ಕರ್ನಾಟಕಪ್ರಮುಖ ಸುದ್ದಿ

ಸಂಪುಟ ಪುನಾರಚನೆ ಇಲ್ಲ, ಖಾಲಿ ಇರುವ 3 ಸಚಿವ ಸ್ಥಾನಗಳಷ್ಟೇ ಭರ್ತಿ: ಸಿದ್ದರಾಮಯ್ಯ

ಮೈಸೂರು (ಮೇ 28): ಮೈತ್ರಿ ಸರ್ಕಾರ ಸಂಪುಟ ಪುನರಚನೆ ಮಾಡುವುದಿಲ್ಲ, ಬದಲಿಗೆ ಖಾಲಿ ಇರುವ ಮೂರು ಸಚಿವ ಸ್ಥಾನಗಳನ್ನು ತುಂಬುವ ಕಾರ್ಯ ಆಗುತ್ತದೆಯಷ್ಟೆ ಎಂದು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದರು.

ಸಂಪುಟ ಪುನರಚನೆ ಮಾಡಲಾಗುತ್ತಿದೆಯೇ ಎಂದು ಕೇಳಲಾದ ಪ್ರಶ್ನೆಗೆ ಅವರು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಸಂಪುಟ ಪುನರಚನೆ ಆಗುವುದಿಲ್ಲ ವಿಸ್ತರಣೆ ಆಗುತ್ತದೆಯಷ್ಟೆ ಎಂದು ಹೇಳಿದರು. ಶಿಕ್ಷಣ ಮಂತ್ರಿ, ದಿವಂಗತ ಶಿವಳ್ಳಿ ಅವರು ನಿರ್ವಹಿಸುತ್ತಿದ್ದ ಪೌರಾಡಳಿತ ಮಂತ್ರಿ ಸ್ಥಾನ ಹಾಗೂ ಇನ್ನೂ ಒಂದು ಮಂತ್ರಿ ಸ್ಥಾನ ಪ್ರಸ್ತುತ ಖಾಲಿ ಇದ್ದು, ಈ ಸ್ಥಾನಗಳನ್ನು ತುಂಬುವ ಕಾರ್ಯ ಈಗ ಆಗಬೇಕಿದೆ.

ಸಚಿವ ಸ್ಥಾನ ಸಿಗದೇ ಅತೃಪ್ತಿ ಹೊರಹಾಕುತ್ತಿರುವ ಮಹೇಶ್ ಕುಮಟಳ್ಳಿ, ಡಾ.ಸುಧಾಕರ್, ಬಿ.ಸಿ.ಪಾಟೀಲ್ ಜೆಡಿಎಸ್‌ನ ಸತ್ಯನಾರಾಯಣ ಇವರುಗಳಲ್ಲಿ ಮೂವರಿಗೆ ಅವಕಾಶ ಸಿಗುವ ಸಾಧ್ಯತೆ ಇದೆ. ಈ ಬಗ್ಗೆ ಪರಮೇಶ್ವರ್, ಸಿದ್ದರಾಮಯ್ಯ, ಕುಮಾರಸ್ವಾಮಿ ಮತ್ತು ದಿನೇಶ್ ಗುಂಡೂರಾವ್ ಅವರು ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಸುಧಾಕರ್ ಅವರಿಗೆ ಹೆಚ್ಚಿನ ಅವಕಾಶವಿದೆ ಎಂದು ಹೇಳಲಾಗುತ್ತಿದೆ.

ಅತೃಪ್ತ ಕಾಂಗ್ರೆಸ್ ಶಾಸಕ ರಮೇಶ್ ಜಾರಕಿಹೊಳಿ ಅವರು ಸುಧಾಕರ್ ಅವರನ್ನು ಸಂಪರ್ಕಕ್ಕೆ ಪಡೆದುಕೊಂಡಿದ್ದು, ಮೊನ್ನೆಯಷ್ಟೆ ಸುಧಾಕರ್ ಅವರು ರಮೇಶ್ ಜಾರಕಿಹೊಳಿ, ಆರ್.ಅಶೋಕ್, ಯಡಿಯೂರಪ್ಪ, ಸುಮಲತಾ ಅವರುಗಳೊಂದಿಗೆ ಎಸ್.ಎಂ.ಕೃಷ್ಣ ಅವರ ಮನೆಯಲ್ಲಿ ಕಾಣಿಸಿಕೊಂಡಿದ್ದರು. ಇದು ಕಾಂಗ್ರೆಸ್‌ಗೆ ಆತಂಕ ತಂದಿದೆ.

ಜೆಡಿಎಸ್‌ನಲ್ಲೂ ಆಕಾಂಕ್ಷಿಗಳು ಹುಟ್ಟಿಕೊಂಡಿದ್ದು, ಕುಮಾರಸ್ವಾಮಿ ಅವರಿಗೆ ಇದು ತಲೆ ನೋವಾಗಿ ಪರಿಣಮಿಸಿದೆ. ಶಿರಾ ಶಾಸಕ ಬಿ.ಸತ್ಯನಾರಾಯಣ ಅವರು ಸಚಿವ ಸ್ಥಾನಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಇವರೊಂದಿಗೆ ಇನ್ನೂ ಇಬ್ಬರು ಸಚಿವ ಸ್ಥಾನಕ್ಕಾಗಿ ಒತ್ತಾಯ ಮಾಡಿದ್ದಾರೆ. ಪಕ್ಷೇತರ ಶಾಸಕರೂ ಸಹ ಸರ್ಕಾರಕ್ಕೆ ಬೆಂಬಲ ನೀಡಲು ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.

ಕುಮಾರಸ್ವಾಮಿ-ಪರಮೇಶ್ವರ್ ಅವರು ರಮೇಶ್ ಜಾರಕಿಹೊಳಿ ಆಪ್ತ ಮಹೇಶ್ ಕುಮಟಳ್ಳಿ ಅವರೊಂದಿಗೆ ಮಾತನಾಡಿದ್ದು, ಸಂಧಾನಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ. ರಮೇಶ್ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನದ ಆಫರ್ ಮಾಡಿದ್ದಾರೆ ಎಂಬ ಸುದ್ದಿಯೂ ಇದೆ. ಆದರೆ ರಮೇಶ್ ಜಾರಕಿಹೊಳಿ ಈಗಾಗಲೇ ಕಾಂಗ್ರೆಸ್‌ ಪಕ್ಷದಿಂದ ಬಹಳ ದೂರ ಹೋದಂತೆ ಕಾಣುತ್ತಿದೆ. (ಎನ್.ಬಿ)

Leave a Reply

comments

Related Articles

error: