ಪ್ರಮುಖ ಸುದ್ದಿ

ಹವಾಮಾನ ಮುನ್ಸೂಚನೆ ಮಾಹಿತಿ “ವರುಣ ಮಿತ್ರ”ದಲ್ಲಿ : ಸೂಕ್ಷ್ಮ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಭೇಟಿ

ರಾಜ್ಯ( ಮಡಿಕೇರಿ) ಮೇ 27:- ಗ್ರಾಮ ಪಂಚಾಯಿತಿ ಮಟ್ಟದ ಮಳೆ ಮಾಪನ ಕೇಂದ್ರಗಳು ಹಾಗೂ ಹೋಬಳಿ ಮಟ್ಟದ ಹವಾಮಾನ ಮಾಪನ ಕೇಂದ್ರಗಳಿಂದ ಸಂಗ್ರಹಿಸಲ್ಪಟ್ಟ ಹವಾಮಾನ ಸಂಬಂಧಿತ ಮಾಹಿತಿ ಹಾಗೂ ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ಗಣಕೀಕೃತ ಮಾದರಿಗಳ ಮೂಲಕ ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ಮಟ್ಟದ ಹವಾಮಾನ ಮುನ್ಸೂಚನೆಯನ್ನು ನೇರವಾಗಿ ತಲುಪಿಸಲು “ವರುಣ ಮಿತ್ರ” 9243345433 (24*7) ಸಹಾಯವಾಣಿಯು 24 ಗಂಟೆಯೂ ಕಾರ್ಯನಿರ್ವಹಿಸಲಿದೆ.

ರೈತ ಬಂಧುಗಳು ‘ವರುಣ ಮಿತ್ರ’ ಸಹಾಯವಾಣಿಯಿಂದ ಲಭ್ಯವಿರುವ ಮಾಹಿತಿಯನ್ನು ಆಧರಿಸಿ ತಮ್ಮ ಕೃಷಿ ಚಟುವಟಿಕೆ ರೂಪಿಸಿಕೊಳ್ಳುವುದರ ಮೂಲಕ ಹವಾಮಾನ ವೈಪರೀತ್ಯದಿಂದ ಆಗಬಹುದಾದ ಬೆಳೆ ನಾಶವನ್ನು ತಡೆಗಟ್ಟಬಹುದಾಗಿದೆ ಹಾಗೂ ಸಮರ್ಪಕ ಬೆಳೆ ನಿರ್ವಹಣೆಯ ಮೂಲಕ ಇಳುವರಿ ಹೆಚ್ಚಿಸಿಕೊಳ್ಳಬಹುದಾಗಿದೆ.

ರೈತರು ‘’ವರುಣ ಮಿತ್ರ’’ ಸಹಾಯವಾಣಿಯ ಪ್ರಯೋಜನ ಪಡೆದುಕೊಳ್ಳಬೇಕಾಗಿ ವಿನಂತಿ. ಹವಾಮಾನ ಸಂಬಂಧಿತ ಮಾಹಿತಿ, ಮುನ್ಸೂಚನೆ ಮತ್ತು ಸಲಹೆಗಳನ್ನು ಎಸ್‍ಎಂಎಸ್ ಮೂಲಕವೂ ರೈತರಿಗೆ ನೀಡಲಾಗುತ್ತದೆ.

ಸಿಡಿಲು ಬಡಿತದ ಬಗ್ಗೆ ಎಚ್ಚರಿಕೆ ನೀಡಲು ‘’ಸಿಡಿಲು’’ ಎಂಬ ಮೊಬೈಲ್ ಆಪ್ ಅಭಿವೃದ್ದಿಪಡಿಸಲಾಗಿದ್ದು, ಇದನ್ನು ಗೂಗಲ್ ಪ್ಲೇ ಸ್ಟೋರ್‍ಯಿಂದ ಉಚಿತವಾಗಿ ಪಡೆಯಬಹುದಾಗಿದೆ, ಈ ಆಪ್ ಮೂಲಕ ಸಿಡಿಲು ಬಡಿತದ ಮುನ್ಸೂಚನೆ ಹಾಗೂ ಸಂಬಂಧಿತ ಸಲಹೆ ಸೂಚನೆಗಳನ್ನು ನೀಡಲಾಗುತ್ತಿದೆ. ರೈತರ/ ಜನ ಸಾಮಾನ್ಯರು ಇದರ ಪ್ರಯೋಜನ ಪಡೆದು ಸಿಡಿಲು ಬಡಿತದಿಂದ ತಮ್ಮನ್ನು ರಕ್ಷಿಸಿಕೊಳ್ಳಬೇಕಾಗಿ ಕೋರಲಾಗಿದೆ.

ಸೂಕ್ಷ್ಮ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಭೇಟಿ  

ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪೆನ್ನೇಕರ್ ಹಾಗೂ ಜಿ.ಪಂ.ಸಿಇಒ ಕೆ.ಲಕ್ಷ್ಮಿಪ್ರಿಯಾ ಅವರು ಇತರೆ ಅಧಿಕಾರಿಗಳೊಂದಿಗೆ ಕೆ.ನಿಡುಗಣೆ ಪಂಚಾಯಿತಿ ವ್ಯಾಪ್ತಿಯ ಹೆಬ್ಬೆಟಗೇರಿ, ದೇವಸ್ತೂರು, ಕಾಲೂರು ಗ್ರಾಮಗಳಲ್ಲಿನ ಪ್ರಕೃತಿ ವಿಕೋಪ ಸೂಕ್ಷ್ಮ ಪ್ರದೇಶಗಳಿಗೆ ಭೇಟಿ ನೀಡಿ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದರು.   (ಕೆಸಿಐ,ಎಸ್.ಎಚ್)

Leave a Reply

comments

Related Articles

error: