
ಮೈಸೂರು
ರಂಜಾನ್ ಹಬ್ಬದ ಪ್ರಯುಕ್ತ ಅಕ್ಕನ ಬಳಗ ಶಾಲೆಯಲ್ಲಿ ಶಾಲಾ ಮಕ್ಕಳಿಗೆ ಸಿಹಿ ಹಾಗೂ ಪುಸ್ತಕ ಸಾಮಗ್ರಿ ವಿತರಣೆ : ಸೌಹಾರ್ದತೆಯಿಂದ ಬಾಳಲು ಕರೆ
ಮೈಸೂರು,ಜೂ.4;- ಮಾಜಿ ಮುಖ್ಯಮಂತ್ರಿ ಗುಂಡೂರಾವ್ ಅಭಿಮಾನಿ ಬಳಗದ ವತಿಯಿಂದ ರಂಜಾನ್ ಹಬ್ಬದ ಪ್ರಯುಕ್ತ ಇಂದು ವ೦ದೇ ಮಾತರಂ ಕಾರ್ಯಕ್ರಮವನ್ನು ತ್ಯಾಗರಾಜ ರಸ್ತೆಯಲ್ಲಿರುವ ಅಕ್ಕನ ಬಳಗ ಶಾಲೆಯಲ್ಲಿ ಶಾಲಾ ಮಕ್ಕಳಿಗೆ ಸಿಹಿ ಹಾಗೂ ಪುಸ್ತಕ ಸಾಮಗ್ರಿಗಳನ್ನು ವಿತರಿಸಿ, ಶಾಂತಿ ಸೌಹಾರ್ದತೆ ಸಂದೇಶವನ್ನು ಸಾರುವ ಮೂಲಕ ಆಚರಿಸಲಾಯಿತು.
ಹಿರಿಯ ಸಮಾಜ ಸೇವಕರಾದ ಡಾ.ಕೆ ರಘುರಾಂ ವಾಜಪೇಯಿ ಶಾಲಾ ಮಕ್ಕಳಿಗೆ ಸಿಹಿ ಹಾಗೂ ಪುಸ್ತಕ ಹಾಗೂ ಶಾಲಾ ಸಾಮಗ್ರಿಗಳನ್ನು ವಿತರಿಸಿದರು. ಬಳಿಕ ಮಾತನಾಡಿದ ಅವರು ಭಾರತ ದೇಶದಲ್ಲಿ ಎಲ್ಲಾ ಧರ್ಮಗಳಿಗೂ ಸಮಾನ ಗೌರವವಿದೆ, ಪ್ರತಿಯೊಬ್ಬರೂ ಗೌರವಿಸಿ ನೆಮ್ಮದಿಯಿಂದ ಜೀವಿಸಬೇಕು. ಮುಸಲ್ಮಾನರಿಗೆ ಅತ್ಯಂತ ಪವಿತ್ರವಾಗಿರುವ ಮಾಸವೆಂದರೆ ರಂಜಾನ್, ಮುಸಲ್ಮಾನರು ವರ್ಷವಿಡೀ ಹೆಚ್ಚಾಗಿ ದುಡಿಯುತ್ತಾರೆ. ಆದರೆ ರಂಜಾನ್ ಮಾಸದಲ್ಲಿ ಸೂರ್ಯಾಸ್ತದವರೆಗೂ ಪ್ರಾರ್ಥನೆ ಮಾಡುತ್ತಾರೆ, ಶಾಂತಿ ಸೌಹಾರ್ದತೆಯ ಸಂದೇಶವನ್ನು ನಾವೆಲ್ಲರೂ ಶಾಲಾ ದಿನದಿಂದಲೇ ಬೆಳಿಸಿಕೊಳ್ಳಬೇಕು, ದ್ವೇಷದಿಂದ ಶಾಶ್ವತವಾಗಿ ಯಾವುದನ್ನೂ ಪಡೆಯುವುದಕ್ಕಾಗಲ್ಲ. ತ್ಯಾಗ ಮತ್ತು ಶಾಂತಿಗೆ ಮಾತ್ರ ಮೌಲ್ಯವಿದೆ, ಜಾತಿಗಿಂತ ಧರ್ಮ ಮುಖ್ಯ ಎಂದು ಮಕ್ಕಳು ಅರಿತುಕೊಂಡು ನಡೆಯಬೇಕಿದೆ, ಬ್ರಿಟೀಷರ ವಿರುದ್ಧ ಹೋರಾಡಿದ್ದ ಟಿಪ್ಪು ಸುಲ್ತಾನ್, ರಾಷ್ಟ್ರಪತಿ ಅಬ್ದುಲ್ ಕಲಾಂ, ಕಲಾವಿದ ಜಾಕೀರ್ ಹುಸೇನ್ ಅವರ ಜೀವನದ ನಡೆ-ನುಡಿಯನ್ನು ಜೀವನದ ಆದರ್ಶ ತತ್ವವನ್ನಾಗಿ ವಿದ್ಯಾರ್ಥಿಗಳು ಪಾಲಿಸಬೇಕು ಎಂದು ಕರೆ ನೀಡಿದರು
ವಂಗೀಮಠದ ಇಳೈ ಆಳ್ವಾರ್ ಸ್ವಾಮೀಜಿ ಮಾತನಾಡಿ ದೇಶದಲ್ಲಿ ಶರಣರು, ಸಂತರು ಮತ್ತು ದಾರ್ಶನಿಕರು ಬದುಕಿ ಹೋಗಿದ್ದು, ಇಲ್ಲಿ ಸಾಮರಸ್ಯ ನೆಲೆಯೂರಿದೆ. ಜೊತೆಗೆ ಮತ್ತಷ್ಟು ಸಹಬಾಳ್ವೆಯನ್ನು ಗಟ್ಟಿಗೊಳಿಸುವ ಜವಾಬ್ದಾರಿ ಎಲ್ಲ ನಾಗರಿಕರ ಮೇಲಿದೆ. ದೇವನೊಬ್ಬನೇ ನಾಮ ಹಲವು ಎನ್ನುವ ವಾಣಿಯನ್ನು ಎಲ್ಲ ಧರ್ಮಗಳು ಅರ್ಥ ಮಾಡಿಕೊಂಡು ಬದುಕಬೇಕಿದೆ. ಭಾರತ ದೇಶದಲ್ಲಿ ನೂರಾರು ಜಾತಿಗಳು, ಹತ್ತಾರು ಧರ್ಮಗಳು, ವಿವಿಧ ಸಂಸ್ಕೃತಿ, ಆಚಾರ-ವಿಚಾರಗಳನ್ನು ಹೊಂದಿರುವ ಜನಾಂಗದವರು ಬಾಳಿ ಬದುಕುತ್ತಿದ್ದು, ವಿವಿಧತೆಯಲ್ಲಿ ಏಕತೆ ಮಂತ್ರ ಜಪಿಸುತ್ತಿದೆ. ಈ ಭೂಮಿ ಮೇಲೆ ಹುಟ್ಟಿದ ಪ್ರತಿಯೊಬ್ಬ ಮನುಷ್ಯರಿಗೂ ಸಮಾನವಾಗಿ ಬದುಕುವ ಹಕ್ಕಿದೆ. ಅದರಂತೆ ಎಲ್ಲರೂ ಪ್ರೀತಿ, ವಿಶ್ವಾಸ, ಸಹೋದರತೆ ಮತ್ತು ಸಾಮರಸ್ಯದಿಂದ ಜೀವನ ನಡೆಸಬೇಕು, ಈ ಪ್ರಪಂಚ ಪರಮಾತ್ಮನ ಸುಂದರ ಮನೆಯಾಗಿದ್ದು, ಆತನ ಮಕ್ಕಳಾದ ಎಲ್ಲ ಮನುಷ್ಯರು ಸಹೋದರತೆಯಿಂದ ಬಾಳಬೇಕಾದ ಜವಾಬ್ದಾರಿಯನ್ನು ಯಾರೂ ಮರೆಯಬಾರದು. ಸಮಾಜದಲ್ಲಿರುವ ವ್ಯಕ್ತಿಗಳ ಮನಸುಗಳು ಕತ್ತರಿಯಾಗದೆ, ಎಲ್ಲರ ಮನಸ್ಸುಗಳನ್ನು ಜೋಡಿಸುವ ಸೂಜಿಯಾಗಬೇಕು ಎಂದು ಹೇಳಿದರು,
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷರಾದ ವೈ ಡಿ ರಾಜಣ್ಣ ಮಾತನಾಡಿ ಶಾಂತಿ ಸಂದೇಶದ ಪ್ರತಿಕತೆಯ ಬುನಾದಿ. ಇದರಿಂದ ಪ್ರತಿಯೊಬ್ಬರಲ್ಲೂ ಬಾಂಧವ್ಯದ ಮಹತ್ವ ಸಾರುವ ಕಾರ್ಯಕ್ರಮವಾಗಿದ್ದು ಶಾಂತಿಯ ಸಂಕೇತವಾಗಿದ್ದು, ಮೇಲುಕೀಳು, ಬಡವ ಬಲ್ಲಿದ, ಜಾತಿ ಭೇದವನ್ನು ಮರೆತು ಎಲ್ಲರೂ ಸಹಬಾಳ್ವೆಯಿಂದ ಈ ಕಾರ್ಯಕ್ರಮವನ್ನು ಆಚರಿಸುತ್ತಾರೆ. ರಂಜಾನ್ ತಿಂಗಳಲ್ಲಿ ಸಾಮಾನ್ಯವಾಗಿ ಇಫ್ತಾರ್ ಕೂಟ ನಡೆಸುವುದು ಸಾಮಾನ್ಯವಾಗಿದೆ. ಗುಂಡೂರಾವ್ ಅಭಿಮಾನಿ ಬಳಗದಿಂದ ಮಕ್ಕಳ ಜೊತೆ ಆಚರಿಸುವುದು ವಿಶೇಷವಾಗಿದ್ದು ಎಲ್ಲರನ್ನೂ ಒಂದೇ ಭಾವನೆಯಲ್ಲಿ ನೋಡುವ ಮಹದಾಸೆ ನಮ್ಮದು. ಇದೊಂದು ನೆಮ್ಮದಿಯ, ಸಹಬಾಗಿತ್ವದ ಕಾರ್ಯಕ್ರಮವಾಗಿದೆ ,ಎಲ್ಲ ಧರ್ಮದ ಧರ್ಮಗ್ರಂಥಗಳು ಎಲ್ಲರನ್ನು ಪ್ರೀತಿಸಿ, ಯಾರನ್ನೂ ನೋಯಿಸಬೇಡಿ ಎಂದಿದೆ. ಜಾತಿ, ಧರ್ಮವನ್ನು ಹೋಗಲಾಡಿಸಿ ನಾವೆಲ್ಲರೂ ಸಹೋದರರು ಎಂಬ ಭಾವನೆ ಪ್ರತಿಯೊಬ್ಬರಲ್ಲೂ ಇರಬೇಕು. ಹಾಗಿದ್ದಾಗ ಮಾತ್ರ ಶಾಂತಿ, ನೆಮ್ಮದಿ, ಪ್ರೀತಿ ಬೆಳೆಯುತ್ತದೆ ಎಂದರು.
ನರಸಿಂಹರಾಜ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷರಾದ ಮುದರ ಬೀರ್ ನವಾಜ್ ಮಾತನಾಡಿ ರಂಜಾನ್ ತಿಂಗಳು ಉಪವಾಸಕ್ಕೆ ಸೀಮಿತವಲ್ಲ. ಯಾರಿಗೂ ತೊಂದರೆ ಕೊಡದೇ, ದಾನ ಧರ್ಮ ಮಾಡುವುದು, ಮನುಷ್ಯತ್ವದಿಂದ ನಡೆದುಕೊಳ್ಳುವುದು ಮುಖ್ಯವಾಗುತ್ತದೆ ಇಸ್ಲಾಂ ಧರ್ಮದ ಪವಿತ್ರ ಗ್ರಂಥ ಕುರಾನ್ ಪ್ರಕಾರ ಸತ್ಯ ನುಡಿಯಬೇಕು. ಅಲ್ಲದೇ ನಿರ್ಗತಿಕರಿಗೆ ತಮ್ಮ ಕೈಲಾದ ಸಹಾಯ ಮಾಡಬೇಕು. ಇದು ರಂಜಾನ್ ಹಬ್ಬಕ್ಕೆ ಸೀಮಿತವಾಗದೇ, ಜೀವಮಾನವಿಡೀ ಪಾಲಿಸಬೇಕು. ಅನ್ಯ ಧರ್ಮೀಯರೊಂದಿಗೆ ಉತ್ತಮ ಬಾಂಧವ್ಯ ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು
ಇದೇ ಸಂದರ್ಭದಲ್ಲಿ ಗುಂಡೂರಾವ್ ಅಭಿಮಾನಿ ಬಳಗದ ಅಧ್ಯಕ್ಷರಾದ ವಿನಯ್ ಕಣಗಾಲ್, ಕೆಪಿಸಿಸಿ ಸದಸ್ಯರಾದ ಜಿ ಶ್ರೀನಾಥ್ ಬಾಬು ,ಮಾಜಿ ನಗರ ಪಾಲಿಕೆ ಸದಸ್ಯರಾದ ಎಂ ಕೆ ಅಶೋಕ್ , ಜಮೀರ್ ,ಎಸ್ ಎನ್ ರಾಜೇಶ್ ,ಅಬ್ದುಲ್ ,ಜಾಕಿರ್ ಹುಸೇನ್ ,ಅಕ್ಕನ ಬಳಗ ಶಾಲೆಯ ಮುಖ್ಯ ಶಿಕ್ಷಕಿ ಸುಗುಣ ವತಿ ,ಹಾಗೂ ಶಿಕ್ಷಕ ವೃಂದ ಹಾಜರಿದ್ದರು. (ಕೆ.ಎಸ್,ಎಸ್.ಎಚ್)