ಪ್ರಮುಖ ಸುದ್ದಿಮೈಸೂರು

ಎಲ್.ಕೆ.ಜಿ -ಯು ಕೆ ಜಿ ಜವಾಬ್ದಾರಿಯನ್ನು ಅಂಗನವಾಡಿಗಳಿಗೆ ನೀಡಲು ಸಂಘದ ಒತ್ತಾಯ

ಮೈಸೂರು, ಮೇ, 27 : ರಾಜ್ಯ ಸರ್ಕಾರ ಪ್ರಸಕ್ತ ಶೈಕ್ಷಣಿಕ ಸಾಲಿನಿಂದಲೇ ಸರ್ಕಾರಿ ಶಾಲೆಗಳಲ್ಲಿ ಎಲ್.ಕೆ.ಜಿ ಹಾಗೂ ಯುಕೆಜಿಯನ್ನು ಆರಂಭಿಸುತ್ತಿದ್ದು ಈ ಜವಾಬ್ದಾರಿಯನ್ನು ಅಂಗನವಾಡಿಗಳಿಗೆ ಅಧಿಕೃತವಾಗಿ ವಹಿಸಬೇಕೆಂದು ರಾಜ್ಯ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಸುನಂದಾ ಒತ್ತಾಯಿಸಿದರು.

ಈ ಬಗ್ಗೆ ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಲಾಗಿದೆ, ಅಲ್ಲದೇ ತಮಗೆ ನೀಡಿರುವ ಎಲ್ಲಾ ಹೆಚ್ಚುವರಿ ಕೆಲಸದಿಂದ ಮುಕ್ತಗೊಳಿಸಿ ಹಾಗೂ ಎಲ್.ಕೆ.ಜಿ ಹಾಗೂ ಯುಕೆಜಿ ಜವಾಬ್ದಾರಿಯನ್ನು ತಮ್ಮಗೆ ನೀಡಬೇಕು, ಇದು ಅಂಗನವಾಡಿಗಳ ಉಳಿವಿಗೆ ಅತಿ ಮುಖ್ಯವಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಅಂಗನವಾಡಿಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಖಾಸಗಿ ವಿದ್ಯಾಸಂಸ್ಥೆಗಳಲ್ಲಿ ಸಿಗುವ ಸೌಲಭ್ಯಗಳು ತಮ್ಮಲ್ಲಿಯೂ ದೊರೆಯುವಂತೆ ಸರ್ಕಾರ ನೋಡಿಕೊಳ್ಳಬೇಕು. ಅಲ್ಲದೇ ಮಾತೃಪೂರ್ಣ ಯೋಜನೆ ಕೆಲಸಕ್ಕೆ ಹೆಚ್ಚುವರಿ ಸಹಾಯಕಿಯನ್ನ ನೇಮಿಸಬೇಕು ಎಂದ ಅವರು, ಈಗಾಗಲೇ ಜಿಲ್ಲಾಧಿಕಾರಿ, ಸಿಡಿಪಿ, ಜಿಲ್ಲಾ ಪಂಚಾಯ್ತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಆದ್ದರಿಂದ ಇನ್ನೂ ಹೆಚ್ಚಿನ ಒತ್ತಡ ಹೇರುವ ನಿಟ್ಟಿನಲ್ಲಿ ಮೇ.30ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.

ಅಂದು ಬೆಳಗ್ಗೆ 11.30 ರಿಂದ ಬೆಂಗಳೂರಿನ ಕೇಂದ್ರೀಯ ರೈಲು ನಿಲ್ದಾಣದಿಂದ ಸ್ವತಂತ್ರ ಉದ್ಯಾನವನದರೆಗೆ ರ್ಯಾಲಿ ನಡೆಸಲಿದ್ದ, ರಾಜ್ಯದ ಸುಮಾರು 50 ಸಾವಿರಕ್ಕೂ ಹೆಚ್ಚು ಕಾರ್ಯಕರ್ತೆಯರು ಭಾಗಿಯಾಗಲಿದ್ದಾರೆ. ತಮ್ಮ ಮನವಿಗೆ ಸರ್ಕಾರ ಸ್ಪಂದಿಸದೆ ಹೋದಲ್ಲಿ ಅನಿರ್ಧಿಷ್ಟಾವಧಿ ಪ್ರತಿಭಟನೆ ಮುಂದುವರೆಸುವ ಮೂಲಕ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಪ್ರಧಾನ ಕಾರ್ಯದರ್ಶಿ ಕಾವೇರಮ್ಮ, ಕಾರ್ಯಕರ್ತೆಯರಾದ ಮಾಯಾವತಿ ಪುಷ್ಪಾವತಿ, ವಸಂತ, ಲೀಲಾವತಿ, ಮಂಜುಳ ಹಾಗೂ ಇತರರು ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: