ಕರ್ನಾಟಕಪ್ರಮುಖ ಸುದ್ದಿಮೈಸೂರು

ಫೆ. 9ರಂದು ಅಂತಾರಾಷ್ಟ್ರೀಯ ಸಿನಿಮೋತ್ಸವಕ್ಕೆ ವರ್ಣರಂಜಿತ ಸಮಾರೋಪ

ವಿಶುಕುಮಾರ್

ಬೆಂಗಳೂರು ಮತ್ತು ಮೈಸೂರಿನಲ್ಲಿ ಏಕಕಾಲದಲ್ಲಿ ಆಯೋಜಿಸಿದ್ದ 9ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದ (ಬಿಫೆಸ್) ಪ್ರಶಸ್ತಿ ಪ್ರದಾನ ಹಾಗೂ ಸಮಾರೋಪ ಸಮಾರಂಭ ಸಾಂಸ್ಕೃತಿಕ ರಾಜಧಾನಿ ಮೈಸೂರಿನ ಅರಮನೆ ಮುಂದೆ ಫೆ. 9 ರಂದು ಸಂಜೆ 6.30 ನಡೆಯಲಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಇಲಾಖೆ ನಿರ್ದೇಶಕ ವಿಶುಕುಮಾರ್ ತಿಳಿಸಿದ್ದಾರೆ.

ರಾಜ್ಯಪಾಲರಾದ ವಜುಭಾಯಿ ರುಡಾಭಾಯಿ ವಾಲಾ ಅವರು ಸಿನಿಮೋತ್ಸವದ ಪ್ರಶಸ್ತಿ ಪ್ರದಾನ ಮಾಡುವರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಮುಖ್ಯಅತಿಥಿಗಳಾಗಿ ಲೋಕೋಪಯೋಗಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಹೆಚ್.ಸಿ. ಮಹದೇವಪ್ಪ, ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವರಾದ ತನ್ವೀರ್ ಸೇಠ್, ಪ್ರವಾಸೋದ್ಯಮ ಸಚಿವರಾದ ಪ್ರಿಯಾಂಕ್ ಖರ್ಗೆ, ಮೈಸೂರು ಮಹಾನಗರ ಪಾಲಿಕೆ ಮಹಾಪೌರ ಎಂ.ಜೆ. ರವಿಕುಮಾರ್, ಸಂಸದ ಪ್ರತಾಪ್ ಸಿಂಹ, ಶಾಸಕ ಎಂ.ಕೆ.ಸೋಮಶೇಖರ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು ಭಾಗವಹಿಸುವರು.

ಮನರಂಜನಾ ಕಾರ್ಯಕ್ರಮ: ಖ್ಯಾತ ನೃತ್ಯ ಕಲಾವಿದರಾದ ನಿರುಪಮಾ ರಾಜೇಂದ್ರ ಹಾಗೂ ತಂಡದವರಿಂದ ಸಿನಿಮೋತ್ಸವದ ಅಂಗವಾಗಿ ನೃತ್ಯ ರೂಪಕ ಹಾಗೂ ಹೆಸರಾಂತ ಚಲನಚಿತ್ರ ಕಲಾವಿದರ ತಂಡಗಳಿಂದ ಮನರಂಜನಾ ಕಾರ್ಯಕ್ರಮಗಳನ್ನು ಸಿನಿಮೋತ್ಸವದ ಅಂಗವಾಗಿ ಏರ್ಪಡಿಸಲಾಗಿದೆ.

ಕಳೆದ ವರ್ಷ ಆಯೋಜಿಸಿದ್ದ 8ನೇ ಅಂತಾರಾಷ್ಟ್ರೀಯ ಸಿನಿಮೋತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ಕರ್ನಾಟಕದ ಇತಿಹಾಸ ಹಾಗೂ ಪರಂಪರೆ ಬಿಂಬಿಸುವ ನೃತ್ಯ ರೂಪಕ ಪ್ರದರ್ಶಿಸಿದ್ದ ನಿರುಪಮಾ ರಾಜೇಂದ್ರ ಅವರು, ಈ ಸಮಾರೋಪ ಕಾರ್ಯಕ್ರಮದಲ್ಲಿ ‘ಸಿಲ್ವರ್ ಟು ಸಿಲಿಕಾನ್’ ಹಾಗೂ ‘ಸಂಭ್ರಮ’ ನೃತ್ಯ ರೂಪಕ ಪ್ರಸ್ತುತಿ ಪಡಿಸುವರು. ಇದಲ್ಲದೆ, ಚಲನಚಿತ್ರ ನಾಯಕ ನಟ ನಟಿಯರು ಮನರಂಜನಾ ಕಾರ್ಯಕ್ರಮ ನೀಡಲಿದ್ದಾರೆ.

ನಾಲ್ಕು ವಿಭಾಗಗಳಲ್ಲಿ 10 ಪ್ರಶಸ್ತಿಗಳು: ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಒಟ್ಟು 18 ವಿಭಾಗಗಲ್ಲಿ 240 ಚಿತ್ರಗಳು ಪ್ರದರ್ಶನ ಕಂಡಿದ್ದು, ಕನ್ನಡದ 40 ಚಿತ್ರಗಳೂ ಸೇರಿವೆ.  ಈ ಪೈಕಿ 4 ನಾಲ್ಕು ವಿಭಾಗಗಳಲ್ಲಿ ಒಟ್ಟು 10 ಪ್ರಶಸ್ತಿಗಳನ್ನು ತೀರ್ಪುಗಾರರು ಸಮಾರೋಪ ಸಮಾರಂಭದಲ್ಲಿ ಪ್ರಕಟಿಸಲಿದ್ದು, ರಾಜ್ಯಪಾಲರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಕನ್ನಡ ಸಿನಿಮಾಗಳ ವಿಭಾಗ ಹಾಗೂ ಕನ್ನಡ ಜನಪ್ರಿಯ ಸಿನಿಮಾಗಳ ವಿಭಾಗದಲ್ಲಿ ಪ್ರಶಸ್ತಿ ನೀಡಲಾಗುತ್ತದೆ. ಕನ್ನಡ ಸಿನಿಮಾಗಳ ವಿಭಾಗದಲ್ಲಿ ಅತ್ಯುತ್ತಮ ಮೊದಲ, ದ್ವಿತೀಯ ಹಾಗೂ ತೃತೀಯ ಚಿತ್ರಗಳ ಜೊತೆಗೆ 1 ಅಂತಾರಾಷ್ಟ್ರೀಯ ಜ್ಯೂರಿ ಪ್ರಶಸ್ತಿಯನ್ನು ನೀಡಲಾಗುತ್ತದೆ. ಕನ್ನಡ ಜನಪ್ರಿಯ ಸಿನಿಮಾಗಳಲ್ಲಿ ಅತ್ಯುತ್ತಮ ಮೊದಲ, ದ್ವಿತೀಯ ಹಾಗೂ ತೃತೀಯ ಸಿನಿಮಾ ಪ್ರಶಸ್ತಿ ನೀಡಲಾಗುತ್ತದೆ.

ಭಾರತೀಯ ಸಿನಿಮಾ ವಿಭಾಗದಲ್ಲಿ 2 ಅತ್ಯುತ್ತಮ ಜ್ಯೂರಿ ಪ್ರಶಸ್ತಿ ಹಾಗು 1 ವಿಮರ್ಶಕರ ಪ್ರಶಸ್ತಿ ನೀಡಲಾಗುತ್ತದೆ. ಇದಲ್ಲದೆ ಏಷ್ಯಾ ವಿಭಾಗದಲ್ಲಿ 1 ಅತ್ಯುತ್ತಮ ಸಿನಿಮಾ ಪ್ರಶಸ್ತಿ ನೀಡಲಾಗುತ್ತದೆ.

ಹಂಪಿ ವಿಜಯವಿಠಲ ಮಾದರಿ ವೇದಿಕೆ: ಅಂತಾರಾಷ್ಟ್ರೀಯ ಸಿನಿಮೋತ್ಸವದ ಸಮಾರೋಪವನ್ನು ಹೆಚ್ಚು ಅವಿಸ್ಮರಣೀಯವಾಗಿಸಲು ವಿಶ್ವಸಂಸ್ಥೆಯ ಪಾರಂಪರಿಕ ಸ್ಮಾರಕವಾಗಿರುವ ಹಂಪಿಯ ‘ವಿಜಯ ವಿಠಲ’ ದೇವಸ್ಥಾನದ ಮಾದರಿಯಲ್ಲಿ ಬೃಹತ್ ವೇದಿಕೆಯನ್ನು ನಿರ್ಮಿಸಲಾಗಿದೆ. ವೇದಿಕೆಯು 72*64 ಅಡಿ ವಿಸ್ತಾರ, 4 ಅಡಿ ಎತ್ತರವಿದ್ದು, ಅರಮನೆಯ ಹಿನ್ನೋಟದಲ್ಲಿ ಅತ್ಯಂತ ಸುಂದರವಾಗಿ ಮೂಡಿ ಬಂದಿದೆ. ಒಟ್ಟು 8000 ಆಸನಗಳ ವ್ಯವಸ್ಥೆಯನ್ನು ಮಾಡಲಾಗಿದೆ.

ಜಯಮಾರ್ತಾಂಡ ಗೇಟ್ ಪಾಸ್ ಹೊಂದಿದವರಿಗೆ ವರಹಾ ದ್ವಾರದಲ್ಲಿ ಪ್ರವೇಶ: ಪಾಸ್ ಹೊಂದಿದ ಗಣ್ಯ ವ್ಯಕ್ತಿಗಳು, ತೀರ್ಪುಗಾರರು, ಕಲಾವಿದರು, ಮಾಧ್ಯಮದವರಿಗೆ ಅರಮನೆಯ ಕರಿಕಲ್ಲು ತೊಟ್ಟಿ ಗೇಟ್ ಮೂಲಕ ಪ್ರವೇಶ ನೀಡಲಾಗಿದೆ.

ಪಾಸ್ ಹೊಂದಿದ ‘ಆಹ್ವಾನಿತರಿಗೆ’ ಜಯಮಾರ್ತಾಂಡ ಗೇಟ್ ಬದಲಿಗೆ ವರಹಾ ಗೇಟ್ ಮೂಲಕ ಪ್ರವೇಶ ನೀಡಲಾಗುತ್ತದೆ. ಆಹ್ವಾನಿತರ ಪಾಸ್‍ನಲ್ಲಿ ಜಯಮಾರ್ತಾಂಡ ಗೇಟ್ ಪ್ರವೇಶ ಎಂದು ನಮೂದಿಸಲಾಗಿದ್ದು, ಈ ರಸ್ತೆಯಲ್ಲಿ ದುರಸ್ಥಿ ಕಾರ್ಯ ನಡೆದಿರುವ ಹಿನ್ನೆಲೆಯಲ್ಲಿ ಆಹ್ವಾನಿತರ ಪಾಸ್ ಹೊಂದಿದವರಿಗೆ ವರಹಾ ಗೇಟ್ ಮೂಲಕ ಪ್ರವೇಶ ಕಲ್ಪಿಸಲಾಗಿದ್ದು, ಈ ಬದಲಾವಣೆ ಗಮನಿಸಬೇಕು ಎಂದು ತಿಳಿಸಿದ್ದಾರೆ.

Leave a Reply

comments

Related Articles

error: