ಮೈಸೂರು

ಲಕ್ಷಾಂತರ ರೂ,ಮೌಲ್ಯದ ಕೇಬಲ್ ವಿವಿಧ ಉಪಕರಣ ವಶಪಡಿಸಿಕೊಂಡು ಪಾಲಿಕೆಯ ಆವರಣದಲ್ಲಿ ನಿಲ್ಲಿಸಲಾದ ವಾಹನವೇ ನಾಪತ್ತೆ

ಮೈಸೂರು,ಮೇ.28:- ಮೈಸೂರು ಮಹಾನಗರ ಪಾಲಿಕೆಯವರು ವಾರದ ಹಿಂದೆ ಲಕ್ಷಾಂತರ ರೂ,ಮೌಲ್ಯದ ಕೇಬಲ್ ಇನ್ನಿತರ ಉಪಕರಣಗಳೊಂದಿಗೆ ವಶಪಡಿಸಿಕೊಂಡು ಪಾಲಿಕೆಯ ಆವರಣದಲ್ಲಿ ತಂದು ನಿಲ್ಲಿಸಿದ್ದು, ಆ ವಾಹನವನ್ನೇ ಯಾರೋ ದುಷ್ಕರ್ಮಿಗಳು ಕದ್ದೊಯ್ದ ಘಟನೆ ನಡೆದಿದೆ.

ಪಾಲಿಕೆಯ ಮೂರು ಗೇಟುಗಳಿಗೂ ಬೀಗ ಜಡಿಯಲಾಗುತ್ತದೆಯಾದರೂ ವಾಹನವನ್ನು ಕದ್ದೊಯ್ದಿದ್ದು ಯಾರು ಎಂಬ ಯಕ್ಷ ಪ್ರಶ್ನೆ ಇದೀಗ ಹುಟ್ಟಿಕೊಂಡಿದೆ. ಪಾಲಿಕೆಯ ಉಪಮೇಯರ್ ಶಫೀ ಅಹ್ಮದ್ ಮತ್ತು ಮಾಜಿ ಮೇಯರ್ ಅಯೂಬ್ ಖಾನ್ ಈ ಪ್ರಕರಣವನ್ನು ಬೆಳಕಿಗೆ ತಂದಿದ್ದಾರೆ. ನಿನ್ನೆ ಮಧ್ಯಾಹ್ನ ಅವರು ನಗರ ಪಾಲಿಕೆಯ ಆವರಣ ಪ್ರವೇಶಿಸುತ್ತಿದ್ದಂತೆ ವಶಪಡಿಸಿಕೊಳ್ಳಲಾದ ವಾಹನ ಸ್ಥಳದಲ್ಲಿ ಇಲ್ಲದಿರುವುದು ಗಮನಕ್ಕೆ ಬಂತು. ವಿಚಾರಿಸಲಾಗಿ ಯಾರಿಗೂ ವಾಹನದ ಎಲ್ಲಿ ಹೋಯಿತೆಂಬ ಮಾಹಿತಿ ಇರಲಿಲ್ಲ ಎನ್ನಲಾಗಿದೆ. ಆಗ ವಾಹನ ನಾಪತ್ತೆಯಾಗಿದೆ ಎನ್ನುವುದು ತಿಳಿದು ಬಂದಿದ್ದು, ಕೂಡಲೇ ಅವರು ಮೇಯರ್ ಪುಷ್ಪಲತಾ ಜಗನ್ನಾಥ್ ಅವರಿಗೆ ಮಾಹಿತಿ ರವಾನಿಸಿದ್ದಾರೆ. ವಾಹನ ಕಳುವು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಅಧಿಕಾರಿಗಳೊಂದಿಗೆ ಚರ್ಚೆ ಕೂಡ ನಡೆಸಿದ್ದಾರೆ. ವಿದ್ಯುತ್ ಕಂಬ ಸೇರಿದಂತೆ ಯಾವುದೇ ಕಂಬಗಳಿಗೆ ಕೇಬಲ್ ಅಳವಡಿಕೆಗೆ ನಿಷೇಧವಿದ್ದರೂ ಯಾವುದೋ ಕೇಬಲ್ ಸಂಸ್ಥೆಯೊಂದು ವಿದ್ಯುತ್ ಕಂಬಗಳಿಗೆ ಕೇಬಲ್ ಅಳವಡಿಸಿದ್ದು, ಈ ಕುರಿತು ಪಾಲಿಕೆಯ ಕೌನ್ಸಿಲ್ ಸಭೆಯಲ್ಲಿ ಚರ್ಚೆಯಾಗಿತ್ತು. ಅಂದಿನ ಕಾಮಗಾರಿ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದ ನಂದೀಶ್ ಪ್ರೀತಂ ಅವರು ಕೇಬಲ್ ಗಳನ್ನು ಹಾಕದಂತೆ ತಡೆಯೊಡ್ಡುವಂತೆ ಒತ್ತಾಯಿಸಿ ಯಶಸ್ವಿಯೂ ಆಗಿದ್ದರು. ಆದರೆ ನಂತರದ ದಿನಗಳಲ್ಲಿ ವಿದ್ಯುತ್ ಕಂಬಗಳಿಗೆ ಕೇಬಲ್ ಅಳವಡಿಸುವ ಪ್ರಕ್ರಿಯೆ ಮುಂದುವರಿದಿತ್ತು. ವಲಯ ಕಛೇರಿ 5ರ ವ್ಯಾಪ್ತಿಯಲ್ಲಿ ಕೇಬಲ್ ಅಳವಡಿಸುವ ವೇಳೆ ಸ್ಥಳಕ್ಕೆ ದಾಳಿ ನಡೆಸಿದ ಸಹಾಯಕ ಆಯುಕ್ತ ಮಹೇಶ್ ಸ್ಥಳ ಪರಿಶೀಲನೆ ನಡೆಸಿ ಕೇಬಲ್ ಹಾಗೂ ಲಕ್ಷಾಂತರ ರೂ.ಮೌಲ್ಯದ ಪರಿಕರಗಳನ್ನು ಹೊಂದಿದ್ದ ಬೊಲೆರೋವಾಹನ ಸಮೇತ ವಶಕ್ಕೆ ಪಡೆದಿದ್ದರು. ಅದನ್ನು ಪಾಲಿಕೆಯ ಆವರಣದಲ್ಲಿ ತಂದು ನಿಲ್ಲಿಸಿದ್ದರು.ವಾಹನದ ಕೀಲಿಯನ್ನು ಕಂಟ್ರೋಲ್ ರೂಂಗೆ ನೀಡಿದ್ದರು. ಆದರೀಗ ಕೀಲಿ ಮಾತ್ರವಿದ್ದು, ವಾಹನ ನಾಪತ್ತೆಯಾಗಿದೆ.ನಗರ ಪಾಲಿಕೆ ಆವರಣದಲ್ಲಿ ನಿಲ್ಲಿಸಲಾಗಿದ್ದ ವಾಹನ ಕಳುವಾಗಿರುವ ಕುರಿತು ಅಧಿಕಾರಿಗಳಿಗೇ ಮಾಹಿತಿ ಇಲ್ಲ ಎನ್ನಲಾಗಿದೆ. ಮೇಯರ್ ಪುಸ್ಪಲತಾ ಜಗನ್ನಾಥ್ ಅವರು ಕೆ.ಆರ್.ಪೊಲೀಸ್ ಠಾಣೆಗೆ ದೂರು ನೀಡುವಂತೆ ತಿಳಿಸಿದ್ದಾರೆ ಎನ್ನಲಾಗಿದೆ.

ಪಾಲಿಕೆಯ ಆವರಣಕ್ಕೆ ಅಷ್ಟೊಂದು ಭದ್ರತೆಗಳಿದ್ದಾಗ್ಯೂ ಆವರಣದಲ್ಲಿ ನಿಲ್ಲಿಸಲಾದ ವಾಹನ ಕಳುವಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: