
ಕರ್ನಾಟಕ
ದುಷ್ಕರ್ಮಿಗಳಿಂದ ದಲಿತರ ಗುಡಿಸಲುಗಳಿಗೆ ಬೆಂಕಿ
ಬೆಂಗಳೂರು,ಜೂ.1-ದಲಿತರ ಗುಡಿಸಲುಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿರುವ ಘಟನೆ ಹಾಸನ ಜಿಲ್ಲೆ ಬೇಲೂರು ತಾಲೂಕಿನ ತಟ್ಟೆಹಳ್ಳಿ ಗ್ರಾಮದ ಗೋಮಾಳದಲ್ಲಿ ನಡೆದಿದೆ.
ಸವರ್ಣೀಯರಾದ ಕಾರ್ತಿಕ ಹಾಗೂ ರುದ್ರಣ್ಣ ಎಂಬವರು ಬೆಂಕಿ ಹಚ್ಚಿ ಧ್ವಂಸ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ತಟ್ಟೆಹಳ್ಳಿ ಗ್ರಾಮದಲ್ಲಿ ಸುಮಾರು 80 ದಲಿತ ಕುಟುಂಬಗಳು ಇದ್ದು, ಒಂದು ಎಕರೆ ಎಂಟು ಗಂಟೆ ಜಾಗದಲ್ಲಿ ಸುಮಾರು 50 ಕುಟುಂಬಗಳಿವೆ. ಇವರು ಹಸು ಸಾಕಣೆ, ಕುರಿ ಸಾಕಣೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಇಲ್ಲಿ ಜಾಗ ಸಾಲುತ್ತಿಲ್ಲವೆಂದು ನಾಲ್ಕೈದು ದಲಿತ ಕುಟುಂಬಗಳು ಗ್ರಾಮದ ಸರ್ವೇ ನಂಬರ್ 51ರಲ್ಲಿ ಇರುವ 30 ಎಕರೆ 38 ಗುಂಟೆ ಸರ್ಕಾರಿ ಗೋಮಾಳದಲ್ಲಿ ಗುಡಿಸಲನ್ನು ನಿರ್ಮಿಸಿಕೊಂಡಿದ್ದರು. ಈ ವೇಳೆ ಕಾರ್ತಿಕ, ರುದ್ರಣ್ಣ ಗುಡಿಸಲುಗಳಿಗೆ ಬೆಂಕಿ ಹಚ್ಚಿದ್ದಾರೆ ಎನ್ನಲಾಗುತ್ತಿದೆ.
ದಲಿತ ಮುಖಂಡರು ತಟ್ಟೆಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ನೊಂದ ದಲಿತ ಕುಟುಂಬಗಳಿಗೆ ನ್ಯಾಯ ಕೊಡಿಸಬೇಕು. ಆ ಸ್ಥಳದಲ್ಲಿ ದಲಿತರು ವಾಸಿಸಲು ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾರೆ. (ಎಂ.ಎನ್)