ಮೈಸೂರು

ಹೊಸಗನ್ನಡ ಸಾಹಿತ್ಯವಿಲ್ಲದ ಸಮಯದಲ್ಲಿ ಅದಕ್ಕೆ ಬುನಾದಿಯನ್ನು ಹಾಕಿದವರೇ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ : ಡಾ. ಮಳಲಿ ವಸಂತ ಕುಮಾರ್ ಬಣ್ಣನೆ

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಒಂದು ನೆನಪು’ ಕಾರ್ಯಕ್ರಮಕ್ಕೆ ಚಾಲನೆ

ಮೈಸೂರು,ಜೂ.6:- ಹೊಸಗನ್ನಡ ಸಾಹಿತ್ಯವಿಲ್ಲದ ಸಮಯದಲ್ಲಿ ಅದಕ್ಕೆ ಬುನಾದಿಯನ್ನು ಹಾಕಿದವರೇ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಎಂದು ಮೈಸೂರು ವಿವಿ ವಿಶ್ರಾಂತ ಪ್ರಾಧ್ಯಾಪಕ ಡಾ. ಮಳಲಿ ವಸಂತ ಕುಮಾರ್ ಬಣ್ಣಿಸಿದರು.

ಅವರಿಂದು ವಿಜಯವಿಠಲ ಶಿಕ್ಷಣ ಸಂಸ್ಥೆಯ ಕಾಲೇಜು ಸಭಾಂಗಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ವಿಜಯ ವಿಠಲ ಶಿಕ್ಷಣ ಸಂಸ್ಥೆಗಳು ಸಂಯುಕ್ತಾಶ್ರಯದಲ್ಲಿ ‘ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಒಂದು ನೆನಪು’ ಕಾರ್ಯಕ್ರಮವನ್ನು ಉದ್ಘಾಟಿಸಿ ವಿಚಾರ ಮಂಡಿಸಿದರು. ಅಯ್ಯಂಗಾರ್ ಎನ್ನುವುದು ಮುಲತಃ ತಮಿಳಿನವರು. ತಮಿಳು ಮೀರುವಷ್ಟರಮಟ್ಟಿಗೆ ಕನ್ನಡತನವನ್ನು ಕನ್ನಡ ನಾಡನ್ನು ಎಚ್ಚರಗೊಳಿಸುತ್ತಿದ್ದರು. ಅದರಿಂದ ತಮಿಳಿಗರಿಗೆ ಸಿಟ್ಟು ಬರುತ್ತಿತ್ತು. ಅಲ್ಲಿ ನಡೆದಂತಹ ಎಲ್ಲ ಪರೀಕ್ಷೆಗಳಲ್ಲಿಯೂ ಫಸ್ಟ್ ರ್ಯಾಂಕ್, ಫಸ್ಟ್ ಕ್ಲಾಸ್ ನಲ್ಲಿಯೇ ತೇರ್ಗಡೆಯಾಗುತ್ತಿದ್ದರು. ಅತ್ಯಂತ ಕಡುಬಡತನದಲ್ಲಿ ಬೆಳೆದ ಹುಡುಗ. ವಾರಾನ್ನ ಮಾಡಿ ಜೀವಿಸುತ್ತಿದ್ದರು. ಈಗಿನ ಮಕ್ಕಳಿಗೆ ಎಲ್ಲ ರೀತಿಯಲ್ಲಿಯ ಸೌಲಭ್ಯವೂ ಇದೆ. ಒಳ್ಳೆಯ ಕಾಲದಲ್ಲಿದ್ದಾರೆ ಎಂದರು.

ವಿದ್ಯಾರ್ಥಿಗಳು ಕ್ಲಾಸಿಗೆ ಸಂಬಂಧಿಸಿದ ವಿಷಯವನ್ನು 50%ಓದಿ, ಮತ್ತೆ 50% ನ್ನು ಲೈಬ್ರರಿಯಲ್ಲಿ ಮಹಾನ್ ವ್ಯಕ್ತಿಗಳ ಜೀವನ ಚರಿತ್ರೆಯ ಕುರಿತು ಓದಿ ತಿಳಿದುಕೊಳ್ಳಿ. ಕರ್ನಾಟಕದ ಮೊದಲ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರ ಕುರಿತು ಓದಿ. ಯಾವ ಉಪನ್ಯಾಸಗಳನ್ನೂ ತಪ್ಪಿಸಿಕೊಳ್ಳಬೇಡಿ. ಕುವೆಂಪು, ಮಾಸ್ತಿ, ಕೆಂಗಲ್ ಹನುಮಂತಯ್ಯ ಮೊದಲಾದವರು ಮೈಸೂರು ಮಹಾರಾಜ ಕಾಲೇಜಿನಲ್ಲಿಯೇ ಓದಿದವರು. ಇಲ್ಲಿ ವಾರಕ್ಕೆ ಒಂದು ಬಾರಿ ಮಹಾನ ವ್ಯಕ್ತಿಗಳನ್ನು ಕರೆಯಿಸಿ ಉಪನ್ಯಾಸ ನೀಡುತ್ತಿದ್ದರು. ಉಪನ್ಯಾಸಗಳಿಗೆ ನಾವೂ ಕೂಡ ಹಾಜರಾಗುತ್ತಿದ್ದೆವು. ವ್ಯಕ್ತಿತ್ವದ ವಿಕಸನಕ್ಕೆ ಉಪನ್ಯಾಸ ಅಗತ್ಯ. ಜ್ಞಾನ ಸಂವರ್ಧನೆಗೂ ಅಗತ್ಯ ಎಮದು ತಿಳಿಸಿದರು.

ಮಾಸ್ತಿಯವರು 1891ರ ಜೂ.6ರಂದು ಜನಿಸಿದರು. 95ವರ್ಷಗಳ ಕಾಲ ಜೀವಿಸಿ ಮತ್ತೆ ಜೂ.7ರಂದು ಮರಣವನ್ನಪ್ಪಿದರು. ಮಹಾಕವಿ ಕುವೆಂಪು ಅವರು ಮಾಸ್ತಿಯವರ ‘ಸಾಹಿತ್ಯ ತುಂಬಾ ದೊಡ್ಡದು, ಅದಕ್ಕಿಂತ ಹೆಚ್ಚಾಗಿ ಅವರ ಮನಸು ದೊಡ್ಡದು’ ಎಂದಿದ್ದರು. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ವಿ.ಕೃ.ಗೋಕಾಕ್ ‘ಮಾಸ್ತಿ ಕನ್ನಡದ ಆಸ್ತಿ’ ಎಂದಿದ್ದರು. ಇದು ಅರ್ಥಬದ್ಧವಾಗಿದೆ. ಸಣ್ಣ ಕಥೆಗಳ ಕಲ್ಪನೆ ಇರದ ಕಾಲದಲ್ಲಿ ಅಪಾರ ಸಣ್ಣಕಥೆಗಳನ್ನು ನೀಡಿದರು. ಮೊದಲು ಇಂಗ್ಲಿಷ್ ನಿಂದ ಅನುವಾದ ಮಾಡಿದರು. ಕೊನೆಗೆ ತಾನೇ ಬರೆಯಲು ಆರಂಭಿಸಿದರು. ಅಸಿಸ್ಟೆಂಟ್ ಕಮೀಷನರ್ ಆಗಿ, ಡೆಪ್ಯುಟಿ ಕಮೀಷನರ್ ಆಗಿ ಬಹುತೇಕ ದೊಡ್ಡ ಹುದ್ದೆಗಳನ್ನು ಅಲಂಕರಿಸಿ ಮೈಸೂರು ಜಯಚಾಮರಾಜೇಂದ್ರ ಒಡೆಯರ್ ಅವರಿಂದ ಬಿರುದನ್ನು ಪಡೆದರು ಎಂದು ಬಣ್ಣಿಸಿದರು. ಯಾವ ಭಾಷೆಯ ಬಗ್ಗೆಯೂ ದ್ವೇಷವಿರಬಾರದು. ತಮಿಳು, ತೆಲುಗು ಎಲ್ಲವೂ ನಮ್ಮ ಸೋದರ ಭಾಷೆ. ನಮ್ಮ ಭಾಷೆಯ ಮೇಲೆ ನಮಗೆ ಅಭಿಮಾನವಿರಬೇಕು.  ಮಾಸ್ತಿಯವರು ಕರ್ನಾಟಕದಲ್ಲಿ ಕನ್ನಡವನ್ನೇ ಆಡಳಿತ ಭಾಷೆಯಾಗಿ, ಕನ್ನಡವೇ ಶಿಕ್ಷಣವಾಗಬೇಕೆಂದಿದ್ದರು. ಓರ್ವ ಅಯ್ಯಂಗಾರ್ ಕನ್ನಡದ ಬಗ್ಗೆ ಆಸ್ಥೆ ವಹಿಸಿ ಕನ್ನಡವನ್ನು ಪ್ರೋತ್ಸಾಹಿಸಿದ್ದರು. ಆರಂಭದ ದಿನಗಳಲ್ಲಿ ಕನ್ನಡ ಸಾಹಿತಿಗಳ ಪಾಲಿಗೆ ಇವರೇ ಆಸ್ತಿಯಾಗಿದ್ದರು ಎಮದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ, ವಿಜಯವಿಠಲ ಪ.ಪೂ.ಕಾಲೇಜಿನ ಪ್ರಾಂಶುಪಾಲ ಹೆಚ್.ಸತ್ಯಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್

Leave a Reply

comments

Related Articles

error: