ಪ್ರಮುಖ ಸುದ್ದಿ

ಕಾವೇರಿ ನದಿಯಲ್ಲಿ ಮುಳುಗಿ ಮೂವರು ಕಾಲೇಜು ವಿದ್ಯಾರ್ಥಿಗಳು ಜಲಸಮಾಧಿ

ರಾಜ್ಯ(ಮಡಿಕೇರಿ)ಜೂ.5:-  ಕಾವೇರಿ ನದಿಯಲ್ಲಿ ಮುಳುಗಿ ಮೂವರು ಕಾಲೇಜು ವಿದ್ಯಾರ್ಥಿಗಳು ಜಲಸಮಾಧಿಯಾಗಿರುವ ಹೃದಯವಿದ್ರಾವಕ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕುಶಾನಗರದ ಬಳಿ ನಡೆದಿದೆ.

ಮೃತರನ್ನು  ಗಗನ್, ಆಕಾಶ್, ಶಶಾಂಕ್ ಎಂದು ಗುರುತಿಸಲಾಗಿದ್ದು,  ಇವರೆಲ್ಲರೂ  ಮಡಿಕೇರಿ ಜೂನಿಯರ್ ಕಾಲೇಜಿನಲ್ಲಿ ದ್ವಿತೀಯ ಪಿ.ಯು.ಸಿ. ವ್ಯಾಸಂಗ ಮಾಡುತ್ತಿದ್ದರು ಎನ್ನಲಾಗಿದೆ. ಕುಶಾಲನಗರ ಪಾಲಿಟೆಕ್ನಿಕ್ ಸಮೀಪ ಹರಿಯುತ್ತಿರುವ ಕಾವೇರಿ ನದಿಯಲ್ಲಿ ಇಂದು  ಮಧ್ಯಾಹ್ನ ಈ ದುರ್ಘಟನೆ ಸಂಭವಿಸಿದೆ.   ಮಡಿಕೇರಿ ಜೂನಿಯರ್ ಕಾಲೇಜಿನ 9 ಮಂದಿ ವಿದ್ಯಾರ್ಥಿಗಳಿದ್ದ ತಂಡವೊಂದು  ಕುಶಾಲನಗರಕ್ಕೆ ಬಂದಿತ್ತು. ಇವರ ಪೈಕಿ ಓರ್ವ ವಿದ್ಯಾರ್ಥಿ ಮಧ್ಯಾಹ್ನದ ವೇಳೆಯಲ್ಲಿ  ಪಾಲಿಟೆಕ್ನಿಕ್ ಸಮೀಪದ ಹೋಟೆಲ್ ಒಂದರ ಹಿಂಭಾಗದಲ್ಲಿ ಹರಿಯುತ್ತಿರುವ ಕಾವೇರಿ ನದಿಗೆ ಈಜಲೆಂದು ಇಳಿದಿದ್ದು, ನೀರಿನ ಸೆಳೆತ ಹೆಚ್ಚಾಗಿ ಆತ ಮುಳುಗಲಾರಂಭಿಸಿದ್ದ.   ಇದನ್ನರಿತ ಇನ್ನಿಬ್ಬರು ವಿದ್ಯಾರ್ಥಿಗಳು ರಕ್ಷಣೆಗೆ ಮುಂದಾಗಿದ್ದಾರೆ. ಆದರೆ  ದುರಾದೃಷ್ಟವಶಾತ್ ನದಿಯಲ್ಲಿ ಮುಳುಗುತ್ತಿದ್ದವನನ್ನು  ರಕ್ಷಿಸಲೆಂದು ನದಿಗೆ ಇಳಿದ ಇನ್ನಿಬ್ಬರು ವಿದ್ಯಾರ್ಥಿಗಳು   ಕೂಡ ನಿಯಂತ್ರಣ ಕಳೆದುಕೊಂಡು ಆತನೊಂದಿಗೆ  ಜಲ ಸಮಾಧಿಯಾಗಿದ್ದಾರೆ.    ಹೀಗಾಗಿ ಮೂವರನ್ನು  ನದಿ ಆಹುತಿ ತೆಗೆದುಕೊಂಡಿದೆ.   ಇಂದು ರಂಜಾನ್ ಹಬ್ಬದ ಪ್ರಯುಕ್ತ ಕಾಲೇಜಿಗೆ ರಜೆ ಇದ್ದ ಹಿನ್ನಲೆ ಮೂವರು ವಿದ್ಯಾರ್ಥಿಗಳು ಕಾವೇರಿ ನದಿಯಲ್ಲಿ  ಈಜಲು ತೆರಳಿದ್ದರು ಎನ್ನಲಾಗಿದೆ. ಈ  ಕುರಿತು ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆಸಿಐ,ಎಸ್.ಎಚ್)

Leave a Reply

comments

Related Articles

error: