ಮೈಸೂರು

ಜೂ.೧೦ರಂದು ಗುರುತು ಮೊದಲನೇ ವಾರ್ಷಿಕೋತ್ಸವ 

ಮೈಸೂರು,ಜೂ.9-ಸಾಹಿತ್ಯ ಕೃಷಿ, ಪ್ರಚಲಿತ ವಿದ್ಯಮಾನ ಕುರಿತು ಚರ್ಚಿಸುವ ಆಶಯದಲ್ಲಿ ಸಾಂಸ್ಕೃತಿಕ ನಗರಿಯ ಕೆಲ ಯುವ ಪತ್ರಕರ್ತರು ಪ್ರಾರಂಭಿಸಿದ ಗುರುತು ತಂಡ ಯಶಸ್ವಿಯಾಗಿ ಒಂದು ವರ್ಷವನ್ನು ಪೂರೈಸಿದೆ.
ಈ ಹಿನ್ನೆಲೆಯಲ್ಲಿ ಗುರುತು ತಂಡದ ಮೊದಲನೇ ವಾರ್ಷಿಕೋತ್ಸವ ಹಾಗೂ ಗುರುತು ಕೃತಿ ಲೋಕಾರ್ಪಣೆಯನ್ನು ಜೂ. ೧೦ರಂದು  ಬೆಳಿಗ್ಗೆ ೧೦.೩೦ಕ್ಕೆ ಕಲಾಮಂದಿರದ ಮನೆಯಂಗಳದಲ್ಲಿ ಹಮ್ಮಿಕೊಳ್ಳಲಾಗಿದ್ದು, ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪ್ರೊ.ಅರವಿಂದ ಮಾಲಗತ್ತಿ ಸಮಾರಂಭ ಉದ್ಘಾಟಿಸಿ, `ಗುರುತು’ ಕೃತಿ ಲೋಕಾರ್ಪಣೆ ಮಾಡಲಿದ್ದಾರೆ.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮೊದಲ ಕೃತಿ ಸ್ವೀಕಾರ ಮಾಡಲಿದ್ದಾರೆ. ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಸಾಹಿತಿ ಬನ್ನೂರು ಕೆ.ರಾಜು ಅಧ್ಯಕ್ಷತೆ ವಹಿಸಲಿದ್ದಾರೆ.
ವರ್ತಮಾನದ ವಿಚಾರಗಳಿಗೆ ಮುಖಾಮುಖಿಯಾಗುತ್ತ ಸಾಹಿತ್ಯದ ಅಧ್ಯಯನ ನಡೆಸುತ್ತಿರುವ ಹೆಗ್ಗಳಿಕೆ ಗುರುತು ತಂಡದ್ದು. ಮಹಾರಾಜ ಕಾಲೇಜಿನ ಉದ್ಯಾನವನದಲ್ಲಿ ೨೦೧೮ರ ಜೂ. ೧೦ರಂದು ಪ್ರಾರಂಭವಾದ ಗುರುತು ತಂಡ ೨೦೧೯ರ ಜೂ. ೧೦ಕ್ಕೆ ಒಂದು ವರ್ಷವನ್ನು ಪೂರ್ಣಗೊಳಿಸಿದೆ. ಮೌಲಿಕವಾದ ೫೩ ಸಭೆಗಳನ್ನು ನಡೆಸಿದೆ.
ಹಿರಿಯ ಸಮಾಜವಾದಿ ಹೋರಾಟಗಾರರಾದ ಪ.ಮಲ್ಲೇಶ್, ವಿಧಾನಸಭೆ ಮಾಜಿ ಸ್ಪೀಕರ್ ಕೆ.ಆರ್.ಪೇಟೆ ಕೃಷ್ಣ, ಔಟ್‌ಲುಕ್ ಪತ್ರಿಕೆಯ ಮಾಜಿ ಪ್ರಧಾನ ಸಂಪಾದಕ ಕೃಷ್ಣಪ್ರಸಾದ್, ರೈತ ಸಂಘದ ರಾಜ್ಯಾಧ್ಯಕ್ಷರಾದ ಬಡಗಲಪುರ ನಾಗೇಂದ್ರ, ಚಿಂತಕರಾದ ಡಾ.ಎಸ್.ತುಕಾರಾಂ, ನಾ.ದಿವಾಕರ ಮುಂತಾದವರು ಗುರುತು ಸಭೆಯಲ್ಲಿ ಭಾಗವಹಿಸಿ ಪತ್ರಕರ್ತರ ಈ ಕಾರ್ಯವನ್ನು ಪ್ರೋತ್ಸಾಹಿಸಿದ್ದಾರೆ.

Leave a Reply

comments

Related Articles

error: