ಪ್ರಮುಖ ಸುದ್ದಿ

ಪ್ರಕೃತಿ ವಿಕೋಪ ಸಂದರ್ಭ ಸ್ಕೌಟ್ಸ್, ಗೈಡ್ಸ್ ನಿಂದ ಅಗತ್ಯ ಸಹಕಾರ : ಪಿಜಿಆರ್ ಸಿಂಧ್ಯಾ ಭರವಸೆ

ರಾಜ್ಯ(ಮಡಿಕೇರಿ)ಜೂ.1:- ಕೊಡಗು ಜಿಲ್ಲೆಯಲ್ಲಿ ಕಳೆದ ಬಾರಿ ಸಂಭವಿಸಿದ ಪ್ರಕೃತಿ ವಿಕೋಪದಿಂದಾಗಿ ಸಾಕಷ್ಟು ನಷ್ಟ ಉಂಟಾಗಿತ್ತು, ಆದ್ದರಿಂದ ಈ ಬಾರಿಯೂ ಅತೀವೃಷ್ಟಿ ಸಂಭವಿಸಿದಲ್ಲಿ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದ್ದು, ಅಂತಹ ಸಂದರ್ಭದಲ್ಲಿ ಪರಿಹಾರ ಕೇಂದ್ರಗಳಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ತಂಡದ ಸ್ವಯಂ ಸೇವಕರು ಅಗತ್ಯ ಸಹಕಾರ ನೀಡಲಿದ್ದಾರೆ ಎಂದು ರಾಜ್ಯ ಭಾರತೀಯ ಸ್ಕೌಟ್ಸ್ ಮತ್ತು ಗೈಡ್ಸ್ ಪ್ರಧಾನ ಆಯುಕ್ತರು ಹಾಗೂ ಮಾಜಿ ಸಚಿವರಾದ ಪಿ.ಜಿ.ಆರ್.ಸಿಂಧ್ಯಾ ಅವರು ತಿಳಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಜೂನ್ ತಿಂಗಳಿನಿಂದ ಆರಂಭವಾಗುವ ಮಳೆಗಾಲದ ಸಂದರ್ಭದಲ್ಲಿ ಕೊಡಗು ಜಿಲ್ಲೆಯಲ್ಲಿ ಯಾವುದೇ ರೀತಿಯ ಭೂ ಕುಸಿತ, ಪ್ರವಾಹ ಉಂಟಾದಲ್ಲಿ ಜನರ ರಕ್ಷಣೆಗೆ ಹಾಗೂ ಪುನರ್ ವಸತಿ ಕೇಂದ್ರಗಳ ಸ್ಥಾಪನೆ ಹಾಗೂ ನಿರ್ವಹಣೆಗೆ ಈಗಾಗಲೇ ಜಿಲ್ಲಾಡಳಿತ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದು, ಸ್ಕೌಟ್ಸ್ ಮತ್ತು ಗೈಡ್ಸ್ ತಂಡವು ಎಲ್ಲಾ ರೀತಿಯ ಸಹಕಾರ ನೀಡಲಿದೆ ಎಂದರು.
ಅತೀವೃಷ್ಟಿ ಉಂಟಾದ ಸಂದರ್ಭದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್‍ನ ಸ್ವಯಂ ಸೇವಕರು ಕಾರ್ಯ ನಿರ್ವಹಿಸಲು ಸನ್ನದ್ದರಾಗಿದ್ದು, ಜಿಲ್ಲಾಡಳಿತ ಈಗಾಗಲೇ ಗುರುತಿಸಿರುವ ಸೂಕ್ಷ್ಮ ಪ್ರದೇಶಗಳ ಜನರ ಅಗತ್ಯಕ್ಕೆ ಅನುಗುಣವಾಗಿ ಸ್ವಯಂ ಸೇವಕರನ್ನು ತಂಡ ತಂಡವಾಗಿ ನಿಯೋಜನೆ ಮಾಡಲಾಗುವುದು ಎಂದರು.
ನಿಯೋಜನೆ ಮಾಡುವಂತಹ ಸ್ಕೌಟ್ಸ್ ಮತ್ತು ಗೈಡ್ಸ್ ತಂಡದ ಸದಸ್ಯರುಗಳಿಗೆ ಜೂನ್ ಮೊದಲನೇ ವಾರದಲ್ಲಿ ಅಗತ್ಯ ತರಬೇತಿ ನೀಡುವಂತೆ ಪಿ.ಜಿ.ಆರ್.ಸಿಂದ್ಯಾ ಅವರು ಸಲಹೆ ಮಾಡಿದರು.
ರಾಜ್ಯದ ಬೇರೆ ಬೇರೆ ಪ್ರದೇಶಗಳಿಂದ ಕಾರ್ಯನಿರ್ವಹಿಸಲು ಬರುವ ಸ್ವಯಂ ಸೇವಕರಿಗೆ ಜಿಲ್ಲಾಡಳಿತವು ಸಾರಿಗೆ ಭತ್ಯೆಯನ್ನು ನೀಡುವಂತೆ ಅವರು ತಿಳಿಸಿದರು.
ಕರ್ನಾಟಕ ರಾಜ್ಯ ಈಜು ಸಂಸ್ಥೆ ಮತ್ತು ಬೆಂಗಳೂರಿನಲ್ಲಿ ಇರುವ ಬಸವನಗುಡಿ ಆಕ್ವೆಟಿಕ್ ಸೆಂಟರ್‍ನ ನುರಿತ ಈಜುಗಾರರನ್ನು ಅಗತ್ಯವಿದ್ದಲ್ಲಿ ಬಳಸಿಕೊಳ್ಳುವಂತೆ ಅವರು ಸೂಚನೆ ನೀಡಿದರು.
ಪುನರ್ ವಸತಿ ಕೇಂದ್ರಗಳಲ್ಲಿ ಸ್ಥಳಾಂತರವಾಗುವ ಜನರಿಗೆ ಮನೋಸ್ಥೈರ್ಯ ಹೆಚ್ಚಿಸುವ ಕೆಲಸಕ್ಕೆ ನಿಮ್ಹಾನ್ಸ್ ಸಂಸ್ಥೆಯಿಂದ ಮನೋ ವೈದ್ಯರ ತಂಡವಿದ್ದು ಅವರು ಉಚಿತವಾಗಿ ಬಂದು ಸೇವೆಯನ್ನು ನೀಡುತ್ತಾರೆ. ಇವರನ್ನು ಕೂಡ ಅವಶ್ಯವಿದ್ದಲ್ಲಿ ಸಂಪರ್ಕಿಸುವಂತೆ ಅವರು ತಿಳಿಸಿದರು.
ಪುನರ್ ವಸತಿ ಕೇಂದ್ರಗಳಲ್ಲಿ ಉತ್ತಮ ಕಾರ್ಯ ಚಟುವಟಿಕೆಯನ್ನು ಸ್ಕೌಟ್ಸ್ ಮತ್ತು ಗೈಡ್ಸ್ ತಂಡದಿಂದ ಹಮ್ಮಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಜಿ.ಪಂ.ಸಿಇಒ ಕೆ.ಲಕ್ಷ್ಮಿಪ್ರಿಯ ಅವರು ಮಾತನಾಡಿ ಪುನರ್ ವಸತಿ ಕೇಂದ್ರ ನಿರ್ವಹಣೆಗೆ ಭಾರತೀಯ ಸ್ಕೌಟ್ಸ್ ಮತ್ತು ಗೈಡ್ಸ್ ತಂಡದ ಸೇವೆಯನ್ನು ಪಡೆಯಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
ಮುನ್ನೆಚ್ಚರಿಕೆ ಕ್ರಮವಾಗಿ ಅತೀವೃಷ್ಟಿ ಉಂಟಾದ ಸಂದರ್ಭದಲ್ಲಿ ಜನರನ್ನು ಪುನರ್ ವಸತಿ ಕೇಂದ್ರಗಳಿಗೆ ಸ್ಥಳಾಂತರಗೊಳಿಸಲಾಗುವುದು. ಪುನರ್ ವಸತಿ ಕೇಂದ್ರಗಳ ನಿರ್ವಹಣೆಗೆ ಸ್ವಯಂ ಸೇವಕರ ಅವಶ್ಯಕತೆ ಇದ್ದು, ಸ್ಕೌಟ್ಸ್ ಮತ್ತು ಗೈಡ್ಸ್, ರೋವರ್ಸ್ ಅಂಡ್ ರೇಂಜರ್ಸ್ ಇವರ ಸೇವೆ ಪಡೆಯಲಾಗುತ್ತದೆ ಎಂದರು.
ಕಳೆದ ಬಾರಿ ಅತೀವೃಷ್ಟಿ ಸಂದರ್ಭದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್, ರೋವರ್ಸ್ ಅಂಡ್ ರೇಂಜರ್ಸ್ ಅವರ ಸೇವೆ ಅತ್ಯಂತ ಪ್ರಶಂಸನೀಯವಾದದ್ದು. ಈ ಬಾರಿಯು ಕೂಡ ಸ್ವಯಂ ಸೇವಕರ ಅವಶ್ಯಕತೆ ಇದ್ದು, ಪುನರ್ ವಸತಿ ಕೇಂದ್ರದಲ್ಲಿ ಕಾರ್ಯ ಚಟುವಟಿಕೆಗಳನ್ನು ನಿಭಾಯಿಸುವುದು ಅಗತ್ಯ ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಶಿವರಾಜು ಅವರು ಮಾತನಾಡಿ ಜಿಲ್ಲಾಡಳಿತ ವತಿಯಿಂದ ಸ್ಕೌಟ್ಸ್ ಮತ್ತು ಗೈಡ್ಸ್ ತಂಡಗಳಿಗೆ, ರೋವರ್ಸ್ ಅಂಡ್ ರೇಂಜರ್ಸ್ ತಂಡಗಳಿಗೆ ಅಗತ್ಯ ಪೂರ್ವ ತರಬೇತಿ ನೀಡಲು ಎಲ್ಲಾ ರೀತಿಯ ಸಹಕಾರವನ್ನು ನೀಡಲಾಗುವುದು. ಮತ್ತು ಈ ತಂಡಗಳು ನಿರ್ವಹಿಸುವ ಕೆಲಸಗಳ ಪಟ್ಟಿಯನ್ನು ನೀಡುವಂತೆ ಸ್ಕೌಟ್ಸ್ ಮತ್ತು ಗೈಡ್ಸ್ ಮುಖ್ಯಸ್ಥರಿಗೆ ಅವರು ತಿಳಿಸಿದರು.
ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಪ್ರಧಾನ ಆಯುಕ್ತರಾದ ಕಾಳಪ್ಪ ಅವರು ಮಾತನಾಡಿ ಪರಿಹಾರ ಕೇಂದ್ರಗಳಿಗೆ ಪೂರೈಕೆಯಾಗುವ ಆಹಾರ ಪದಾರ್ಥಗಳು, ದಿನ ಬಳಕೆ ವಸ್ತುಗಳು ಅವಶ್ಯವಾಗಿ ಅರ್ಹರಿಗೆ ತಲುಪುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ಯುನಿಸೆಫ್ ಜಿಲ್ಲಾ ಸಮಾಲೋಚಕರಾದ ಎಂ.ಪ್ರಭಾತ್ ಅವರು ಸಭೆಗೆ ಹಲವು ಮಾಹಿತಿ ನೀಡಿದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಮಚ್ಚಾಡೋ ಅವರು ಮಾತನಾಡಿ ಸ್ಕೌಟ್ಸ್ ಮತ್ತು ಗೈಡ್ಸ್ ತಂಡಗಳ ದಿನಚರಿಯನ್ನು ಪರಿಹಾರ ಕೇಂದ್ರದಲ್ಲಿ ಬರುವಂತಹ ಜನರ ದಿನಚರಿಯಲ್ಲಿ ಅಳವಡಿಸುವಂತೆ ಅವರು ಸಲಹೆ ನೀಡಿದರು.
ಸಭೆಯಲ್ಲಿ ಭಾರತೀಯ ಸ್ಕೌಟ್ಸ್ ಮತ್ತು ಗೈಡ್ಸ್ ನ ರಾಜ್ಯ ಕಾರ್ಯದರ್ಶಿ ಗಂಗಪ್ಪ ಗೌಡ, ಭಾರತೀಯ ಸ್ಕೌಟ್ಸ್ ಮತ್ತು ಗೈಡ್ಸ್ ನ ರಾಜ್ಯ ಸಂಘಟನಾ ಆಯುಕ್ತರಾದ ಪ್ರಭಾಕರ ಭಟ್, ಸ್ಕೌಟ್ಸ್ ಮತ್ತು ಗೈಡ್ಸ್‍ನ ಜಿಲ್ಲಾ ಆಯುಕ್ತರಾದ ಜಿಮ್ಮಿ ಸಿಕ್ವೇರಾ, ಜಿಲ್ಲಾ ಸಂಘಟಕರಾದ ದಮಯಂತಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಕೆಂಚಪ್ಪ, ಇತರರು ಹಾಜರಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: