ಮೈಸೂರು

ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ತಂಬಾಕನ್ನು ನಿಷೇಧಿಸಬೇಕು : ಡಾ.ವೈ.ಡಿ.ರಾಜಣ್ಣ

ಮೈಸೂರು,ಮೇ 31- ವಿಶ್ವ ತಂಬಾಕು ರಹಿತ ದಿನಾಚರಣೆಯ ಅಂಗವಾಗಿ ಅರಿವು ಸಂಸ್ಥೆಯ ವತಿಯಿಂದ ಶುಕ್ರವಾರ ನಗರದ ರಾಮಸ್ವಾಮಿ ವೃತ್ತದ ಬಳಿಯಿರುವ ಬಿಗ್ ಬಜಾರ್ ಆವರಣದಲ್ಲಿ ಸಿಗರೇಟ್, ಬಿಡಿಗಳಿಗೆ ನೀರು ಸುರಿಯುವ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ, ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ತಂಬಾಕನ್ನು ನಿಷೇಧಿಸಬೇಕು. ಸಿಗರೇಟ್ ಸೇದುವುದರಿಂದ ಸೇದುವವರಿಗೆ ಮಾತ್ರವಲ್ಲದೆ ಸುತ್ತಮುತ್ತಲೂ ಇರುವವರಿಗೂ ಇದರಿಂದ ಪರೋಕ್ಷವಾಗಿ ತೊಂದರೆಯಾಗಲಿದೆ. ಸಿಗರೇಟ್ ನಲ್ಲಿರುವ ನಿಕೋಟಿನ್ ಹಾಗೂ ಇತರೆ ರಾಸಾಯನಿಕ ಅಂಶಗಳು ಶ್ವಾಸಕೋಶವನ್ನು ತಲುಪಿ ಕ್ಯಾನ್ಸರ್, ಶ್ವಾಸಕೋಶದ ತೊಂದರೆಯಂತಹ ಆರೋಗ್ಯದ ಸಮಸ್ಯೆ ಎದುರಾಗುತ್ತದೆ ಎಂದರು.

1999 ರಿಂದ 2015 ರ ಅಂಚಿನಲ್ಲಿ ಅಂದಾಜು ಶೇ.32 ರಷ್ಟು ತಂಬಾಕನ್ನು ಸೇವಿಸುವವರ ಸಂಖ್ಯೆ ಹೆಚ್ಚಾಗಿದೆ. ಒಂದು ಸಿಗರೇಟ್ 7 ಸಾವಿರ ರಾಸಾಯನಿಕ ಅಂಶಗಳಿದೆ. ಭಾರತದಲ್ಲಿ 8 ರಿಂದ 10 ಲಕ್ಷ ಮಂದಿ ತಂಬಾಕು ಸೇದುವುದರಿಂದ ಸಾವನ್ನಪ್ಪುತ್ತಿದ್ದಾರೆ. ಸರ್ಕಾರ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಸೇದುವುದನ್ನು ನಿಷೇಧಿಸಿದೆ. ಆದರೆ ಇನ್ನು ಕೆಲವೆಡೆ ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್ ಸೇದುತ್ತಾರೆ. ಮನೆಗಳಲ್ಲಿ, ಮನೆಯ ಸುತ್ತಮುತ್ತ ಸಿಗರೇಟ್ ಸೇದುವುದರಿಂದ ಮಕ್ಕಳು, ಬಾಣಂತಿಯರು, ಗರ್ಭಿಣಿಯರಿಗೆ ಪರೋಕ್ಷವಾಗಿ ತೊಂದರೆಯಾಗುತ್ತಿದೆ ಎಂದ ಅವರು, ವಿಶ್ವ ತಂಬಾಕು ರಹಿತ ದಿನಾಚರಣೆ ಮೇ 31ಕ್ಕೆ ಮಾತ್ರ ಸೀಮಿತವಾಗದೆ ವರ್ಷ ಪೂರ್ತಿ ತಂಬಾಕು ವಿರೋಧಿ ನೀತಿಯನ್ನು ಅನುಸರಿಸಬೇಕು. ಇದರಿಂದ ಆರೋಗ್ಯಯುಕ್ತ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಸಂಸ್ಥೆ ಅಧ್ಯಕ್ಷ ಶ್ರೀಕಾಂತ್ ಕಶ್ಯಪ್, ಬಿಜೆಪಿಯ ಯುವ ಮುಖಂಡ ಕಡಕೋಳ ಜಗದೀಶ್, ಜೆಡಿಎಸ್ ಯುವ ಮುಖಂಡರಾದ ಪ್ರಕಾಶ್ ಪ್ರಿಯದರ್ಶಿನಿ, ಅಭಿಷೇಕ್, ಯದುನಂದನ್, ಡಿ.ಕೆ.ನಾಗಭೂಷಣ್, ಶಿವು ಇತರರು ಹಾಜರಿದ್ದರು. (ಎಚ್.ಎನ್, ಎಂ.ಎನ್)

 

Leave a Reply

comments

Related Articles

error: