ಕರ್ನಾಟಕಪ್ರಮುಖ ಸುದ್ದಿ

ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದಲ್ಲಿ ಇಂದು ಜೆಡಿಎಸ್ ಶಾಸಕಾಂಗ ಸಭೆ

ಬೆಂಗಳೂರು (ಜೂ.4): ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರು ಇಂದು ಜೆಡಿಎಸ್ ಶಾಸಕರು, ಸಚಿವರು ಹಾಗೂ ಮೇಲ್ಮನೆ ಸದಸ್ಯರ ಮಹತ್ವದ ಸಭೆ ಕರೆದಿದ್ದಾರೆ. ಇಂದು ಸಂಜೆ 4.40 ಕ್ಕೆ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರ ಜೆ.ಪಿ.ನಗರದ ತಮ್ಮ ಖಾಸಗಿ ನಿವಾಸದಲ್ಲೇ ಸಭೆ ಕರೆದಿದ್ದು, ಲೋಕಸಭೆ ಚುನಾವಣೆಯ ಸೋಲಿನ ಬಳಿಕ 2 ನೇ ಬಾರಿ ನಡೆಯುತ್ತಿರುವ ಶಾಸಕಾಂಗ ಸಭೆಯಲ್ಲಿ ಸೋಲಿನ ಆತ್ಮಾವಲೋಕನ, ಸಂಪುಟ ವಿಸ್ತರಣೆ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷರ ರಾಜೀನಾಮೆ ಕುರಿತಂತೆ ಚರ್ಚೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಮೈತ್ರಿ ಸರ್ಕಾರದ ಸುರಕ್ಷತೆ ಲೆಕ್ಕಾಚಾರದಲ್ಲಿ ಸದ್ಯಕ್ಕೆ 3 ಖಾಲಿ ಸ್ಥಾನಗಳ ಭರ್ತಿಗೆ ಸಂಪುಟ ವಿಸ್ತರಣೆ ಹಾಗೂ ಕೆಲ ತಿಂಗಳ ಬಳಿಕ ಪುನರ್ ರಚನೆಯ ತೀರ್ಮಾನವನ್ನು ಶಾಸಕರಿಗೆ ಮನವರಿಕೆ ಮಾಡಿಕೊಟ್ಟು, ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರಿಯುವ ಉದ್ದೇಶದಿಂದ ಸಿಎಂ ಕುಮಾರಸ್ವಾಮಿ ಸಭೆ ಕರೆದಿದ್ದಾರೆ ಎನ್ನಲಾಗಿದೆ.

ಇನ್ನು ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಪಕ್ಷದಲ್ಲಿ ತಮ್ಮ ಅಭಿಪ್ರಾಯ, ತೀರ್ಮಾನಗಳಿಗೆ ಬೆಲೆ ಸಿಗುತ್ತಿಲ್ಲ ಎಂದು ಆಕ್ರೋಶಗೊಂಡಿರುವ ಹೆಚ್.ವಿಶ್ವನಾಥ್ ಅವರು ಇಂದು ರಾಜೀನಾಮೆ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ. (ಎನ್.ಬಿ)

Leave a Reply

comments

Related Articles

error: