ಮೈಸೂರು

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸೈಕಲ್ ಜಾಥಾಕ್ಕೆ ಚಾಲನೆ : ಸಾರ್ವಜನಿಕರಲ್ಲಿ ಪರಿಸರ ರಕ್ಷಣೆ ಕುರಿತು ಜಾಗೃತಿ

ಮೈಸೂರು,ಜೂ.5:- ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಎನ್.ಸಿ.ಸಿ, ಎನ್.ಎಸ್.ಎಸ್, ಐಪಿಎಂಓ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸಹಯೋಗದೊಂದಿಗೆ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಇಂದು  ಬೆಳಿಗ್ಗೆ  ಸೈಕಲ್ ಜಾಥಾ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಹಮ್ಮಿಕೊಳ್ಳಲಾಗಿತ್ತು.

ಹಿರಿಯ ಸಿವಿಲ ನ್ಯಾಯಾಧೀಶ ಹಾಗೂ ಮೈಸೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ದೇವಮಾನೆ ಸೈಕಲ್ ಜಾಥಾಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ. ಪರಿಸರವನ್ನು ಇಂದು ನಾವು ಉಳಿಸಿದರೆ ಮುಂದಿನ ಪೀಳಿಗೆಯು ಸುಖವಾಗಿ ಜೀವಿಸಬಹುದು ಎಂದರು. ಕೇವಲ ಒಂದು ದಿನಕ್ಕೋಸ್ಕರ ಪರಿಸರ ದಿನಾಚರಣೆ ಮಾಡಿದರೆ ಸಾಲದು. ವರ್ಷಪೂರ್ತಿ ಪರಿಸರ ದಿನಾಚರಣೆ ನಡೆಯಬೇಕು. ಪರಿಸರ ನಾಶದಿಂದ ಅಂತರ್ಜಲ ಮಟ್ಟ ಕುಸಿಯುತ್ತಿದ್ದು, ಕುಡಿಯುವ ನೀರಿಗೂ ಪರಿತಪಿಸಬೇಕಾದ ದಿನಗಳು ಎದುರಾಗುತ್ತಿವೆ. ಮರಗಿಡಗಳನ್ನು ಕಡಿದು ಕಾಡನ್ನು ಬರಿದುಗೊಳಿಸುತ್ತಿರುವುದರಿಂದ ಮಳೆ ಬಾರದಾಗಿದೆ. ಅದಕ್ಕಾಗಿ ಪ್ರತಿದಿನವೂ ಸಸಿ ನೆಡಲು ಪಣತೊಡೋಣ. ಪರಿಸರವನ್ನು ಸಂರಕ್ಷಿಸಿ, ನೆಲ ಜಲವನ್ನು ಉಳಿಸೋಣ ಎಂದರು.

ವಿವಿಧ ಶಾಲೆಗಳ ವಿದ್ಯಾರ್ಥಿಗಳು ಸೈಕಲ್ ಜಾಥಾದಲ್ಲಿ ಪಾಲ್ಗೊಂಡು ಪರಿಸರ ಸಂರಕ್ಷಣೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸಿದರು. ಸಸಿ ಬೆಳೆಸಿ ಶಿಶು ಉಳಿಸಿ, ಜೀವಜಲ ಸಂರಕ್ಷಣೆಗೆ ನಾವೆಲ್ಲರೂ ಕೈಜೋಡಿಸೋಣ, ಕಾಡಿದ್ದರೆ ನಾಡು, ನಾಡಿದ್ದರೆ ನಾವು ಮುಂತಾದ ಫಲಕಗಳನ್ನು ಪ್ರದರ್ಶಿಸಿದರು.

ಪರಿಸರ ಮಾಲಿನ್ಯ ನಿಯಂತ್ರಣಾಧಿಕಾರಿಗಳು ಸೇರಿದಂತೆ ಜಾಥಾದಲ್ಲಿ ನೂರಾರು ಮಂದಿ ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)

 

Leave a Reply

comments

Related Articles

error: