ಪ್ರಮುಖ ಸುದ್ದಿಮೈಸೂರು

ಬಿಜೆಪಿಯಲ್ಲಿ ಗೊಂದಲಗಳಿಲ್ಲ : ವಿ.ಶ್ರೀನಿವಾಸ್ ಪ್ರಸಾದ್ ಸ್ಪಷ್ಟನೆ

ಬಿಜೆಪಿಯಲ್ಲಿ ಯಾವುದೇ ಗೊಂದಲಗಳಿಲ್ಲ. ಎಲ್ಲರೂ ಒಗ್ಗಟ್ಟಿನಿಂದ ಚುನಾವಣೆ ಎದುರಿಸುತ್ತವೆ ಎಂದು ಬಿಜೆಪಿ ಮುಖಂಡ ವಿ.ಶ್ರೀನಿವಾಸ್ ಪ್ರಸಾದ್ ತಿಳಿಸಿದರು.

ಮುಂಬರುವ ನಂಜನಗೂಡು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ  ಹಾಗೂ 2018ರ ರಾಜ್ಯ  ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮಂಗಳವಾರ ಮೈಸೂರಿನ ಹೊರವಲಯದಲ್ಲಿರುವ ಹೂಟಗಳ್ಳಿಯಲ್ಲಿ ಆಯೋಜಿಸಿದ್ದ ಜಿಲ್ಲಾ ಬಿಜೆಪಿ ಗ್ರಾಮಾಂತರ ವಿಶೇಷ  ಕಾರ್ಯಕಾರಣಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ವಿ.ಶ್ರೀನಿವಾಸ್ ಪ್ರಸಾದ್ ಕಾಂಗ್ರೆಸ್ ಗೆ ಯಾವ ಮೂರ್ತಿ ಬಂದರೇನು, ಯಾವ ಬೋಸ್ ಬಂದರೇನು, ಬಿಜೆಪಿ ಅಭ್ಯರ್ಥಿ ಯಾರೆಂದು ನಿರ್ಧಾರವಾಗಿದೆ. ಕಾಂಗ್ರೆಸ್ ನಲ್ಲಿ 30 ದಿನಕ್ಕೆ 30 ಅಭ್ಯರ್ಥಿಗಳು ಹುಟ್ಟಿಕೊಳ್ಳುತ್ತಿದ್ದಾರೆ. ಬಿಜೆಪಿ ಯಲ್ಲಿ ಯಾವುದೇ ರೀತಿಯ ಗೊಂದಲಗಳಿಲ್ಲ. ಎಲ್ಲರೂ ಒಗ್ಗಟ್ಟಿನಿಂದ ಚುನಾವಣೆ ಎದುರಿಸುತ್ತೇವೆ.ನಂಜನಗೂಡು ಉಪ ಚುನಾವಣೆ ಮುಗಿದ ಬಳಿಕ ಮೈಸೂರು ಚಾಮರಾಜನಗರ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳುತ್ತೇನೆ. ಎರಡೂ ಜಿಲ್ಲೆಯಲ್ಲಿ ಬಿಜೆಪಿಯನ್ನು ಮತ್ತಷ್ಟು ಬಲಪಡಿಸುತ್ತೇನೆ ಎಂದು ತಿಳಿಸಿದರು.

ರಾಜ್ಯದಲ್ಲಿ ಯಾವುದೇ ಪಕ಼್ಷದ ಸರ್ಕಾರವಿದ್ದರೂ ಸರ್ಕಾರ ಸಿದ್ಧಪಡಿಸಿದ ಭಾಷಣವನ್ನಷ್ಟೇ ರಾಜ್ಯಪಾಲರು ಓದುತ್ತಾರೆ. ಆ ಭಾಷಣದಲ್ಲಿ ಸರ್ಕಾರದ ಸಾಧನೆಗಳನ್ನು ಮಾತ್ರ ಸೇರಿಸಲಾಗಿರುತ್ತದೆ.  ಸರ್ಕಾರದ ವೈಫಲ್ಯಗಳನ್ನು ಸೇರಿಸುವಂತಿದ್ದರೆ ಮಾಜಿ ಸಚಿವ ಎಚ್.ವೈ ಮೇಟಿ, ಸಚಿವರಾದ ತನ್ವೀರ್ ಸೇಠ್, ರಮೇಶ್ ಜಾರಕಿಹೊಳಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಪ್ರಕರಣಗಳನ್ನು ಪ್ರಸ್ತಾಪಿಸಬೇಕಾಗುತ್ತಿತ್ತು ಎಂದು ಲೇವಡಿ ಮಾಡಿದರು.

ಸಭೆಯಲ್ಲಿ ಜಿಲ್ಲಾ ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಎಂ. ಶಿವಣ್ಣ, ಮೈಸೂರು ಗ್ರಾಮಾಂತರ ಪ್ರದೇಶದ ಎಂಟು ವಿಧಾನಸಭಾ ಕ್ಷೇತ್ರಗಳ ಬಿಜೆಪಿ ಅಧ್ಯಕ್ಷರು, ಬಿಜೆಪಿಯ ವಿವಿಧ ಮಂಡಲಗಳ ಅಧ್ಯಕ್ಷರು, ಪದಾಧಿಕಾರಿಗಳು ಭಾಗವಹಿಸಿದ್ದರು.

Leave a Reply

comments

Related Articles

error: