ಮೈಸೂರು

ಇಂದು ಪ್ರತಿ ಕ್ಷೇತ್ರದಲ್ಲೂ ಕಂಪ್ಯೂಟರೀಕರಣ ಅವಶ್ಯವಾಗಿದೆ: ಮೇಯರ್ ಎಂ.ಜೆ.ರವಿಕುಮಾರ್

ಒಂದು ದಿನದ ಬೋಧಕ ಅಭಿವೃದ್ಧಿ ಕಾರ್ಯಾಗಾರ ಮತ್ತು  ಕರ್ನಾಟಕ ರಾಜ್ಯ ಗಣಕ ವಿಜ್ಞಾನ ಅಧ್ಯಾಪಕರ ಸಂಘದ ಮೊದಲನೆ ವರ್ಷದ ವಾರ್ಷಿಕೋತ್ಸವ ಸಮಾರಂಭವನ್ನು ಗುರುವಾರ ಮೈಸೂರು ವಿವಿ ಗಣಕ ವಿಜ್ಞಾನ ವಿಭಾಗದ ಸಂಯುಕ್ತಾಶ್ರಯದಲ್ಲಿ ಸಂತ ಜೋಸೆಫರ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊ‍ಳ್ಳಲಾಗಿತ್ತು.

ಗಾಯಕ ಅಮ್ಮ ರಾಮಚಂದ್ರ ಅವರು ನಾಡಗೀತೆ ಹಾಡುವುದರ ಮೂಲಕ ಪ್ರಾರ್ಥಿಸಿದರು. ನಂತರ ಕಾರ್ಯಕ್ರಮವನ್ನು ಉದ್ಘಾಟಿಸಿದ ಮೇಯರ್ ರವಿಕುಮಾರ್ ಎಂ.ಜೆ. ಅವರು ಮಾತನಾಡಿದರು.

10 ವರ್ಷಗಳ ಹಿಂದೆ ಮೈಸೂರು ಮಹಾನಗರ ಪಾಲಿಕ ವತಿಯಿಂದ ಎಲ್ಲಾ ಮನೆಗಳಿಗೆ ಕಂಪ್ಯೂಟರ್ ನೀಡಲಾಗಿತ್ತು. ಆದರೆ ಕಂಪ್ಯೂಟರ್ ಜ್ಞಾನವಿಲ್ಲದ ಜನರು ಅದನ್ನು ಬಳಸದೇ ಮನೆಯ ಮೂಲೆಯಲ್ಲಿ ಇರಿಸಿದ್ದರು. ಆದರೆ ಇಂದು ಎಲ್ಲವೂ ಡಿಜಿಟಲೀಕರಣಗೊಂಡಿದೆ. ಕಂಪ್ಯೂಟರ್ ಸಾಕ್ಷರತೆಯನ್ನು ಎಲ್ಲರೂ ಪಡೆಯುತ್ತಿದ್ದಾರೆ. ಏಕೆಂದರೆ ಇಂದಿನ ತಂತ್ರಜ್ಞಾನ ಯುಗದಲ್ಲಿ ಅವಿದ್ಯಾವಂತರಿಗೂ ಕೂಡ ತಂತ್ರಜ್ಞಾನದ ಬಗ್ಗೆ ಅರಿವಿರಬೇಕು. ಇಂದು ರೈತರಿಗೆ ಎಟಿಎಮ್ ಗಳಲ್ಲಿ ಹಣ ತೆಗೆದುಕೊಳ‍್ಳಲು ಬರುತ್ತಿಲ್ಲ. ವಿದ್ಯಾರ್ಥಿಗಳು ಮತ್ತು ಅಧ‍್ಯಾಪಕರು ಅವಿದ್ಯಾವಂತರಿಗೆ ಮತ್ತು ರೈತರಿಗೆ ಹೇಳಿಕೊಡುವ ಮೂಲಕ ಅವರಿಗೂ ತಂತ್ರಜ್ಞಾನದ ಬಗ್ಗೆ ತಿಳಿಸಿಕೊಡಬೇಕು ಎಂದರು.

ಮೈಸೂರು ಸತತವಾಗಿ ಎರಡು ಬಾರಿ ಸ್ವಚ್ಛತಾ ನಗರಿ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ. ಈ ಬಾರಿಯೂ ಸಹ ಮೈಸೂರು ಸ್ವಚ್ಛತಾ ನಗರಿ ಪ್ರಶಸ್ತಿಯನ್ನು ಪಡೆಯಬೇಕಾದರೆ ಪ್ರತಿಯೊಬ್ಬರೂ ದಿನನಿತ್ಯ ಪ್ರಯತ್ನಿಸಬೇಕು. ಒಣ ಕಸ ಮತ್ತು ಹಸಿ ಕಸ ಎಂದು ಬೇರ್ಪಡಿಸಬೇಕು. ಸ್ವಚ್ಛತಾ ಆ್ಯಪ್ ಡೌನ್ ಲೋಡ್ ಮಾಡಿಕೊಂಡು ಕಸ ಬಿದ್ದಿರುವ ಸ್ಥಳವನ್ನು ಫೋಟೋ ತೆಗೆದು ವಾಟ್ಸಾಪ್ ಮಾಡಿದರೆ 24 ಗಂಟೆಗಳಲ್ಲಿ ಆ ಕಸ ವಿಲೇವಾರಿ ಮಾಡಲಾಗುತ್ತದೆ. ಈ ಮೊದಲು ಕೇವಲ 5000 ಜನರು ಮಾತ್ರ ಈ ಆ್ಯಪ್ ಅನ್ನು ಡೌನ್’ಲೋಡ್ ಮಾಡಿಕೊಂಡಿದ್ದರು. ಆದರೆ ಈಗ ಆ ಸಂಖ್ಯೆ 22 ಸಾವಿರಕ್ಕೆ ಏರಿದೆ. ಹೀಗೆಯೇ ಆ್ಯಪ್ ಡೌನ್ ಲೋಡ್ ಮಾಡಿಕೊ‍ಳ್ಳುವವರ ಸಂಖ್ಯೆ ದಿನೇ ದಿನೇ ಹೆಚ್ಚಿ ಮೈಸೂರು ಸ್ವಚ್ಛತಾ ನಗರವಾಗುವತ್ತ ಗಮನ ಹರಿಸಬೇಕು ಎಂದು ಹೇಳಿದರು. ವಿದ್ಯಾರ್ಥಿಗಳು ಪ್ರತಿಯೊಬ್ಬರೂ ಸಹ ಸ್ವಚ್ಛತಾ ಕಾರ್ಯಕ್ಕೆ ಕೈ ಜೋಡಿಸಬೇಕು ಎಂದು ಹೇಳಿದರು.

ಸಂಘದ ಅಧ‍್ಯಕ್ಷ ಪ್ರೊ.ಕೆ ಸಿದ್ದರಾಜು, ಕರ್ನಾಟಕ ರಾಜ್ಯ ಗಣಕ ವಿಜ್ಞಾನ ಅಧ‍್ಯಾಪಕರ ಸಂಘ ‘ನಮ್ಮ ನಡಿಗೆ ಕಂಪ್ಯೂಟರ್ ಸಾಕ್ಷರತೆಯೆಡೆಗೆ’ ಎಂಬ ಧ್ಯೇಯವನ್ನು ಹೊಂದಿದೆ ಎಂದು ಹೇಳಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮೈಸೂರು ವಿವಿ ಗಣಕ ವಿಜ್ಞಾನ ಪ್ರಾಧ‍್ಯಾಪಕ ಡಾ.ಪಿ.ನಾಗಭೂಷಣ್ ಆಶಯ ನುಡಿಗಳನ್ನಾಡಿ ಗಣಕ ವಿಜ್ಞಾನವನ್ನು ಪ್ರೀತಿಸಿ. ಅದೇ ಮೊದಲ ಪ್ರೇಮ ಎಂದರು. ಮೈಸೂರು ವಿವಿಯ ಕುಲಪತಿ ಯಶವಂತ ಡೋಂಗ್ರೆ ಮತ್ತು ಪ್ರಮತಿ ಹಿಲ್ ಹ್ಯೂ ಸಂಸ್ಥೆಯ ಕಾರ್ಯದರ್ಶಿ ಹೆಚ್.ವಿ.ರಾಜೀವ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡರು.

ಕುವೆಂಪು ವಿವಿಯ ಉಪಕುಲಪತಿ  ಪ್ರೊ.ಕೆ.ಚಿದಾನಂದಗೌಡ ಮಾತನಾಡಿ, ‘ಸಂಘೇ ಶಕ್ತಿ ಕಲೇ ಯುಗೇ ಯುಗೇ’ ಎಂಬಂತೆ ಇಂದಿನ ಕಲಿಯುಗದಲ್ಲಿ ಸಂಘ ಸಂಸ್ಥೆಗಳ ಪಾತ್ರ ಮಹತ್ವದ್ದಾಗಿದೆ ಎಂದರು. ಕಂಪ್ಯೂಟರ್ ಯುಗ ವಿದ್ಯುಚ್ಛಕ್ತಿ ಯಗದಿಂದ ಪ್ರಾರಂಭವಾಗಿದೆ. ಇಂದು ಹೊಸ ಹೊಸ ಆವಿಷ್ಕಾರಗಳು ನಡೆಯುತ್ತಿರುವುದರಿಂದ ಹೊಸ ಯುಗಕ್ಕೆ ಕಾಲಿರಿಸುತ್ತಿದ್ದೇವೆ ಎಂದರು.

ಕಾಲೇಜಿನ ಪ್ರಾಂಶುಪಾಲ ಪ್ರೊ.ಸಿ.ಎಮ್. ಮಣಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಧ್ಯಾಪಕರಾದ ಮಲ್ಲಿಕಾರ್ಜುನ ಶೆಟ್ಟಿ, ಅನಿಷಾ ಕುಮಾರ್, ಫಾದರ್ ವಿಜಯ್ ಕುಮಾರ್ ಉಪಸ‍್ಥಿತರಿದ್ದರು.

Leave a Reply

comments

Related Articles

error: