ಪ್ರಮುಖ ಸುದ್ದಿಮೈಸೂರು

ಅಧಿಕಾರ ಯಾವತ್ತೂ ಶಾಶ್ವತವಲ್ಲ, ನಾವು ಮಾಡಿದ ಕೆಲಸಗಳು ಮಾತ್ರ ಯಾವತ್ತು ಜನರ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಸಿರುತ್ತದೆ : ಸಚಿವ ಜಿ.ಟಿ.ದೇವೇಗೌಡ

ಮೈಸೂರು, ಜೂ.1:- ಅಧಿಕಾರ ಯಾವತ್ತೂ ಶಾಶ್ವತವಲ್ಲ. ಇಂದು ಬರತ್ತೆ ನಾಳೆ ಹೋಗತ್ತೆ. ಆದರೆ  ನಾವು ಮಾಡಿದ ಕೆಲಸಗಳು ಮಾತ್ರ ಯಾವತ್ತು ಜನರ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಸಿರುತ್ತದೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ತಿಳಿಸಿದರು.

ಅವರು ಸರಸ್ವತಿಪುರಂನಲ್ಲಿರುವ ಶ್ರೀಕೃಷ್ಣಧಾಮದಲ್ಲಿಂದು ರಜತಮಹೋತ್ಸವದ ಕಾರ್ಯಕ್ರಮದ 8ನೇ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಮೈಸೂರು ಸಾಂಸ್ಕೃತಿಕ, ಸಾಹಿತ್ಯಗಳ ರಾಜಧಾನಿ. ನಗರದಲ್ಲಿ 25ವರ್ಷಗಳಿಂದ ಈ ಸಂಸ್ಥೆಯಿದೆ. ಶ್ರೀಕೃಷ್ಣ, ಆಂಜನೇಯ ಎಲ್ಲ ದೇವರನ್ನು ಪ್ರತಿಷ್ಠಾಪನೆ ಮಾಡಿದ್ದಾರೆ. ಎಲ್ಲರಿಗೂ ಸುಖ-ಶಾಂತಿ ನೀಡಬೇಕು ಎಂಬ ಸದುದ್ದೇಶವಿದೆ. ಬದುಕು ಶಾಶ್ವತವಲ್ಲ. ಯಾವತ್ತೂ ಕೂಡ ಶಾಂತಚಿತ್ತರಾಗಿ ಭಕ್ತಿಯಿಂದ ನೆಮ್ಮದಿಯಿಂದ ಬದುಕನ್ನು ಮಾಡಿದಾಗ ಮಾತ್ರ ಬದುಕು ಸಾರ್ಥಕ ಎಂದರು. ಆ ಕಲ್ಪನೆಯಿಟ್ಟೇ ಈ ಸಂಸ್ಥೆ ಆರಂಭಿಸಿ ಬಹಳಷ್ಟು ಜನರಿಗೆ ಶ್ರೀಕೃಷ್ಣನ ಸಂದೇಶವನ್ನು, ಗುರು ರಾಘವೇಂದ್ರದ ಸಂದೇಶವನ್ನು ನೀಡುವ ಕಾರ್ಯ ನಡೆಯುತ್ತಿದೆ. ನರೇಂದ್ರ ಮೋದಿಯವರು ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದ  ಸಂದರ್ಭದಲ್ಲಿ ವಿಶ್ವೇಶತೀರ್ಥರು ವಿಜೃಂಭಿಸುತ್ತಿದ್ದರು. ಅತ್ಯಂತ ಸಂತೋಷದಿಂದ ಅವರು ನಿರ್ಮಲಾನಂದ ಸ್ವಾಮೀಜಿಗಳ ಜೊತೆಗೆ ಹೋಗಿ ದೇಶಕ್ಕೆ ಒಳ್ಳೆಯದಾಗತ್ತೆ ಎಂದು ಮೋದಿಯವರ ಸರ್ಕಾರಕ್ಕೆ, ಕೇಂದ್ರ ಸರ್ಕಾರಕ್ಕೆ ಆಶೀರ್ವಾದ ಮಾಡಿ ಬಂದಿದ್ದಾರೆ. ದೇಶಕ್ಕೆ ಮಳೆ-ಬೆಳೆ ಸೌಖ್ಯ, ಸಮೃದ್ಧಿ ಇರಲಿದೆ ಎಂಬ ಕನಸು ಇಟ್ಟುಕೊಂಡಿದ್ದೇನೆ ಎಂದರು.

ಮೈಸೂರಿಗೆ ಮಳೆ ಬರೋದೆ ಕಷ್ಟ. ಈಗ ಮಳೆ ಆರಂಭವಾಗಿದೆ. ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಐದಾರು ವರ್ಷದಿಂದ ಕುಡಿಯುವ ನೀರಿಗೆ ಬಹಳಷ್ಟು ಹೋರಾಟ ನಡೆಸಿದ್ದೇವೆ. ಐದತ್ತು ವರ್ಷಗಳಲ್ಲಿ ಮೈಸೂರಿಗೆ ಶಾಶ್ವತ ಕುಡಿಯುವ ನೀರು ಕೊಡಬೇಕೆಂಬುದು ನಮ್ಮ ಆಸೆ. ಮೈಸೂರಿಗರು ಕಾವೇರಿ ನದಿಯ ಪಕ್ಕದಲ್ಲಿದ್ದಾರೆ, ಅವರಿಗೆ ನೀರಿನ ಸಮಸ್ಯೆಯಿಲ್ಲ ಎಂದು ಎಲ್ಲರೂ ತಿಳಿದಿದ್ದಾರೆ. ಆದರೆ ಮೈಸೂರಿಗಿರುವಷ್ಟು ಕುಡಿಯುವ ನೀರಿನ ತೊಂದರೆ ಬೇರೆಲ್ಲೂ ಕಾಣಿಸುವುದಿಲ್ಲ. ಮಳೆ ಬಹಳ ಮುಖ್ಯ ಎಂದು ತಿಳಿಸಿದರು.

25ನೇ ರಜತಮಹೋತ್ಸವವನ್ನು ಬಹಳ ಭಕ್ತಿಯಿಂದ ಮಾಡಿದ್ದೀರಿ. ನಾವು ಸಿದ್ದಗಂಗಾ ಶ್ರೀಗಳನ್ನು ನಡೆದಾಡುವ ದೇವರು ಎಂದಿದ್ದೆವು. ವಿಶ್ವೇಶ ತೀರ್ಥರು ಓಡಾಡುವ ದೇವರು. ದೆಹಲಿಯಿಂದ ಉಡುಪಿಗೆ ಹೋಗಿ ಅಲ್ಲಿಂದ ಮತ್ತೆ ಮೈಸೂರಿಗೆ ಬಂದಿದ್ದಾರೆ. ಅವರ ಆಶೀರ್ವಾದ ಎಲ್ಲರ ಮೇಲಿರಲಿ ಎಂದರು. ಕೃಷ್ಣಧಾಮ ಸಂಸ್ಥೆಯಲ್ಲಿ ಪಿಯು ಕಾಲೇಜಿಗೆ ಅನುಮತಿ ಸಿಕ್ಕಿಲ್ಲ ಎಂದಿದ್ದರು. ಆದರೆ ಅನುಮತಿ ಕೊಡಿಸಲಾಗುವುದು ಎಂಬ ಭರವಸೆ ನೀಡಿದರು. ಮಕ್ಕಳಿಗೆ ಶಿಕ್ಷಣ ಆರೋಗ್ಯ ಮುಖ್ಯ. ಯಾರಿಗೂ ಅಧಿಕಾರ ಶಾಶ್ವತವಲ್ಲ. ನಾವು ಅಧಿಕಾರದಲ್ಲಿದ್ದಾಗ ಏನೆಲ್ಲ ಕೆಲಸ ಮಾಡಿದ್ದೇವೆ ಅದು ಶಾಶ್ವತವಾಗಿ ಉಳಿಯುತ್ತದೆ ಎಂದರು.

ಪೇಜಾವರ ವಿಶ್ವೇಶತೀರ್ಥ ಶ್ರೀಪಾದರು ಆಶೀರ್ವಚನ ನೀಡಿ ಭಗವಂತನನ್ನು ಭಕ್ತಿಯಿಂದ ಚಿಂತನೆ ಮಾಡಿದರೆ ಯೋಗಕ್ಷೇಮ ನೋಡಿಕೊಳ್ಳುತ್ತಾನೆ. ನಾವು ದೇವರಿಗಾಗಿ ವೃತ ಮಾಡಿದರೆ ಭಗವಂತ ಭಕ್ತರಿಗಾಗಿ ವೃತ ಮಾಡುತ್ತಾನೆ. ನಾವು ಮಾಡುವ ಕೆಲಸದಲ್ಲಿ ಶ್ರದ್ಧೆ ಮತ್ತು ಭಕ್ತಿಯಿದ್ದರೆ ಅದು ಭಗವಂತನಿಗೆ ತಲುಪುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಶಾಸಕರಾದ ಎಲ್.ನಾಗೇಂದ್ರ, ಎಸ್.ಎ.ರಾಮದಾಸ್, ಮೇಯರ್ ಪುಷ್ಪಲತಾ ಜಗನ್ನಾಥ್, ಕಿರಿಯ ಸ್ವಾಮೀಜಿಗಳಾದ ವಿಶ್ವಪ್ರಸನ್ನ ತೀರ್ಥರು ವಿ.ಜಯರಾಂ ಭಟ್, ಶ್ರೀಕೃಷ್ಣ ಟ್ರಸ್ಟ್ ಉಪಾಧ್ಯಕ್ಷ ಪಿ.ಜಯರಾಂ ಭಟ್, ಅಧ್ಯಕ್ಷ ರವಿಶಾಸ್ತ್ರಿ ಮತ್ತಿತರರು ಉಪಸ್ಥಿತರಿದ್ದರು.

ಇದೇ ವೇಳೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: