
ಕರ್ನಾಟಕ
ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಗ್ರೆನೇಡ್ ಮಾದರಿಯ ವಸ್ತು ಪತ್ತೆ: ಮನೆಮಾಡಿದ ಆತಂಕ
ಬೆಂಗಳೂರು,ಮೇ 31-ರೈಲ್ವೆ ನಿಲ್ದಾಣದಲ್ಲಿ ಅನುಮಾನಾಸ್ಪದ ವಸ್ತು ಪತ್ತೆಯಾಗಿದ್ದು, ಇದರಿಂದ ನಿಲ್ದಾಣದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಫ್ಲಾಟ್ ಫಾರಂ ನಂಬರ್ 1 ರಲ್ಲಿ ಪತ್ತೆಯಾದ ಅನುಮಾನಾಸ್ಪದ ವಸ್ತು ಗ್ರೆನೇಡ್ ರೀತಿಯಲ್ಲಿ ಕಂಡು ಬಂದಿದೆ. ಇದರಿಂದ ಹೆದರಿದ ಪ್ರಯಾಣಿಕರು ಸ್ಥಳದಿಂದ ಓಡಲು ಆರಂಭಿಸಿದರು. ಪಟ್ನಾಕ್ಕೆ ಸಂಘಮಿತ್ರ ರೈಲು ತೆರಳಬೇಕಿತ್ತು. ಆ ರೈಲು ಸಾಗುವ ಟ್ರ್ಯಾಕ್ನಲ್ಲಿಯೇ ಎಸ್ 1 ಬೋಗಿಯ ಸಮೀಪ ವಸ್ತು ಕಂಡುಬಂದಿದೆ.
ಸ್ಥಳಕ್ಕೆ ರೈಲ್ವೆ ಪೊಲೀಸರು, ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿಗಳು ಆಗಮಿಸಿ ವ್ಯಾಪಕ ತಪಾಸಣೆ ನಡೆಸುತ್ತಿದ್ದಾರೆ. ನಿಲ್ದಾಣದ ಫ್ಲಾಟ್ ಫಾರಂನಲ್ಲಿದ್ದ ಪ್ರಯಾಣಿಕರನ್ನು ಹೊರಗೆ ಕಳುಹಿಸಲಾಗಿದ್ದು, ತಪಾಸಣೆ ನಡೆಸಲಾಗುತ್ತಿದೆ.
ಪತ್ತೆಯಾದ ಗ್ರನೇಡ್ ಮಾದರಿಯ ವಸ್ತುವನ್ನು ಬಾಂಬ್ ನಿಷ್ಕ್ರಿಯ ದಳದವರು ವಶಕ್ಕೆ ಪಡೆದಿದ್ದಾರೆ. ವಸ್ತುವನ್ನು 500 ಮೀಟರ್ ದೂರಕ್ಕೆ ತೆಗೆದುಕೊಂಡು ಹೋಗಿ ಪರಿಶೀಲನೆ ನಡೆಸಲಾಗಿದೆ. ಬಳಿಕ ಪೊಲೀಸರು ಅದು ಗ್ರೆನೇಡ್ ಎಂದು ತಿಳಿಸಿದ್ದು, ಅದು ಜೀವಂತ ಗ್ರೆನೇಡ್ ಅಥವಾ ಅಲ್ಲವೇ ಎಂಬುದನ್ನು ಪರೀಕ್ಷಿಸಲಾಗುತ್ತಿದೆ.
ಐಜಿಪಿ ಡಿ.ರೂಪಾ, ಎಡಿಜಿಪಿ ಅಲೋಕ್ ಮೋಹನ್, ಪಶ್ಚಿಮ ಬೆಂಗಳೂರು ಡಿಸಿಪಿ ರವಿ ಡಿ.ಚೆನ್ನಣ್ಣವರ್ ಮುಂತಾದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
11 ಗಂಟೆವರೆಗೂ ಎಲ್ಲ ರೈಲುಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ. ಎಲ್ಲ ರೈಲುಗಳಿಂದ ಪ್ರಯಾಣಿಕರನ್ನು ಕೆಳಕ್ಕಿಳಿಸಲಾಗಿದೆ. ಪ್ರತಿ ರೈಲುಗಳನ್ನು ಪರಿಶೀಲಿಸಿದ ಬಳಿಕವೇ ರೈಲು ಸಂಚಾರಕ್ಕೆ ಅವಕಾಶ ನೀಡಲಾಗುವುದು ಎಂದು ತಿಳಿಸಲಾಗಿದೆ.
ಸಿಕ್ಕರುವ ವಸ್ತು ಗ್ರೆನೇಡ್ ಮಾದರಿಯಲ್ಲಿದೆ. ಅದು ಸಜೀವವೇ ಅಲ್ಲವೇ ಎಂಬುದು ಗೊತ್ತಾಗಿಲ್ಲ. ಬಾಂಬ್ ಪತ್ತೆ ದಳಕ್ಕೆ ಒಪ್ಪಿಸಲಾಗಿದೆ. ಟ್ರ್ಯಾಕ್ ಪಕ್ಕದಲ್ಲಿ ಬಿದ್ದಿತ್ತು. ಯಾರೋ ಪ್ರಯಾಣಿಕರು ಅನುಮಾನಾಸ್ಪದ ವಸ್ತು ಬಿದ್ದಿದೆ ಎಂದು ಮಾಹಿತಿ ನೀಡಿದ್ದರು ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. (ಎಂ.ಎನ್)