ಕ್ರೀಡೆಪ್ರಮುಖ ಸುದ್ದಿಮೈಸೂರು

ಮುಂಬೈಗೆ ರೋಚಕ ಗೆಲುವು : 33-29 ಅಂತರದಲ್ಲಿ ಪಾಂಡಿಚೇರಿ ತಂಡವನ್ನು ಬಗ್ಗು ಬಡಿದ ಮುಂಬೈ

ಮೈಸೂರು,ಮೇ.27:- ಮಣಿವೀರ್ ಕಾಂತ್ ಅವರ ಅತ್ಯುತ್ತಮ ಪ್ರದರ್ಶನದ ನೆರವಿನಿಂದ ಮಿಂಚಿದ ಮುಂಬಯಿ ಚೇ ರಾಜೆ ತಂಡ ಇಲ್ಲಿ ನಡೆಯುತ್ತಿರುವ ಚೊಚ್ಚಲ ಆವೃತ್ತಿಯ ಇಂಡೊ-ಇಂಟರ್ ನ್ಯಾಷನಲ್ ಪ್ರೀಮಿಯರ್ ಕಬಡ್ಡಿ ಲೀಗ್‍ನ ತನ್ನ 7ನೇ ಪಂದ್ಯದಲ್ಲಿ ಪಾಂಡಿಚೇರಿ ಪ್ರೆಡಟರ್ಸ್ ವಿರುದ್ಧ ರೋಚಕ ಗೆಲುವು ದಾಖಲಿಸಿತು. ಇದರೊಂದಿಗೆ ಮೂರನೇ ಜಯ ಗಳಿಸಿದ ಮುಂಬೈ ತಂಡ ಅಂಕವನ್ನು 8ಕ್ಕೆ ಹೆಚ್ಚಿಸಿಕೊಂಡಿತು.

ಇಲ್ಲಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ಮುಂಬೈ ತಂಡ 33-29ಅಂಕಗಳಿಂದ ಪಾಂಡಿಚೇರಿ ತಂಡಕ್ಕೆ ಸೋಲುಣಿಸಿತು. 23-19ರ ಮುನ್ನಡೆಯೊಂದಿಗೆ ನಾಲ್ಕನೇ ಹಾಗೂ ಅಂತಿಮ ಕ್ವಾರ್ಟರ್ ಆರಂಭಿಸಿದ ಮುಂಬೈ ಎದುರಾಳಿ ತಂಡದ ಮೇಲೆ ಇನ್ನಷ್ಟು ಒತ್ತಡ ಹೇರುವಲ್ಲಿ ಯಶ ಕಂಡಿತು. 6-2ರಲ್ಲಿ ಅಂತರ ಕಾಯ್ದುಕೊಂಡ ರಾಜೇ ಆಟಗಾರರು, 10-10ರಲ್ಲಿ ಮರು ಹೋರಾಟ ಎದುರಿಸಿದರು. ಆದರೆ ಇದು ಮುಂಬೈ ತಂಡದ ಮೇಲೆ ಯಾವುದೇ  ಪರಿಣಾಮ ಬೀರಲಿಲ್ಲ.

ಮುಂಬೈ ಪರ ಮಣಿವೀರ್ ಕಾಂತ್ (8 ಅಂಕ) ಮತ್ತು ಮಹೇಶ್ ಮಗ್ದಾನ್(6) ಮಿಂಚಿದರೆ, ಪಾಂಡಿಚೇರಿ ಪರ ಆರ್.ಸುರೇಶ್ ಕುಮಾರ್ (10) ಏಕಾಂಗಿ ಹೋರಾಟ ನಡೆಸಿದರು. ಇದಕ್ಕೂ ಮುನ್ನ ಮೊದಲ ಕ್ವಾರ್ಟರ್‍ನಲ್ಲಿ ಉಭಯ ತಂಡಗಳಿಂದ ತೀವ್ರ ಪೈಪೋಟಿ ಏರ್ಪಟ್ಟಿತು. ಮುನ್ನಡೆಗೆ ಇತ್ತಂಡಗಳಿಂದ ಹರಸಾಹಸ ನಡೆಸಿದರೂ ಸಾಧ್ಯವಾಗಲಿಲ್ಲ. ಹೀಗಾಗಿ 6-6ರಲ್ಲಿ ಮೊದಲ ಕ್ವಾರ್ಟರ್ ಕೊನೆಗೊಂಡಿತು. ಆದರೆ ದ್ವಿತೀಯ ಕ್ವಾರ್ಟರ್ ಇದಕ್ಕೆ ಹೊರತಾಗಿತ್ತು. ದಾಳಿ ಮತ್ತು ರಕ್ಷಣೆಯಲ್ಲಿ ಸಂಘಟಿತ ಕಾರ್ಯತಂತ್ರ ರೂಪಿಸಿದ ಮುಂಬೈ ತಂಡ 10-6ರಲ್ಲಿ ಪ್ರಭುತ್ವ ಮೆರೆಯಿತು. ಇದರಿಂದ ಒತ್ತಡಕ್ಕೆ ಸಿಲುಕಿದ ಪಾಂಡಿಚೇರಿ ಪ್ರೆಡಟರ್ಸ್ ಹಿನ್ನಡೆ ತಗ್ಗಿಸಲು ಮೂರನೇ ಕ್ವಾರ್ಟರ್‍ನಲ್ಲಿ ಹರಸಾಹಸ ನಡೆಸಿದರು. ಆದರೆ ತಂಡದ ಹೋರಾಟ 7-7ಕ್ಕೆ ಸೀಮಿತಗೊಂಡಿತು.

ಡೆಲ್ಲಿ ಗೆಲುವಿನ ನೋಟ

ಶನಿವಾರ ನಡೆದ `ಬಿ’ ಗುಂಪಿನ ಪಂದ್ಯದಲ್ಲಿ ಅಂಕಪಟ್ಟಿಯ ಅಗ್ರಸ್ಥಾನಿ ಡೀಲರ್ ಡೆಲ್ಲಿ ತಂಡ 40-35 ಅಂಕಗಳಿಂದ ಹರಿಯಾಣ ಹೀರೋಸ್ ವಿರುದ್ಧ ಜಯ ಗಳಿಸುವುದರೊಂದಿಗೆ ತನ್ನ ಗೆಲುವಿನ ನಾಗಲೋಟವನ್ನು ಮುಂದುವರಿಸಿದೆ.

ಮೊದಲೆರಡು ಕ್ವಾರ್ಟರ್‍ಗಳಲ್ಲಿ 7-11, 7-13ರಲ್ಲಿ ಹಿನ್ನಡೆ ಅನುಭವಿಸಿದ ಡೆಲ್ಲಿ ಆಟಗಾರರು, ಮೂರು ಮತ್ತು ನಾಲ್ಕನೇ ಕ್ವಾರ್ಟರ್‍ನಲ್ಲಿ ತಿರುಗೇಟು ನೀಡಿದರು. ದಾಳಿ ಮತ್ತು ರಕ್ಷಣಾ ವಿಭಾಗದಲ್ಲಿ ಲಯ ಕಂಡುಕೊಂಡ ಡೀಲರ್ ತಂಡ ಮೂರನೇ ಕ್ವಾರ್ಟರ್‍ನಲ್ಲಿ 14-6ರಲ್ಲಿ ಸಂಪೂರ್ಣ ಮೇಲುಗೈ ಸಾಧಿಸಿತು. ನಾಲ್ಕನೇ ಕ್ವಾರ್ಟರ್‍ನಲ್ಲೂ ಇದೇ ಪ್ರದರ್ಶನ ಕಾಯ್ದುಕೊಂಡ ಡೆಲ್ಲಿ 12-5ರಲ್ಲಿ ಅಂತರ ಕಾಯ್ದುಕೊಂಡು ಐದು ಅಂಕಗಳಿಂದ ಜಯಭೇರಿ ಮೊಳಗಿಸಿತು. ಇದರೊಂದಿಗೆ ಆಡಿದ ಏಳು ಪಂದ್ಯಗಳಲ್ಲಿ ಡೆಲ್ಲಿ 13 ಅಂಕ ಗಳಿಸಿ ಅಗ್ರಸ್ಥಾನವನ್ನು ಇನ್ನಷ್ಟು ಭದ್ರಪಡಿಸಿಕೊಂಡಿತು.

ಮತ್ತೊಂದು ಪಂದ್ಯದಲ್ಲಿ ಪುಣೆ ಪ್ರೈಡ್ ತಂಡ 42-28 ಅಂಕಗಳಿಂದ ತೆಲುಗು ಬುಲ್ಸ್‍ಗೆ ಸೋಲುಣಿಸಿತು. ಆರಂಭದಲ್ಲೇ ಬಿರುಸಿನ ಆಟ ಪ್ರದರ್ಶಿಸಿದ ಪುಣೆ ಮೊದಲೆರಡು ಕ್ವಾರ್ಟರ್‍ಗಳಲ್ಲಿ ಕ್ರಮವಾಗಿ 12-6, 13-5ರಲ್ಲಿ ಮೇಲುಗೈ ಸಾಧಿಸಿತು. ಬಳಿಕ ಎದುರಾಳಿ ತಂಡದಿಂದ ಪ್ರತಿರೋಧ ಎದುರಿಸಿದರೂ 8-7 ಮತ್ತು 9-10ರಲ್ಲಿ ಹೋರಾಟ ಸಂಘಟಿಸಿ ಪಂದ್ಯ ಗೆದ್ದುಕೊಂಡಿತು. ಇದರೊಂದಿಗೆ ಆಡಿದ ಏಳು ಪಂದ್ಯಗಲ್ಲಿ ಪುಣೆ 12 ಅಂಕ ತನ್ನಾದಾಗಿಸಿಕೊಂಡರೆ, ಬುಲ್ಸ್ ತಂಡ ಆರನೇ ಸೋಲಿಗೆ ತುತ್ತಾಯಿತು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: