ಮೈಸೂರು

ಹೊಸ ಶಿಕ್ಷಣ ನೀತಿ ಕರಡು-2019 ವಿರೋಧಿಸಿದ ಎಐಡಿಎಸ್‍ಓ : ಶೈಕ್ಷಣಿಕ ವ್ಯವಸ್ಥೆಗೆ ವಿನಾಶವನ್ನು ತಂದೊಡ್ಡುವ ಆತಂಕ

ಮೈಸೂರು,ಜೂ.7:- ಕಸ್ತೂರಿ ರಂಗನ್ ಸಮಿತಿಯು ಮಾನವ ಸಂಪನ್ಮೂಲ ಇಲಾಖೆಗೆ ಮೇ 31 ರಂದು ಸಲ್ಲಿಸಿದ ಕರಡು ಹೊಸ ಶಿಕ್ಷಣ ನೀತಿ 2019ನ್ನು ಎಐಡಿಎಸ್‍ಓ ತೀವ್ರವಾಗಿ ಟೀಕಿಸುತ್ತದೆ. ಒಂದು ವೇಳೆ ಈ  ಶಿಕ್ಷಣ ವಿರೋಧಿ ಕರಡನ್ನು ಜಾರಿಗೊಳಿಸಿದ್ದೇ ಆದರೆ, ಅದು ಭಾರತದ ಸಾಮಾಜಿಕ ಮತ್ತು ಶೈಕ್ಷಣಿಕ ವ್ಯವಸ್ಥೆಗೆ ವಿನಾಶವನ್ನು ತಂದೊಡ್ಡಲಿದೆ ಎಂದು ಎಐಡಿಎಸ್‍ಓ ತಿಳಿಸಿದೆ.

ಈ ಕುರಿತು ಮಾಧ್ಯಮ ಹೇಳಿಕೆ ನೀಡಿರುವ  ಜಿಲ್ಲಾ ಉಪಾಧ್ಯಕ್ಷ  ಆಕಾಶ್ ಕುಮಾರ್ ಬಿ.ಎನ್. ಎನ್‍ಇಪಿ ಕರಡು-2019 ಕಾಲಗತಿಯಲ್ಲಿ ನಿರ್ಣಯವಾದ ಮತ್ತು ಈಗಾಗಲೇ ಅಸ್ತಿತ್ವದಲ್ಲಿರುವ 10+2+3 ವರ್ಷದ ಪದ್ಧತಿಯ ಬದಲಾಗಿ, ಮೂರುವರ್ಷದ ಪೂರ್ವ ಪ್ರಾಥಮಿಕ ಶಾಲೆ ಹಾಗೂ 4 ವರ್ಷದ ಪದವಿಯನ್ನೊಳಗೊಂಡು 5+3+3+4+4 ವರ್ಷದ ಪದ್ಧತಿಯನ್ನು ಜಾರಿಗೊಳಿಸಲು ಹೊರಟಿದೆ.  9 ರಿಂದ 12 ನೇ ತರಗತಿಗಳಿಗೆ ಸೆಮಿಸ್ಟರ್ ಪದ್ಧತಿಯನ್ನು ಜಾರಿಗೊಳಿಸಲು ಹೊರಟಿದೆ. ಆದರೆ ಶಿಕ್ಷಣದ ಗುಣ ಮಟ್ಟದ ಹೆಚ್ಚಳಕ್ಕೆ ಅವಶ್ಯಕವಾದ ಪಾಸ್ ಫೇಲ್ ಪದ್ಧತಿಯನ್ನು ಶಾಲಾ ಹಂತದಲ್ಲಿ ಜಾರಿಗೊಳಿಸಬೇಕೆಂಬ ಜನತೆಯ ಬೇಡಿಕೆಯ ಬಗ್ಗೆ ಈ ಕರಡು ಮೌನವಾಗಿದೆ. ಈಗಾಗಲೇ ಇರುವ ಶಿಕ್ಷಣದ ವಿವಿಧ ಹಂತಗಳನ್ನು ಕಲಬೆರಕೆ ಮಾಡಿ ಮತ್ತು 10 ಮತ್ತು 12 ನೇ ತರಗತಿಯ ಬೋರ್ಡ್ ಪರೀಕ್ಷೆಗಳನ್ನು ರದ್ದುಗೊಳಿಸಿ, ಸೆಮಿಸ್ಟರ್ ಪದ್ಧತಿಯನ್ನು ಜಾರಿಗೊಳಿಸುವಂತೆ ಸೂಚಿಸುವ ಈ ಕರಡು ಶಾಲಾ ಶಿಕ್ಷಣ ವ್ಯವಸ್ಥೆಯನ್ನೇ ಗಂಡಾಂತರಕ್ಕೆ ಸಿಲುಕಿಸಲಿದೆ.

ಈ ಕರಡು ಪ್ರಕಾರ ಇನ್ನು ಮುಂದೆ ಕಲಿಕೆಯಲ್ಲಿ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳ ನಡುವೆ ದೃಢವಾದ ಪ್ರತ್ಯೇಕತೆ ಇರುವುದಿಲ್ಲ. ಈ ಮೂಲಕ ಕಾಲ ಗತಿಯಲ್ಲಿ ನಿರ್ಣಯವಾದ ಶಿಕ್ಷಣ ಕಲಿಕಾ ಪ್ರಕ್ರಿಯೆ ಮತ್ತು ಔಪಚಾರಿಕ ಶಿಕ್ಷಣ ಪದ್ಧತಿಯೂ ನಾಶವಾಗುತ್ತದೆ. ಇದಲ್ಲದೆ ಈಗ ಪ್ರತ್ಯೇಕವಾಗಿರುವ ವಿಜ್ಞಾನ ಮತ್ತು ಕಲಾ ವಿಭಾಗಗಳನ್ನು ಧ್ವಂಸಗೊಳಿಸಿ, ಯಾವ ವಿದ್ಯಾರ್ಥಿ ಯಾವ ವಿಷಯವನ್ನು ಬೇಕಾದರೂ ಆಯ್ಕೆ ಮಾಡಿಕೊಳ್ಳಬಹುದಂತೆ ಅಂದರೆ ವಿಜ್ಞಾನ ವಿಭಾಗದ ವಿದ್ಯಾರ್ಥಿ ಕಲಾ ವಿಭಾಗದ ಯಾವುದಾದರೂ ವಿಷಯ ಹಾಗೂ ಕಲಾವಿಭಾಗದ ವಿದ್ಯಾರ್ಥಿ ವಿಜ್ಞಾನ ವಿಭಾಗದ ಯಾವುದಾದರೂ ವಿಷಯವನ್ನು ಕಲಿಯಬಹುದಂತೆ. ಇದು ಸಿಬಿಸಿಎಸ್(ಚಾಯ್ಸ್ ಬೇಸ್ಡ ಕ್ರೇಡಿಟ್ ಸಿಸ್ಟಮ್)ನ ಅನುಗುಣವಾಗಿರುವ ಕ್ರಮಾವಾಗಿದೆ ಅಷ್ಟೆ. ಇವುಗಳಿಂದಾಗಿ ವಿದ್ಯಾರ್ಥಿಗಳು ಯಾವುದೇ ವಿಭಾಗದಲ್ಲೂ ಸಮಗ್ರ ಜ್ಞಾನವನ್ನು ಪಡೆಯದೆ ಕೇವಲ ಪ್ರಮಾಣ ಪತ್ರಗಳನ್ನು ಪಡೆಯುವ ಅಪಾಯದತ್ತ ಸಾಗುತ್ತಾರೆ. ಇದಲ್ಲದೆ ಈ ಕರಡು ಪ್ರಕಾರ ಮೂರು ವರ್ಷವಿರುವ ಪದವಿ  ಶಿಕ್ಷಣ ಇನ್ನು ಮುಂದೆ ನಾಲ್ಕು ವರ್ಷವಾಗುತ್ತದೆ. ವಿದೇಶಿ ಶಿಕ್ಷಣ ಸಂಸ್ಥೆಗಳಲ್ಲಿ ಇದೇ ಪದ್ಧತಿ ಇರುವುದರಿಂದ, ಉನ್ನತ ಶಿಕ್ಷಣವನ್ನು ಜಾಗತಿಕ ಮಾರುಕಟ್ಟೆಯ ಸರಕನ್ನಾಗಿ ಮಾಡುವ ಕರಡಿನ ಉದ್ದೇಶ ಸ್ಪಷ್ಟವಾಗುತ್ತದೆ ಎಂದಿದ್ದಾರೆ.

ಪ್ರಧಾನಿಗಳ ಅಧ್ಯಕ್ಷತೆಯಲ್ಲಿ ಆರ್‍ಎಸ್‍ಎ(ರಾಷ್ಟ್ರೀಯ ಶಿಕ್ಷಾ ಆಯೋಗ) ಅಥವಾ ಎನ್‍ಇಸಿ (ನ್ಯಾಶನಲ್  ಎಜ್ಯುಕೇಶನ್ ಕಮಿಶನ್)ನ್ನು ರಚಿಸಬೇಕು. ಈ ಮೂಲಕವೇ ಶಿಕ್ಷಣದ ಸಮಗ್ರ ನೀತಿ ಮತ್ತು ಕಾರ್ಯಕ್ರಮಗಳನ್ನು ರೂಪಿಸಬೇಕು ಹಾಗೂ ಕೇಂದ್ರ ಹಾಗೂ ರಾಜ್ಯಗಳ ನಡುವೆ ಸಮನ್ವಯತೆಗೆ ಪ್ರಯತ್ನಿಸಬೇಕು. ಈ ಶಿಫಾರಸ್ಸಿನಿಂದ ಶಿಕ್ಷಣದ ನೀತಿಗಳು ಕೇಂದ್ರಿಕರಣಗೊಳ್ಳುವುದಲ್ಲದೆ, ಫ್ಯಾಸಿಸ್ಟ್ ನೀತಿಗೆ ಪೂರಕವಾಗಲಿವೆ.  ಆದ್ದರಿಂದ ದೇಶದ ಜನತೆಯು ಹಾಗೂ ವಿಶೇಷವಾಗಿ ವಿದ್ಯಾರ್ಥಿ ಸಮುದಾಯವು ಈ ಶಿಕ್ಷಣ ವಿರೋಧಿ ಎನ್.ಇ.ಪಿ ಕರಡು -2019ನ್ನು ತಿರಸ್ಕರಿಸಬೇಕು ಹಾಗೂ ಪ್ರಜಾತಾಂತ್ರಿಕ, ವೈಜ್ಞಾನಿಕ, ಧರ್ಮನೀರಪೇಕ್ಷ, ಶಿಕ್ಷಣ ಜಾರಿಗೊಳಿಸುವಂತೆ ಹೋರಾಟಕ್ಕೆ ಮುಂದಾಗಬೇಕು ಎಂದು ಎ.ಐ.ಡಿ.ಎಸ್.ಓ ರಾಜ್ಯ ಸಮಿತಿಯು ಕರೆ ನೀಡುತ್ತದೆ ಎಂದಿದ್ದಾರೆ. (ಎಸ್.ಎಚ್)

Leave a Reply

comments

Related Articles

error: