ಪ್ರಮುಖ ಸುದ್ದಿಮೈಸೂರು

ರುಬೆಲ್ಲಾ ವೈರಸ್ ತಡೆಗೆ ಪ್ರಯತ್ನ : 2020ರ ವೇಳೆಗೆ ರುಬೆಲ್ಲಾ ಮುಕ್ತ ಭಾರತ ಮಾಡಲು ನಿರ್ಧಾರ

ಮಕ್ಕಳಲ್ಲಿ ಅಂಗವೈಕಲ್ಯತೆಗೆ ಕಾರಣವಾಗಿ ಜೀವಮಾನವಿಡಿ ನರಳುವಂತೆ ಮಾಡುವ ಮಾರಕ ರೋಗ ಪೋಲಿಯೋದಿಂದ ಭಾರತ ಮುಕ್ತವಾಗಿದ್ದು ಇದೀಗ ದಡಾರ ಹಾಗೂ ರುಬೆಲ್ಲಾ ಕಾಯಿಲೆಯಿಂದ ಮುಕ್ತವಾಗಲು ಪಣತೊಟ್ಟಿದೆ. ಅದಕ್ಕಾಗಿ ದೇಶದಾದ್ಯಂತ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿದೆ.

ದಡಾರ ಮತ್ತು ರುಬೆಲ್ಲಾ ಜಂಟಿ ಲಸಿಕೆಯನ್ನು (ಎಂಆರ್ ಲಸಿಕೆ) ಪರಿಚಯಿಸಲು ಭಾರತ ಸರ್ಕಾರ ತೀರ್ಮಾನಿಸಿದ್ದು, ಅಭಿಯಾನದ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಮುಂದಾಗಿದೆ. ದಡಾರಕ್ಕೆ ನೀಡಲಾಗುವ ಮೊದಲ ಮತ್ತು ಎರಡನೇ ಹಂತದ ಡೋಸ್‍ನ ಬದಲಿಗೆ ಈ ಹೊಸ ಲಸಿಕೆ ನೀಡಲಾಗುತ್ತದೆ. ಎಲ್ಲಾ ರಾಜ್ಯಗಳಲ್ಲೂ ಹಂತಹಂತವಾಗಿ ಎಂಆರ್ ಲಸಿಕೆಯನ್ನು ಪರಿಚಯಿಸಲು ಉದ್ದೇಶಿಸಲಾಗಿದ್ದು, ಈ ಹಿಂದೆ ದಡಾರ ಮತ್ತು ರುಬೆಲ್ಲಾ ಲಸಿಕೆ ಪಡೆದ ಅಥವಾ ಪಡೆಯದ 9ತಿಂಗಳಿನಿಂದ 15 ವರ್ಷದ ಎಲ್ಲಾ ಮಕ್ಕಳಿಗೂ ಲಸಿಕೆ ಹಾಕುವ ಗುರಿ ಹೊಂದಲಾಗಿದೆ.

ರುಬೆಲ್ಲಾ ಎಂದರೇನು?

ಸಾಮಾನ್ಯವಾಗಿ ದಡಾರ ಎಂದರೆ ಎಲ್ಲರಿಗೂ ತಿಳಿದಿರುತ್ತದೆ. ಆದರೆ ರುಬೆಲ್ಲಾ ಬಗ್ಗೆ ಅರಿವಿರುವುದಿಲ್ಲ. ಇದು ಪೋಲಿಯೋ ತರಹದ ವೈರಸ್‍ನಿಂದ ಹರಡುವ ಕಾಯಿಲೆ. ಗಾಳಿಯಲ್ಲಿ ಸೇರಿಕೊಂಡು ಮನುಷ್ಯನ ದೇಹ ಸೇರುತ್ತದೆ. ಇದು ಮಾರಣಾಂತಿಕವಲ್ಲದಿದ್ದರೂ ಜೀವಮಾನವಿಡೀ ಅಂಗವೈಕಲ್ಯತೆಯಿಂದ ನರಳುವಂತೆ ಮಾಡುತ್ತದೆ. ಗರ್ಭಿಣಿ ಸ್ತ್ರೀಯರಲ್ಲಿ ಮಕ್ಕಳಲ್ಲಿ ಜನ್ಮತಃ ಬರುವ ರೋಗಕ್ಕೆ ಕಾರಣವಾಗಿ ಮೊದಲ ತ್ರೈಮಾಸಿಕ ಗರ್ಭಾವಸ್ಥೆಯಲ್ಲಿ ಮಗುವಿಗೆ ವಿಪರೀತ ಅಥವಾ ಮಾರಣಾಂತಿಕ ಆರೋಗ್ಯ ಸಮಸ್ಯೆಯನ್ನು ತಂದೊಡ್ಡಬಹುದು. ಯಾವುದೇ ಮುಂಜಾಗ್ರತೆ ವಹಿಸದ ತಾಯಂದಿರಲ್ಲಿ ಕಂಡುಬರುವ ರುಬೆಲ್ಲಾ ವೈರಸ್, ಮಗುವನ್ನು ಗ್ಲುಕೊಮಾ, ಕಣ್ಣಿನಪೊರೆ, ಕಿವುಡುತನ, ಮೆದುಳು ಮತ್ತು ಹೃದಯ ಸಂಬಂಧಿ ಕಾಯಿಲೆಗೆ ದೂಡುವುದಲ್ಲದೆ, ಗರ್ಭಪಾತ ಅಥವಾ ಸತ್ತ ಸ್ಥಿತಿಯಲ್ಲಿ ಮಗುವಿನ ಜನನಕ್ಕೆ ಕಾರಣವಾಗಬಹುದು.

ರುಬೆಲ್ಲಾ ಲಕ್ಷಣಗಳು

 ಮುಖದಲ್ಲಿ ಮೊದಲು ಕೆಂಪು ಕಲೆ ಮೂಡುವುದು, ಗಂಟಲಲ್ಲಿ ಊತ ಕಾಣಿಸಿಕೊಳ್ಳುವುದು, ಜ್ವರ, ವಾಂತಿ, ಗಂಟಲು ನೋವು, ದೊಡ್ಡವರಲ್ಲಿ ಸಂಧಿ ವಾತ, ದುಗ್ದರಸ ಗ್ರಂಥಿಗಳ ಊತದ ಲಕ್ಷಣಗಳು ಕಂಡುಬರುತ್ತವೆ. ದಡಾರದಿಂದ ಪ್ರತಿವರ್ಷ 1ಲಕ್ಷ ಮಕ್ಕಳು ಸಾವನ್ನಪ್ಪುತ್ತಿದ್ದು, ಇದರಲ್ಲಿ ಮೂರನೇ ಒಂದು ಭಾಗದಷ್ಟು ಮಕ್ಕಳು ಭಾರತದಲ್ಲಿ ಸಾವಿಗೀಡಾಗಿದ್ದಾರೆ. ಹಾಗಾಗಿ ರುಬೆಲ್ಲಾ ವೈರಸ್‍ನ್ನು 2020ರ ವೇಳೆಗೆ ಹೋಗಲಾಡಿಸುವ ಗುರಿ ಹೊಂದಲಾಗಿದೆ.

ಈ ಕುರಿತು ಸಿಟಿಟುಡೆಯೊಂದಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಬಿ.ಬಸವರಾಜು ಮಾತನಾಡಿ ಪೋಲಿಯೋ ವೈರಸ್‍ನಂತೆಯೇ ರುಬೆಲ್ಲಾ ವೈರಸ್ ಅತ್ಯಂತ ಅಪಾಯಕಾರಿ. ಪ್ರಾಣಕ್ಕೆ ಹಾನಿ ಮಾಡದಿದ್ದರೂ ಅನೇಕ ಅಂಗವೈಕಲ್ಯತೆಗೆ ಕಾರಣವಾಗುತ್ತದೆ. ಹೆಚ್ಚಾಗಿ ಗರ್ಭಿಣಿ ಸ್ತ್ರೀಯರಲ್ಲಿ ಕಂಡುಬರುವ ಈ ವೈರಸ್ ಮಕ್ಕಳಲ್ಲಿ ಕಿವುಡುತನ, ದೃಷ್ಟಿದೋಷ ಸೇರಿದಂತೆ ಅನೇಕ ರೀತಿಯ ಅಂಗವೈಕಲ್ಯತೆಗೆ ದೂಡುತ್ತದೆ. ರಾಜ್ಯದಲ್ಲಿ 22 ಕಡೆ ಈ ಸೋಂಕು ಕಂಡುಬಂದ ಹಿನ್ನೆಲೆಯಲ್ಲಿ ಲಸಿಕೆ ಹಾಕಲು ಉದ್ದೇಶಿಸಲಾಗಿದೆ. ಪೋಷಕರು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ತೋರದೆ ತಮ್ಮ ಮಕ್ಕಳಿಗೆ ಲಸಿಕೆ ಹಾಕಿಸುವುದರಿಂದ ರುಬೆಲ್ಲಾ ಹಾಗೂ ದಡಾರವನ್ನು ದೂರ ಮಾಡಬಹುದು ಎಂದರಿದ್ದಾರೆ.

ಒಟ್ಟಿನಲ್ಲಿ ಒಂದು ತಿಂಗಳ ಕಾಲ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಪೋಷಕರು ತಮ್ಮ ಮಕ್ಕಳ ಕುರಿತು ತಪ್ಪದೇ ಎಚ್ಚರಿಕೆ ವಹಿಸಿ ಈ ಅಭಿಯಾನದಲ್ಲಿ ಪಾಲ್ಗೊಂಡರೆ ಒಳ್ಳೆಯದು.

ಬಿ.ಎಂ.

Leave a Reply

comments

Related Articles

error: