ಪ್ರಮುಖ ಸುದ್ದಿ

ಸಾಮಾಜಿಕ ನ್ಯಾಯದ ಹರಿಕಾರ ದೇಶ ಕಂಡ ಶ್ರೇಷ್ಠ ಮುಖ್ಯಮಂತ್ರಿ ಡಿ. ದೇವರಾಜ ಅರಸು : ಡಿ. ಬಸವರಾಜ್ ಬಣ್ಣನೆ

ರಾಜ್ಯ(ದಾವಣಗೆರೆ)ಜೂ.6:- ಕರ್ನಾಟಕ ರಾಜ್ಯದ ಧೀಮಂತ ಮುಖ್ಯಮಂತ್ರಿಯಾಗಿದ್ದ ದಿ. ಡಿ. ದೇವರಾಜ ಅರಸುರವರು ತಮ್ಮ ಸಾಧನೆಗಳ ಮೂಲಕ ಅಗ್ರಗಣ್ಯ ಸ್ಥಾನಕ್ಕೆ ಏರಿದವರು. ಸಾಮಾಜಿಕ ನ್ಯಾಯದ ಹರಿಕಾರ ಎಂದೇ ಬಿಂಬಿತರಾಗಿದ್ದ ದೇವರಾಜ ಅರಸುರವರು ರಾಜ್ಯದ ಅಸಂಖ್ಯ ದನಿ ಇಲ್ಲದ ಜನಾಂಗಗಳನ್ನು ಗುರುತಿಸಿ ಮುಖ್ಯವಾಹಿನಿಗೆ ತಂದ ಯುಗಪುರುಷ, ಭಾರತ ದೇಶ ಕಂಡ ಶ್ರೇಷ್ಠ ಮುಖ್ಯ ಮಂತ್ರಿಗಳಾಗಿ ಕರ್ನಾಟಕ ರಾಜ್ಯ ಮತ್ತು ದೇಶಕ್ಕೆ ಅನನ್ಯ ಸೇವೆ ಸಲ್ಲಿಸಿದಾರೆಂದು ಕೆಪಿಸಿಸಿ ಕಾರ್ಯದರ್ಶಿ ಹಾಗೂ ಕೆ.ಎಸ್.ಐ.ಸಿ. ಮಾಜಿ ಅಧ್ಯಕ್ಷರಾದ ಡಿ. ಬಸವರಾಜ ಬಣ್ಣಿಸಿದರು.

ಅವರಿಂದು ದಾವಣಗೆರೆ ಜಿಲ್ಲಾ ಯುವಕ ಕಾಂಗ್ರೆಸ್ ಕಾರ್ಯಕರ್ತರು ದಾವಣಗೆರೆ ನಗರದ ಎಂ.ಸಿ.ಸಿ. ‘ಎ’ ಬ್ಲಾಕ್‍ನ ಸುಮಾರ್ ಮಾರ್ಕೆಟ್ ಆವರಣದಲ್ಲಿ   ಏರ್ಪಡಿಸಿದ್ದ ದಿ. ಡಿ. ದೇವರಾಜ ಅರಸುರವರ 37ನೇ ಪುಣ್ಯಸ್ಮರಣೆ ಸಮಾರಂಭದಲ್ಲಿ ಅರಸುರವರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

ಭೂಸುಧಾರಣೆ ಕಾಯಿದೆ ಜಾರಿಗೊಳಿಸಿ ಉಳುವವನೇ ಹೊಲದೊಡೆಯ ಎಂಬ ನೀತಿಯನ್ನು ತಂದು ಲಕ್ಷಾಂತರ ಬಡ ರೈತರಿಗೆ ಭೂಮಿ ನೀಡಿ ಬಡವರ ಪಾಲಿನ ಅನ್ನದಾತರಾಗಿದ್ದಾರೆ. ತಲೆಯ ಮೆಲೆ ಮಲಹೊರುವ ಅಮಾನುಷ ಪದ್ಧತಿಯ ನಿಷೇಧ, ಜೀತ ಪದ್ಧತಿ ನಿರ್ಮೂಲನೆ ಮುಂತಾದ ಕ್ರಾಂತಿಕಾರಕ ಕಾಯಿದೆಗಳನು ರೂಪಿಸಿ ಜಾರಿಗೊಳಿಸಿ ಸಮಾಜಕ್ಕೆ ಅಂಟಿದ್ದ ಕಳಂಕವನ್ನು ತೊಡೆದು ಹಾಕಿದರು.

ದೇವರಾಜ ಅರಸರು ಜನರ ಮಧ್ಯೆ ಬೆಳೆದು ಬಂದಿರುವ ಜನನಾಯಕ ಸಮಾಜದಲಿರುವ ಬಡತನ, ಅಸ್ಪೃಶ್ಯತೆ, ಅಸಮಾನತೆ, ಅಪಮಾನಗಳನ್ನು ತಾನು ನೇರವಾಗಿ ಅನುಭವಿಸದೆ ಇದ್ದರೂ ಮನುಷ್ಯ ವಿರೋಧಿಯಾದ ಈ ವ್ಯವಸ್ಥೆಯನ್ನು ಬದಲಾಯಿಸಬೇಕೆಂದು ದೃಢ ಸಂಕಲ್ಪ ಮಾಡಿ ಅದನ್ನು ಸಾಧಿಸಿ ತೋರಿಸಿದರು. ಅಧಿಕಾರ ಸಂಪತ್ತು ಮತ್ತು ಅವಕಾಶದ ಹೆಬ್ಬಾಗಿಲನ್ನು ಎಲ್ಲರಿಗೂ ತೆರೆದು ಸಮಾನವಾಗಿ ಹಂಚಿಕೆ ಮಾಡದ ಹೊರತು ಅಭಿವೃದ್ಧಿಯನ್ನು ಕಾಣಲು ಸಾಧ್ಯವಿಲ್ಲ ಎನ್ನುವುದು ದೇವರಾಜ ಅರಸುರವರ ಅಚಲ ನಂಬಿಕೆಯಾಗಿತ್ತು. ಇದಕ್ಕಾಗಿಯೇ ಹಿಂದುಳಿದ, ದಲಿತ ಮತ್ತು ಅಲ್ಪ ಸಂಖ್ಯಾತ ಸಮುದಾಯಕ್ಕೆ ಸೇರಿರುವ ನಾಯಕರನ್ನು ಗುರುತಿಸಿ ಅವಕಾಶ ಕೊಟ್ಟು ರಾಜಕೀಯವಾಗಿ ಬೆಳೆಸಿ ಅಧಿಕಾರ ನೀಡಿದರು. ಹಾವನೂರು ಆಯೋಗ ರಚಿಸಿ ವೈಜ್ಞಾನಿಕವಾಗಿ ಸಾಮಾಜಿಕ ಅಧ್ಯಯನ ನಡೆಸಿ ಮೀಸಲಾತಿಯ ಮೂಲಕ ಅವಕಾಶ ವಂಚಿತ ಸಮುದಾಯಕ್ಕೆ ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗದಲ್ಲಿ ಹೆಚ್ಚಿನ ಪ್ರಾತಿನಿಧ್ಯ ಸಿಗುವಂತೆ ಮಾಡಿದರು.

ಮೈಸೂರು ಎಂದಿದ್ದ ನಮ್ಮ ರಾಜ್ಯದ ಹೆಸರನ್ನು ಕರ್ನಾಟಕವೆಂದು ಅಧಿಕೃತವಾಗಿ ಘೋಷಿಸಿ ನಾಮಕರಣ ಮಾಡಿ ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಅಂಗೀಕರಿಸಿದ ಕೀರ್ತಿ ಅರಸುರವರಿಗೆ ಸಲ್ಲುತ್ತದೆ.

ಸ್ವತಂತ್ರ ಕರ್ನಾಟಕದ ಇತಿಹಾಸದಲ್ಲಿ ದೇವರಾಜ ಅರಸುರವರ ಆಡಳಿತ ಕಾಲ ಸಮ ಸಮಾಜ ನಿರ್ಮಾಣದತ್ತ ಹೆಜ್ಜೆ ಹಾಕಿದ ಸುವರ್ಣ ಕಾಲವಾಗಿತ್ತು. ಇಡೀ ದೇಶದಲ್ಲಿ 1977ರಲ್ಲಿ ಕಾಂಗ್ರೆಸ್ ಪಕ್ಷ ನೆಲಕಚ್ಚಿದಾಗ ಅಂದಿನ ಮಾಜಿ ಪ್ರಧಾನಮಂತ್ರಿ ಇಂದಿರಾಗಾಂಧಿಯವರನ್ನು ಕರ್ನಾಟಕದ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಕರೆತಂದು ಗೆಲ್ಲಿಸಿ ಇಡೀ ದೇಶದಲ್ಲಿ ಕಾಂಗ್ರೆಸ್ ಪುನಶ್ಚೇತನಗೊಳ್ಳಲು ಅರಸುರವರ ಕೊಡುಗೆ ಅಪಾರವೆಂದು ಪ್ರಶಂಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಯುವಕ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಸ್.ಎಂ. ಜಯಪ್ರಕಾಶ್, ಎಂ.ಕೆ. ಲಿಯಾಖತ್ ಅಲಿ ಮತ್ತು ಎನ್.ಕೆ. ಅಬ್ದುಲ್ ಘನಿ, ಜಿಲ್ಲಾ ಕಾಂಗ್ರೆಸ್ ಮುಖಂಡರುಗಳಾದ ಹರೀಶ್ ಈರಣ್ಣ, ಡಿ. ಶಿವಕುಮಾರ್, ಹೆಚ್. ಹರೀಶ್, ಮಂಜುನಾಥ್, ಭೀಮೇಶ್, ಎಸ್.ಕೆ. ಇಮ್ರಾನ್‍ಖಾನ್, ಮಹಮ್ಮದ್ ಜಾಫರ್, ಮಹಬೂಬ್, ಶೇರ್‍ಇಕ್ಬಾಲ್, ಸೈಯದ್ ಅತೂಲ್, ಸುಪೇರ್, ಅಯಾಜ್, ಮಹಮ್ಮದ್ ಜಾಫರ್, ಇಫ್ರಾನ್, ಫರೂಕ್, ಶೇಖ್ ಉಮ್ಮರ್ ಇತರರು ಹಾಜರಿದ್ದರು. (ಎಸ್.ಎಚ್)

Leave a Reply

comments

Related Articles

error: