ಮೈಸೂರು

ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕಾದರೆ ಎಲ್ಲರೂ ಕೈಜೋಡಿಸಬೇಕು: ಕಲಾ ಕೃಷ್ಣಮೂರ್ತಿ

ಬೈಲಕುಪ್ಪೆ: ಶೋಷಿತರಿಗೆ ಕೇವಲ ಪೊಲೀಸ್ ಇಲಾಖೆ ಒಂದರಿಂದಲೇ ನ್ಯಾಯ ದೊರೆಯಲು ಸಾಧ್ಯವಿಲ್ಲ. ಇತರ ಇಲಾಖೆಗಳೂ ಸಹ ಕೈ ಜೋಡಿಸಬೇಕು ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕಲಾ ಕೃಷ್ಣಮೂರ್ತಿ ತಿಳಿಸಿದರು.

ಪಟ್ಟಣದ ತಾಲೂಕು ಪಂಚಾಯಿತಿ ಕಛೇರಿ ಆವರಣದಲ್ಲಿ ಪೊಲೀಸ್ ಇಲಾಖೆಯ ವತಿಯಿಂದ ಬುಧವಾರ ನಡೆದ ದಲಿತ ಸಭೆಯಲ್ಲಿ ಮಾತನಾಡಿದರು.

ಪೊಲೀಸ್ ಇಲಾಖೆಯು ತನ್ನ ಕಾರ್ಯಮಿತಿಯಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿದ್ದು, ದಲಿತರ ಪರವಾಗಿ ಇಲಾಖೆ ಕೆಲಸ ಮಾಡುತ್ತಿಲ್ಲ ಎಂಬ ಆರೋಪ ಸರಿಯಲ್ಲ ಎಂದು ತಿಳಿಸಿದರು.

ಸಭೆಯಲ್ಲಿ ಚಂದನಾ ಸೇವಾ ಟ್ರಸ್ಟ್ ಮಾಡುತ್ತಿರುವ ಅನಧಿಕೃತ ಹಣದ ವ್ಯವಹಾರ ಹಾಗೂ ಹಳ್ಳಿಗಳು ಮತ್ತು ಗಿರಿಜನ ಹಾಡಿಗಳಲ್ಲಿ ಅಕ್ರಮ ಮದ್ಯ ಮಾರಾಟ, ಸ್ಮಶಾನ ಜಾಗ ಒತ್ತುವರಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕಾಯ್ದೆ ಅಡಿಯಲ್ಲಿನ ಭೂಮಿಯನ್ನು ಆಕ್ರಮಿಸಿಕೊಂಡಿರುವುದು ಸೇರಿದಂತೆ ಹಲವಾರು ಪ್ರಕರಣಗಳ ಬಗ್ಗೆ ಚರ್ಚೆ ನಡೆಸಿದ್ದು ಕಾನೂನು ಬಾಹಿರವಾಗಿದ್ದರೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಹಿರಿಯ ವಕೀಲ ಬಿ.ವಿ.ಜವರೇಗೌಡ ಮಾತನಾಡಿ, ಸ್ವಾತಂತ್ರ್ಯ ಬಂದು 68 ವರ್ಷಗಳಾಗಿದ್ದರೂ ಹಕ್ಕು ಕೇಳುತ್ತಿರುವುದು ದುರದೃಷ್ಟಕರವಾಗಿದೆ. ಪ್ರತಿ ಹಳ್ಳಿಗಳಲ್ಲೂ ಜಾಗೃತರಾಗಬೇಕು. ಕಾನೂನು ಪರಿಪಾಲನೆಯಾಗಿ ಎಲ್ಲ ಸೌಲಭ್ಯವನ್ನೂ ಅರ್ಹತೆ ಮೇಲೆ ಪಡೆಯುವಂತಾಗಬೇಕು ಎಂದು ತಿಳಿಸಿದರು.

 

ಜೆ.ಎಂ.ಎಫ್.ಸಿ. ನ್ಯಾಯಾಲಯದ ಸರ್ಕಾರಿ ಅಭಿಯೋಜಕ ಅಜಿತ್ ದೇವರಮನಿ ಮಾತನಾಡಿ, ಶೋಷಣೆ ಮತ್ತು ಅಸ್ಪೃಷ್ಯತೆ ಇರುವವರೆಗೂ ಮೀಸಲಾತಿ ಅವಶ್ಯಕತೆ ಇದ್ದು ಇದನ್ನು ಸರಿಯಾದ ರೀತಿಯಲ್ಲಿ ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕಾದರೆ ಸಮಾಜದಲ್ಲಿ ಪ್ರತಿಯೊಬ್ಬರ ಜವಾಬ್ದಾರಿ ಇದ್ದು ಕಣ್ಣಾರೆ ನೋಡಿ ಕಿವಿಯಲ್ಲಿ ಕೇಳಿದ್ದರೂ ಸಹ ಸರಿಯಾದ ರೀತಿಯಲ್ಲಿ ಸಾಕ್ಷಿಯನ್ನು ನೀಡದೇ ಇರುವುದರಿಂದ ಬಹಳಷ್ಟು ತಪ್ಪಿತಸ್ಥರು ಶಿಕ್ಷೆಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.

ಸದಾ ಕಾಲ ಕಾನೂನು ನಿಮ್ಮ ನೆರವಿಗಿದ್ದು ಸಣ್ಣಪುಟ್ಟ ಪಂಗಡ ಮತ್ತು ಗುಂಪುಗಳನ್ನಾಗಿ ಮಾಡಿಕೊಂಡು ಹೊಡೆದಾಡುವುದನ್ನು ಬಿಟ್ಟು ಪ್ರಗತಿಯತ್ತ ಮುನ್ನಡೆಯುವಂತೆ ಕಿವಿಮಾತು ಹೇಳಿದರು.

ಹುಣಸೂರು ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕ ಹರೀಶ್ ಪಾಂಡೆ, ಸರ್ಕಲ್ ಇನ್ಸ್‌ಪೆಕ್ಟರ್ ಹೆಚ್.ಎನ್.ಸಿದ್ದಯ್ಯ, ಮಾತನಾಡಿದರು.

ಕಾರ್ಯಕ್ರಮದಲ್ಲಿ ಕಾನೂನು ಅರಿವಿನ ಬಗ್ಗೆ ಕರಪತ್ರವನ್ನು ಬಿಡುಗಡೆ ಮಾಡಲಾಯಿತು. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಪ್ಪ, ಪುರಸಭೆ ಮುಖ್ಯಾಧಿಕಾರಿ ಡಿ.ಪುಟ್ಟರಾಜು, ಶಿರಸ್ತೇದಾರ್ ಪ್ರಕಾಶ್, ತಾ.ಪಂ.ಸದಸ್ಯ ಟಿ.ಈರಯ್ಯ, ಡಾ.ಬಿ.ಆರ್.ಅಂಬೇಡ್ಕರ್ ನಿಗಮದ ಸದಸ್ಯ ಕರಡೀಪುರ ಕುಮಾರ್, ದಲಿತ ಮುಖಂಡರಾದ ಪಿ.ಪಿ.ಮಹದೇವ್, ವಿಜಯಕುಮಾರ್, ಭೂತನಹಳ್ಳಿ ಶಿವಣ್ಣ, ಹೆಚ್.ಎಂ.ಚನ್ನಯ್ಯ, ಕೆ.ಬಿ.ಮೂರ್ತಿ, ಜೋಗನಹಳ್ಳಿ ದೇವರಾಜು, ಸಿ.ಎಸ್.ಜಗದೀಶ್, ಶೇಖರ್, ಸೋಮಶೇಖರ್, ಸೇರಿದಂತೆ ನೂರಾರು ಮಂದಿ ಹಾಜರಿದ್ದರು.

– ರಾಜೇಶ್

Leave a Reply

comments

Related Articles

error: