ಮೈಸೂರು

ಅರಣ್ಯ ಸಂಪತ್ತನ್ನು ನಾಶ ಮಾಡುತ್ತಿರುವುದರಿಂದ ಪ್ರಕೃತಿ ವಿಕೋಪ,ಸಸ್ಯ ಸಂಪತ್ತು ಉಳಿಸುವ ಸಂಕಲ್ಪ ಮಾಡಬೇಕು : ಬಾಲ ನಟ ಮಹೇಂದ್ರ

ಮೈಸೂರು,ಜೂ.6:- ಪಾತಿ ಫೌಂಡೇಷನ್ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಜೆ ಸಿ  ನಗರದಲ್ಲಿ ಡ್ರಾಮಾ ಜೂನಿಯರ್ಸ್ ಮಕ್ಕಳು ಪಾಲ್ಗೊಂಡು  ಗಿಡ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು

ಡ್ರಾಮಾ ಜೂನಿಯರ್ಸ್ ಖ್ಯಾತಿಯ ಬಾಲ ನಟ ಮಹೇಂದ್ರ ಮಾತನಾಡಿ ಮನುಷ್ಯ ತನ್ನ ಸ್ವಾರ್ಥಕ್ಕೆ ಅರಣ್ಯ ಸಂಪತ್ತನ್ನು ನಾಶ ಮಾಡುತ್ತಿರುವುದರಿಂದ ಸಕಾಲದಲ್ಲಿ ಮಳೆ, ಬೆಳೆಗಳು ಆಗುತ್ತಿಲ್ಲ. ಪ್ರಕೃತಿ ವಿಕೋಪಗಳು ಉಂಟಾಗುತ್ತಿವೆ. ಇನ್ನಾದರೂ ನಾವೆಲ್ಲ ಎಚ್ಚೆತ್ತುಕೊಂಡು ಸಸ್ಯ ಸಂಪತ್ತು ಉಳಿಸುವ ಸಂಕಲ್ಪ ಮಾಡಬೇಕು ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಪರಿಸರವನ್ನು ಹಾಳು ಮಾಡುತ್ತಿರುವುದರಿಂದ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಿದೆ ಎಂದರು.

ಪಾತಿ ಫೌಂಡೇಶನ್ ಅಧ್ಯಕ್ಷ  ಎಂಡಿ ಪಾರ್ಥಸಾರಥಿ ಮಾತನಾಡಿ‘ಒಂದು ಮರ 10 ಸಾವಿರ ಲೀಟರ್ ನೀರನ್ನು ಭೂಮಿಗಿಳಿಸುತ್ತದೆ. ಅದನ್ನು ಹಾಳು ಮಾಡಿದರೆ ಗಾಳಿ, ನೀರು ದೊರಕುವುದಿಲ್ಲ. ಮುಂದಿನ ಪೀಳಿಗೆಗೆ ಸ್ವಚ್ಛ ಪರಿಸರವನ್ನು ನಾವು ಕಾಣಿಕೆಯಾಗಿ ಕೊಡಬೇಕು. ಅದಕ್ಕಾಗಿ, ವಿದ್ಯಾರ್ಥಿಗಳಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿಸುವುದು ಅಗತ್ಯ’ ಎಂದರು. ‘ಪ್ರತಿಯೊಬ್ಬರು ಮನೆ ಕಟ್ಟುವಾಗ ಕನಿಷ್ಠ ಎರಡು ಸಸಿ ನೆಟ್ಟು, ಅವುಗಳನ್ನು ರಕ್ಷಿಸಬೇಕು. ಪರಿಸರ ತಾಯಿ ಇದ್ದಂತೆ, ನಾವು ಪರಿಸರವನ್ನು ರಕ್ಷಿಸಿದರೆ, ಅದು ನಮ್ಮನ್ನು ರಕ್ಷಿಸುತ್ತದೆ’ ಎಂದು ಹೇಳಿದರು.

ಉದ್ಯಮಿ ಅಪೂರ್ವ ಸುರೇಶ್ ಮಾತನಾಡಿ ಪರಿಸರದ ಕಾಳಜಿ ನಿತ್ಯವೂ ಇರಲಿ. ನಮ್ಮ ಪರಿಸರ ಪ್ರೀತಿ ಒಂದೇ ದಿನಕ್ಕೆ ತೋರಿಕೆಗೆ ಇರದೇ, ಅದು ಕೃತಿಯಲ್ಲಿ ನಿತ್ಯ ನಿರಂತರ ನಡೆಯಬೇಕು. ಗಿಡ ಮರಗಳ ಮಾರಣ ಹೋಮ ನಡೆಸುತ್ತಿರುವ ಮನುಷ್ಯನೇ ಅವುಗಳ ರಕ್ಷಣೆಯನ್ನು ಸಮರೋಪಾದಿಯಲ್ಲಿ ಮಾಡಬೇಕು ಎಂದು ಹೇಳಿದರು.

ಈ ಸಂದರ್ಭ ಸಾಯಿ ಕೃಷ್ಣ ,ಮಂಜು, ಶರಣ್, ಮೂರ್ತಿ ,ಅಮಿತ್ , ಗಡಿ ಅಥರ್ವ ಚಿತ್ರದ ನಾಯಕರಾದ ಪವನ್ ತೇಜ , ಎಸ್ ಎನ್ ರಾಜೇಶ್, ರಾಕೇಶ್ ,ಹರೀಶ್ ನಾಯ್ಡು ,ಭಾರತಿ ಶಂಕರ್ ಮಂಜು ಕವಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: