ಕರ್ನಾಟಕಪ್ರಮುಖ ಸುದ್ದಿ

ಬಾವಾ ಅಧಿಕಾರ ಸ್ವೀಕಾರಕ್ಕೆ ರಾಜ್ಯ ಸರ್ಕಾರ ತಡೆ! ಕಾಂಗ್ರೆಸ್‍ ರಾಜಕೀಯ ಕಾರಣ?

ಬೆಂಗಳೂರು (ಜೂ.1): ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರಾಗಿ ನೇಮಕಗೊಂಡಿರುವ ಜಿ.ಎ. ಬಾವಾ ಅವರ ಅಧಿಕಾರ ಸ್ವೀಕಾರಕ್ಕೆ ರಾಜ್ಯ ಸರ್ಕಾರ ಹಠಾತ್‌ ಅಡ್ಡಗಾಲು ಹಾಕಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಎರಡು ದಿನಗಳ ಹಿಂದೆ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾಗಿ ಜಿ.ಎ. ಬಾವಾ ಅವರನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿತ್ತು. ಶುಕ್ರವಾರ ಸಂಜೆ 4 ಗಂಟೆಗೆ ಬಾವಾ ಅವರು ಪದಗ್ರಹಣ ಮಾಡಬೇಕಿತ್ತು. ಆದರೆ, ಅಧಿಕಾರ ಸ್ವೀಕಾರಕ್ಕೆ ಕೆಲವೇ ಗಂಟೆಗಳು ಇರುವಾಗ ಅಧಿಕಾರ ಸ್ವೀಕರಿಸದಂತೆ ಸರ್ಕಾರ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಹಠಾತ್ತನೆ ಅಧಿಕಾರ ಸ್ವೀಕಾರವನ್ನು ಮುಂದೂಡಲಾಗಿದೆ.

ಮೂಲಗಳ ಪ್ರಕಾರ ಕಾಂಗ್ರೆಸ್‌ ನಾಯಕರೇ ಜಿ.ಎ. ಬಾವಾ ಅವರ ನೇಮಕಕ್ಕೆ ಅಡ್ಡಗಾಲು ಹಾಕಿದ್ದಾರೆ ಎನ್ನಲಾಗಿದೆ. ನಿವೃತ್ತ ಪೊಲೀಸ್‌ ಅಧಿಕಾರಿ ಜಿ.ಎ. ಬಾವಾ ಅವರ ಬದಲಿಗೆ ಮಾಜಿ ಸಚಿವ ಎ.ಎಂ. ಹಿಂಡಸಗೇರಿಗೆ ಅವಕಾಶ ನೀಡಬೇಕು ಬೇಕು ಎಂದು ಕಾಂಗ್ರೆಸ್‌ ಹಿರಿಯ ನಾಯಕ ಎಚ್‌.ಕೆ. ಪಾಟೀಲ್‌ ಒತ್ತಡ ಹಾಕುತ್ತಿದ್ದಾರೆ. ಹೀಗಾಗಿ ಅಧಿಕಾರ ಸ್ವೀಕಾರ ಮುಂದೂಡಲಾಗಿದೆ ಎಂದು ಹೇಳಲಾಗುತ್ತಿದೆ.

ಮತ್ತೊಂದು ಮೂಲದ ಪ್ರಕಾರ, ಕಾಂಗ್ರೆಸ್‌ನಲ್ಲಿ ಮೂಲ ಹಾಗೂ ವಲಸಿಗ ಕಾಂಗ್ರೆಸ್ಸಿಗರ ತಿಕ್ಕಾಟ ಶುರುವಾಗಿದೆ. ಸಚಿವ ಜಮೀರ್‌ ಅಹ್ಮದ್‌ಖಾನ್‌ ಅವರೇ ಜಿ.ಎ. ಬಾವಾ ಅವರ ನೇಮಕಕ್ಕೆ ಅಡ್ಡಿಯಾಗಿ ನಿಂತಿದ್ದಾರೆ ಎಂಬ ಮಾತುಗಳೂ ಕೇಳಿ ಬರುತ್ತಿವೆ. ಒಟ್ಟಿನಲ್ಲಿ ಜಿ.ಎ. ಬಾವಾ ಅವರ ಅಧಿಕಾರ ಸ್ವೀಕಾರ ಮುಂದೂಡಿಕೆಯು ಕಾಂಗ್ರೆಸ್‌ ವಲಯದಲ್ಲಿ ಎಲ್ಲವೂ ಸರಿ ಇಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. (ಎನ್.ಬಿ)

Leave a Reply

comments

Related Articles

error: