿರಳ. ಗೆದ್ದವರನ್ನು ವೈಭವೋಪೇತ ಮೆರವಣಿಗೆ ಮಾಡುವುದು ಸಹಜ. ಸೋತವರನ್ನು ಸಂತೈಸಿ ಶಕ್ತಿ ತುಂಬಿ ಮುನ್ನಡೆಯುವಂತೆ ಮಾಡುತ್ತ ಇರುವವರು ಕಡಿಮೆ.  ಈ ಸಂಸ್ಥೆ ಸೋತವರನ್ನು ಸಂತೈಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು. ವಿದ್ಯಾರ್ಥಿಗಳು ಓದಿನಲ್ಲಿ ಯಾಕೆ ಸೋಲ್ತಾರೆ? ಮನೆಯಲ್ಲಿ ಅನುಕೂಲಕರ ವಾತಾವರಣ ಇಲ್ಲದಿರಬಹುದು. ಅಥವಾ ಮನೆಯ ಹಿರಿಯರಿಂದ ಪ್ರೋತ್ಸಾಹ ಕಡಿಮೆ ಇರಬಹುದು. ವಿದ್ಯಾರ್ಥಿಗಳಲ್ಲಿ ಏಕಾಗ್ರತೆಯ ಕೊರತೆ, ಸಹವಾಸ ದೋಷ ಇರಬಹುದು. ಇನ್ನೂ ಹಲವು ಕಾರಣಗಳಿರಬಹುದು. ಇಲ್ಲಿ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ನೀಡುವವರೆಲ್ಲ ಸೇವೆಗಾಗಿ ತೊಡಗಿಸಿಕೊಂಡ ಅಧ್ಯಾಪಕರುಗಳು.  ಮಾಮೂಲಿ ಅಧ್ಯಾಪಕರ ಜವಾಬ್ದಾರಿಯ ಜೊತೆಗೆ ಅಡಿಶನಲ್ ಆಗಿ ಈ ಜವಾಬ್ದಾರಿ ತಗೊಂಡು ಶೈಕ್ಷಣಿಕ, ಸಾಮಸ್ಕೃತಿಕ, ಸಾಮಾಜಿಕ, ನೈತಿಕ ಹೊಣೆಗಾರಿಕೆಯಿಂದ ಉಚಿತವಾಗಿ ಪಾಠ ಮಾಡುವುದು ಈ ಕಾಲದಲ್ಲಿ ಅತ್ಯಂತ ಅನುಕರಣೀಯ ಎಂದರು. ವಿದ್ಯಾರ್ಥಿಗಳಿಗೆ ಈಗ ಹದಿಹರೆಯ ಮನಸ್ಸು ಚಂಚಲ. ಜೀವನದ ಗುರಿಯ ಬಗ್ಗೆ ಅಷ್ಟು ಅರ್ಥ ಆಗಲ್ಲ. ಮನೆಯಲ್ಲಿ ಹಿರಿಯರು ಒಂದು ಮಾದರಿಯ ಬದುಕು ಬದುಕುತ್ತಿದ್ದಲ್ಲಿ ಅವರು ಅನುಸರಿಸುತ್ತಾರೆ. ಮನೆಯಲ್ಲಿ ಮಕ್ಕಳಿಗೆ ಪ್ರತ್ಯೇಕ ಕೊಠಡಿ ಇಲ್ಲದೇ, ಟಿವಿಯಿರುವ ಹಾಲ್ ನಲ್ಲಿಯೇ ಓದುವುದು ಏಕಾಗ್ರತೆಯನ್ನು ತರಲಾರದು ಎಂದರು. ಹೆಣ್ಣುಮಕ್ಕಳು ಬದಲಾದ ಪ್ರಪಂಚದಲ್ಲಿ ಧಾರವಾಹಿ, ಬಿಗ್ ಬಾಸ್, ಕಷ್ಟಪಡದೇ ಐದು ಪ್ರಶ್ನೆಗಳಿಗೆ ಉತ್ತರಿಸಿ ಕೋಟ್ಯಂತರ ರೂ.ಗಳಿಸುವ ಕೋಟ್ಯಾಧಿಪತಿ ಕಾರ್ಯಕ್ರಮ ಪರೀಕ್ಷೆಯಲ್ಲಿ ಅನುತ್ತೀರ್ಣರಾಗುವಂತೆ ಮಾಡಬಹುದು. ಉತ್ತೀರ್ಣತೆ ಸೋಲಿನ ಅನುಭವದಿಂದ ಬಿಡುಗಡೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಹೆಚ್.ಎನ್.ಸತೀಶ್ ಕುಮಾರ್, ಗೌರವಾಧ್ಯಕ್ಷ ಬಾಲಸುಬ್ರಹ್ಮಣ್ಯಂ ಎಸ್, ಪ್ರಾಂಶುಪಾಲರಾದ ರತ್ನ, ಹುಣಸೂರು ಬಾಲಕಿಯರ ಪ.ಪೂ ಕಾಲೇಜಿನ ಪ್ರಾಂಶುಪಾಲರಾದ ಚೆಲುವಯ್ಯ, ಸಿದ್ದರಾಜು, ಹೆಚ್.ಎಂ.ನಂಜುಂಡಸ್ವಾಮಿ, ಪರಿಮಳ, ಜನಾರ್ದನ ಮತ್ತಿತರರು ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: