ಮೈಸೂರು

ವರುಣಾದಲ್ಲಿ ಆರು ಮಂದಿ ಮೇಲೆ ಬೀದಿನಾಯಿ ದಾಳಿ : ಕ್ರಮ ಕೈಗೊಳ್ಳದ ಅಧ್ಯಕ್ಷರ ವಿರುದ್ಧ ಆಕ್ರೋಶ

ಮೈಸೂರಿನಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚುತ್ತಿದೆ. ಇಷ್ಟುದಿನ ಮಕ್ಕಳ ಮೇಲೆ ದಾಳಿ ಮಾಡುತ್ತಿದ್ದ ಬೀದಿ ನಾಯಿಗಳು ಈಗ ದೊಡ್ಡವರ ಮೇಲೆ ದಾಳಿ ಮಾಡುವ ಮೂಲಕ ಆಸ್ಪತ್ರೆ ಸೇರುವಂತೆ ಮಾಡಿವೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ತವರು ಕ್ಷೇತ್ರ ವರುಣಾದಲ್ಲಿ ಬೀದಿನಾಯಿಗಳ ಕಾಟ ಹೆಚ್ಚಾಗುತ್ತಿದೆ. ವರುಣ ಸಮೀಪದ ದಂಡಿಕೆರೆ ಗ್ರಾಮದಲ್ಲಿ ಬೆಳ್ಳಂಬೆಳಿಗ್ಗೆ ನಾಯಿಗಳ ಹಿಂಡು  ಆರು ಜನರ ಮೇಲೆ ದಾಳಿ ಮಾಡಿ ಗಾಯಗೊಳಿಸಿದೆ.
ಶಿವಯ್ಯ, ಮಹದೇವು, ರಾಜು ಸೇರಿದಂತೆ ಆರು ಜನರ ಮೇಲೆ ದಾಳಿ ನಡೆಸಿದ್ದು, ಮೂವರಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ ಎನ್ನಲಾಗಿದೆ. ಗಾಯಾಳುಗಳನ್ನು  ಕೆ ಆರ್ ಆಸ್ಪತ್ರೆಗೆ  ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಬೀದಿನಾಯಿಗಳ ಕಾಟ ಹೆಚ್ಚುತ್ತಿದೆ ಏನಾದರೂ ಕ್ರಮ ಕೈಗೊಳ್ಳಿ ಎಂದು ಈ ಮೊದಲೇ ಗ್ರಾಮಪಂಚಾಯತ್ ಅಧ್ಯಕ್ಷರಿಗೆ ದೂರು ನೀಡಲಾಗಿದ್ದರೂ, ಅವರು ಯಾವುದೇ ಕ್ರಮ ಕೈಗೊಳ್ಳದೇ ಸುಮ್ಮನಿದ್ದರು ಎನ್ನಲಾಗಿದ್ದು, ಅಧ್ಯಕ್ಷರ ಈ ಕ್ರಮಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗುರುವಾರ ಬೆಳ್ಳಂಬೆಳಿಗ್ಗೆ ನಾಯಿಗಳು ಆರು ಜನರ ಮೇಲೆ ಎರಗಿದ್ದು, ತೀವ್ರ ಗಾಯಗೊಳಿಸಿದೆ. ಇದೀಗ ಸ್ಥಳಕ್ಕೆ ಗ್ರಾಮಪಂಚಾಯತ್ ಅಧ್ಯಕ್ಷರು ಭೇಟಿ ನೀಡಿದ್ದು, ನಾಯಿಗಳ ಕಾಟ ತಪ್ಪಿಸಲು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.

Leave a Reply

comments

Related Articles

error: