ಪ್ರಮುಖ ಸುದ್ದಿ

ಎಲ್‍ಕೆಜಿ, ಯುಕೆಜಿ ಅಂಗನವಾಡಿಗಳಲ್ಲೇ ನಡೆಯಲಿ : ಅಂಗನವಾಡಿ ನೌಕರರ ಸಂಘ ಆಗ್ರಹ

ರಾಜ್ಯ(ಮಡಿಕೇರಿ) ಮೇ 27 :- ಸರ್ಕಾರಿ ಶಾಲೆಗಳಲ್ಲಿ ಎಲ್‍ಕೆಜಿ ಮತ್ತು ಯುಕೆಜಿಯನ್ನು ಆರಂಭಿಸುತ್ತಿರುವ ಸರ್ಕಾರದ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿರುವ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಘಟಕ, ಮೇ 30 ರಂದು ಬೆಂಗಳೂರಿನಲ್ಲಿ ನಡೆಯುವ ವಿಧಾನಸೌಧ ಚಲೋ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷೆ ಚೇಂದಿರ ಕಾವೇರಮ್ಮ, ಸರ್ಕಾರದ ಒಂದು ಸಂಸ್ಥೆಯನ್ನು ಸಬಲಗೊಳಿಸಲು ಮತ್ತೊಂದು ಸಂಸ್ಥೆಯನ್ನು ಬಲಹೀನಗೊಳಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಸರ್ಕಾರಿ ಶಾಲೆಗಳಲ್ಲಿ ಎಲ್‍ಕೆಜಿ ಮತ್ತು ಯುಕೆಜಿಯನ್ನು ಆರಂಭಿಸಿದರೆ ಮಕ್ಕಳ ಕೊರತೆಯಿಂದ ಅಂಗನವಾಡಿ ಕೇಂದ್ರಗಳನ್ನು ಮುಚ್ಚುವ ಪರಿಸ್ಥಿತಿ ಎದುರಾಗಬಹುದು. ಇದರಿಂದ ರಾಜ್ಯದ ಅಂಗನವಾಡಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 1 ಲಕ್ಷಕ್ಕೂ ಅಧಿಕ ಮಂದಿ ನೌಕರರು ಬೀದಿ ಪಾಲಾಗಬಹುದೆಂದು ಆತಂಕ ವ್ಯಕ್ತಪಡಿಸಿದರು.

ಸರ್ಕಾರಿ ಶಾಲೆಗಳಿಗೆ ಬದಲಾಗಿ ಅಂಗನವಾಡಿಗಳಲ್ಲೆ ಎಲ್‍ಕೆಜಿ ಮತ್ತು ಯುಕೆಜಿಗಳನ್ನು ಆರಂಭಿಸಬೇಕೆಂದು ಒತ್ತಾಯಿಸಿದ ಅವರು, ಮೇ 30 ರಂದು ಜಿಲ್ಲೆಯ ಅಂಗನವಾಡಿ ಸಹಾಯಕಿಯರು ಮತ್ತು ಕಾರ್ಯಕರ್ತೆಯರು ಬೆಂಗಳೂರಿನ ಹೋರಾಟದಲ್ಲಿ ಪಾಲ್ಗೊಳ್ಳಲಿರುವುದಾಗಿ ತಿಳಿಸಿದರು.

ಎಲ್‍ಕೆಜಿ ಮತ್ತು ಯುಕೆಜಿಯನ್ನು ಆರಂಭಿಸುವ ಮೊದಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಕ್ಷಣ ತಜ್ಞರು ಹಾಗೂ ವಿವಿಧ ಸಂಘ ಸಂಸ್ಥೆಗಳೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಬೇಕಾಗಿತ್ತು. ಆದರೆ, ಸರ್ಕಾರ ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡಿದೆಯೆಂದು ಕಾವೇರಮ್ಮ ಟೀಕಿಸಿದರು. ಅಂಗನವಾಡಿ ಕೆÉೀಂದ್ರಗಳನ್ನು 3 ರಿಂದ 6 ವರ್ಷದ ಮಕ್ಕಳಿಗಾಗಿಯೇ ಆರಂಭಿಸಲಾಗಿದೆ. ಆದರೆ, ಇದೀಗ ಹೊಸದಾಗಿ ಸರ್ಕಾರಿ ಶಾಲೆಯಲ್ಲೆ ಎಲ್‍ಕೆಜಿ ಮತ್ತು ಯುಕೆಜಿ ಆರಂಭಗೊಂಡರೆ ಅಂಗನವಾಡಿಗಳಿಗೆ ಮಕ್ಕಳ ಕೊರತೆ ಎದುರಾಗಲಿದೆ. ಈಗ ಇರುವ ವ್ಯವಸ್ಥೆಯನ್ನು ಬಲಿಷ್ಟಗೊಳಿಸುವ ಬದಲು, ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗುವ ರೀತಿಯಲ್ಲಿ ಮತ್ತೊಂದು ಯೋಜನೆ ಜಾರಿಗೆ ಮುಂದಾಗಿರುವುದು ಸರಿಯಾದ ಕ್ರಮವಲ್ಲವೆಂದು ಕಾವೇರಮ್ಮ ಅಸಮಾಧಾನ ವ್ಯಕ್ತಪಡಿಸಿದರು.

 ಬೇಡಿಕೆಗಳು  

ಅಂಗನವಾಡಿ ಕೇಂದ್ರಗಳ ಮೂಲಕ ನಡೆಯುತ್ತಿರುವ ಮಾತೃಪೂರ್ಣದ ಕೆಲಸ ಕಾರ್ಯಗಳಿಗೆ ಒಬ್ಬ ಹೆಚ್ಚುವರಿ ಸಹಾಯಕಿಯನ್ನು ನೇಮಕ ಮಾಡಬೇಕು, 1995 ರಿಂದ ಆಯ್ಕೆಯಾಗಿರುವ ಕಾರ್ಯಕರ್ತೆಯರಲ್ಲಿ ಎಸ್‍ಎಸ್‍ಎಲ್‍ಸಿ, ಪಿಯುಸಿ, ಬಿಎ ತೇರ್ಗಡೆಯಾಗಿರುವವರು ಇರುವುದರಿಂದ ಅವರಿಗೆ ಎಲ್‍ಕೆಜಿ ಮತ್ತು ಯುಕೆಜಿ ತರಬೇತಿಯನ್ನು ನೀಡಿ, ಅಂಗನವಾಡಿ ಕೇಂದ್ರಗಳಲ್ಲಿಯೇ ಪಾಲನೆ ಮತ್ತು ಕಲಿಕೆ ವ್ಯವಸ್ಥೆಯನ್ನು ಮಾಡಬೇಕು. ಪೂರ್ವ ಪ್ರಾಥಮಿಕ ಶಿಕ್ಷಣ ಪೂರೈಸಿದವರಿಗೆ ಟಿ.ಸಿಯನ್ನು ನೀಡಿ 1ನೇ ತರಗತಿಗೆ ಸೇರ್ಪಡೆಗೊಳಿಸುವ ವ್ಯವಸ್ಥೆ ಜಾರಿಗೆ ತರಬೇಕು. ಅಂಗನವಾಡಿ ಮತ್ತು ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳಿಗೆ ಮಾತ್ರ ಸರ್ಕಾರಿ ಸೌಲಭ್ಯಗಳೆಂದು ಘೋಷಿಸಬೇಕು, ಖಾಸಗಿ ಕಾನ್ವೆಂಟ್ ಮತ್ತು ಶಾಲೆಗಳಿಗೆ ನೀಡುವ ಅನುಮತಿಯನ್ನು ರದ್ದುಮಾಡಬೇಕು, ಅಂಗನವಾಡಿ ಮಕ್ಕಳಿಗೂ ಶಿಕ್ಷಣ ಇಲಾಖೆ ಮೂಲಕ ಸಮವಸ್ತ್ರಗಳನ್ನು ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮೇ 30 ರಂದು ವಿಧಾನಸೌಧ ಚಲೋ ಹೋರಾಟ ನಡೆಸುತ್ತಿರುವುದಾಗಿ ಕಾವೇರಮ್ಮ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಮಿತ್ರ ವಿ.ಎಸ್. ಹಾಗೂ ವೀರಾಜಪೇಟೆ ಕಾರ್ಯದರ್ಶಿ ವಿ.ಸಿ. ನಳಿನಾಕ್ಷಿ ಉಪಸ್ಥಿತರಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: