ಮೈಸೂರು

ದಡಾರ-ರುಬೆಲ್ಲಾ ಲಸಿಕೆಯಿಂದ ಏನೂ ಸಮಸ್ಯೆಯಿಲ್ಲ, ವದಂತಿಗೆ ಕಿವಿಗೊಡಬೇಡಿ : ಡಾ.ಬಿ.ಬಸವರಾಜು ಮನವಿ

ದೇಶಕ್ಕೆ ಆರೋಗ್ಯಯುತ ಮಕ್ಕಳನ್ನು ನೀಡುವ ಸದುದ್ದೇಶದಿಂದ ದಡಾರ ಮತ್ತು ರುಬೆಲ್ಲಾ ಲಸಿಕೆ ಹಾಕಲಾಗುತ್ತಿದ್ದು ಪೋಷಕರು ವದಂತಿಗಳಿಗೆ ಕಿವಿಗೊಡದೆ ಲಸಿಕೆ ಹಾಕಿಸಿ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಬಿ.ಬಸವರಾಜು ಮನವಿ ಮಾಡಿದರು.

ಬುಧವಾರ ನಜರ್‍ಬಾದ್‍ನಲ್ಲಿರುವ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮಕ್ಕಳನ್ನು ದಡಾರ ಮತ್ತು ರುಬೆಲ್ಲಾದಿಂದ ಮುಕ್ತಗೊಳಿಸುವ ಸಲುವಾಗಿ ರಾಜ್ಯಾದ್ಯಂತ ಲಸಿಕಾ ಅಭಿಯಾನ ಆರಂಭಿಸಲಾಗಿದೆ. ಆದರೆ ಕೆಲವೆಡೆ ಲಸಿಕೆ ಹಾಕಿಸುವುದರಿಂದ ಮಕ್ಕಳು ಅಸ್ವಸ್ಥರಾಗುತ್ತಿದ್ದು, ಲಸಿಕೆ ಹಾಕಿಸಬೇಡಿ ಎಂದು ಸುಳ್ಳು ಸುದ್ದಿ ಹರಡುತ್ತಿದೆ. ಇದು ಕೇವಲ ವದಂತಿ ಅಷ್ಟೆ. ಲಸಿಕೆ ಹಾಕಿಸುವುದರಿಂದ ಯಾವುದೇ ರೀತಿಯ ಮಾರಣಾಂತಿಕ ತೊಂದರೆಯಾಗಲಿ, ಅಸ್ವಸ್ಥಗೊಳ್ಳುವುದಾಗಲಿ ಆಗುವುದಿಲ್ಲ. 5 ವರ್ಷದೊಳಗಿನ ಮಕ್ಕಳಲ್ಲಿ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ. 9 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳು ಬೇರೆ ಮಕ್ಕಳಿಗೆ ಲಸಿಕೆ ಹಾಕುವುದನ್ನು ನೋಡಿ ಗಾಬರಿಗೊಂಡು ತಲೆಸುತ್ತುವುದು, ವಾಂತಿ ಮಾಡಿಕೊಳ್ಳುವುದನ್ನು ಮಾಡುತ್ತಾರೆ. ಅದನ್ನು ಬಿಟ್ಟು ಲಸಿಕೆ ಹಾಕಿಸುವುದರಿಂದ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ. ಪೋಷಕರು ಆತಂಕಕ್ಕೆ ಒಳಗಾಗದೆ ಲಸಿಕೆ ಹಾಕಿಸಿ ಅಭಿಯಾನವನ್ನು ಯಶಸ್ವಿಗೊಳಿಸಬೇಕು ಎಂದು ಹೇಳಿದರು.

ಜಿಲ್ಲೆಯಲ್ಲಿ 7 ಲಕ್ಷದ 50 ಸಾವಿರ ಮಕ್ಕಳಿದ್ದು ಸುಮಾರು 3000 ಶಾಲೆಗಳಲ್ಲಿ ಲಸಿಕೆ ಹಾಕಲಾಗುವುದು. ಅಭಿಯಾನದ ಮೊದಲ ದಿನವಾದ ಮಂಗಳವಾರ 9 ತಿಂಗಳಿಂದ 5 ವರ್ಷದೊಳಗಿನ 10,044 ಮಕ್ಕಳಿಗೆ, 5ರಿಂದ 10ವರ್ಷದೊಳಗಿನ 29,913 ಮಕ್ಕಳಿಗೆ, 10ರಿಂದ 15ವರ್ಷದೊಳಗಿನ 34,721 ಮಕ್ಕಳು ಸೇರಿ ಒಟ್ಟು 74,678 ಮಕ್ಕಳಿಗೆ ಸುಮಾರು 722 ಕೇಂದ್ರಗಳಲ್ಲಿ ಲಸಿಕೆ ಹಾಕಲಾಗಿದೆ. ಎಲ್ಲಿಯೂ ಮಕ್ಕಳಿಗೆ ತೊಂದರೆಯಾಗಿಲ್ಲ. ಕೆಲ ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ವದಂತಿ ಹರಿಬಿಡುತ್ತಿದ್ದಾರೆ. ಇದಕ್ಕೆ ಪೋಷಕರು ಭಯಪಡಬಾರದು. ನಗರದ  ಕ್ಯಾತಮಾರನಹಳ್ಳಿ ಹಾಗೂ ಗೌಸಿಯಾನಗರದಲ್ಲೂ ಪೋಷಕರು ಲಸಿಕೆ ಹಾಕಿಸಲು ಭಯಪಡುತ್ತಿದ್ದರು. ಅರಿವು ಮೂಡಿಸಿದ ಮೇಲೆ ಸ್ವಯಂಪ್ರೇರಿತರಾಗಿ ಬಂದು ಲಸಿಕೆ ಹಾಕಿಸಿದರು. ತಮ್ಮ ಮಕ್ಕಳ ಭವಿಷ್ಯದ ದೃಷ್ಟಿಯಿಂದ ವದಂತಿಗಳನ್ನು ನಂಬದೆ ಲಸಿಕೆ ಹಾಕಿಸಿ ಎಂದು ಮನವಿ ಮಾಡಿದರು.

ಜಿಲ್ಲೆಯಲ್ಲಿ 21 ಹೆಚ್1ಎನ್1 ಪ್ರಕರಣಗಳು ವರದಿಯಾಗಿದ್ದು 8ರಲ್ಲಿ ಪಾಸಿಟಿವ್ ವರದಿ ಬಂದಿದೆ. ಅವರಲ್ಲಿ ನಾಲ್ವರು ಪೂರ್ಣ ಗುಣಮುಖರಾಗಿದ್ದು ಮನೆಗೆ ಮರಳಿದ್ದಾರೆ. ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು ಎಲ್ಲರೂ ಗುಣಮುಖರಾಗುತ್ತಿದ್ದಾರೆ. ಹೆಚ್1ಎನ್1  ಗಾಳಿಯಲ್ಲಿ ಒಬ್ಬರಿಂದ ಒಬ್ಬರಿಗೆ ಹರಡುವುದರಿಂದ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ಡಾ.ಎಸ್.ಗೋಪಿನಾಥ್, ಕೆಆರ್ ಆಸ್ಪತ್ರೆ ಡೀನ್ ಡಾ.ಕೃಷ್ಣಮೂರ್ತಿ, ಡಾ.ನಾಣಪ್ಪ ಉಪಸ್ಥಿತರಿದ್ದರು.

Leave a Reply

comments

Related Articles

error: