ಪ್ರಮುಖ ಸುದ್ದಿಮೈಸೂರು

ನೈಜಕಥೆಯಾಧಾರಿತ ಚಲನಚಿತ್ರ ‘ರಾಜಲಕ್ಷ್ಮಿ’ ಆಗಸ್ಟ್ ನಲ್ಲಿ ಬಿಡುಗಡೆ

ಮೈಸೂರು,ಜೂ.1 : ಮಂಡ್ಯ ಜಿಲ್ಲೆ ಕೆರಗೋಡು ಹೋಬಳಿಯ ಸಿದ್ದೇಗೌಡನ ದೊಡ್ಡಿ ಗ್ರಾಮದಲ್ಲಿ ನಡೆದ ನೈಜ ಕಥೆಯನ್ನೇ ಚಿತ್ರ ಕಥಾ ವಸ್ತುವನ್ನಾಗಿಸಿಕೊಂಡು ನಿರ್ಮಾಣಗೊಂಡಿರುವ ‘ರಾಜಲಕ್ಷ್ಮಿ’ ಚಲನಚಿತ್ರ ಮುಂದಿನ ಆಗಸ್ಟ್ ನಲ್ಲಿ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರ ತಂಡವು ಘೋಷಿಸಿತು.

ನಿರ್ಮಾಪಕ ಮೋಹನ್ ಕುಮಾರ್ ಶನಿವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಅಚ್ಚ ಮಂಡ್ಯ ಕನ್ನಡವೇ ಚಿತ್ರದ ಭಾಷೆಯಾಗಿದ್ದು, ನಾಯಕನಾಗಿ ನವೀನ್ ತೀರ್ಥಹಳ್ಳಿ, ನಾಯಕಿಯಾಗಿ ರಶ್ಮಿ ಗೌಡ, ಹಿರಿಯ ನಟರಾದ ಟೆನ್ನಿಸ್ ಕೃಷ್ಣ, ಹೊನ್ನವಳ್ಳಿ ಕೃಷ್ಣ, ರಂಗಭೂಮಿ ಕಲಾವಿದೆ ನಾಗರತ್ನ, ಚಂದ್ರಪ್ರಭಾ, ಮಜಾಭಾರತ ಸೇರಿದಂತೆ ಸುಮಾರು ಸಾವಿರಕ್ಕೂ ಹೆಚ್ಚು ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದಾರೆ ಎಂದು ತಿಳಿಸಿದರು.

ಕಾಂತರಾಜ್ ನಿರ್ದೇಶನದಲ್ಲಿ ಮೂಡಿರುವ ಚಿತ್ರಕ್ಕೆ ಎ.ಟಿ.ರವೀಶ್ ಸಂಗೀತ ನೀಡಿದ್ದಾರೆ, ಇದೊಂದು ಗ್ರಾಮೀಣ ಸೊಗಡಿನ ಪ್ರೇಮಕಥೆಯ ಸಂಪೂರ್ಣ ಮನೋರಂಜನಾತ್ಮಕ ಚಿತ್ರವಾಗಿದೆ, ಮಂಡ್ಯ, ಮೈಸೂರು ಹಾಗೂ ಬೆಂಗಳೂರಿನಲ್ಲಿ ಚಿತ್ರೀಕರಿಸಲಾಗಿದ್ದು ಎಂಟು ನೂರಕ್ಕೂ ಹೆಚ್ಚು ಸ್ಥಳೀಯ ಕಲಾವಿದರು ಅಭಿನಯಿಸಿದ್ದಾರೆ ಎಂದು ಹೇಳಿದರು.

ಚಿತ್ರದ ಹಾಡುಗಳಿಗೆ ಯೂಟ್ಯೂಬ್ ನಲ್ಲಿ ಮೆಚ್ಚುಗೆ ಗಳಿಸಿದ್ದು, ಉತ್ತಮ ಹಾಡು, ಫೈಟ್, ಹಾಸ್ಯದ ಸಮ್ಮಿಶ್ರಣದ ಚಿತ್ರವಾಗಿದ್ದು, ಸಿನಿಪ್ರಿಯರನ್ನು ಸೆಳೆಯುವ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಚಿತ್ರದ ನಾಯಕ ನವೀನ್ ತೀರ್ಥಹಳ್ಳಿ, ನಾಯಕಿ ರಶ್ಮಿಗೌಡ, ನಿರ್ದೆಶಕ ಕಾಂತರಾಜ್ ಹಾಗೂ ಇತರರು ಚಿತ್ರದ ಬಗ್ಗೆ ಅನುಭವ ಹಂಚಿಕೊಂಡರು.

ಕಲಾವಿದರಾದ ಚಂದ್ರಪ್ರಭಾ, ನಾಗರತ್ನ ಹಾಗೂ ಇತರರು ಗೋಷ್ಠಿಯಲ್ಲಿ ಹಾಜರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: