Uncategorized

ಮುಂಬೈಯಲ್ಲಿ ಭಾರೀ ಮಳೆ: 22 ವಿಮಾನಗಳ ಸಂಚಾರ ಮಾರ್ಗ ಬದಲು

ಮುಂಬೈ,ಜೂ.11-ಭಾರೀ ಮಳೆ ಹಾಗೂ ಗಾಳಿಯಿಂದಾಗಿ ವಿಮಾನ ಸಂಚಾರ ಮತ್ತು ರೈಲು ಸಂಚಾರಕ್ಕೆ ತೊಡುಕು ಉಂಟಾಗಿದೆ.

ಇಲ್ಲಿನ ಛತ್ರಪತಿ ಶಿವಾಜಿ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಯಾಚರಣೆಯನ್ನು ಭಾಗಶಃ ಸ್ಥಗಿತಗೊಳಿಸಲಾಗಿದೆ. ಅಲ್ಲದೆ, 22 ವಿಮಾನಗಳ ಸಂಚಾರ ಮಾರ್ಗವನ್ನು ಬದಲಾಯಿಸಲಾಗಿದೆ.

ಮುಂಬೈಗೆ ಬರುವ ವಿಮಾನಗಳು ದೆಹಲಿ, ಹೈದರಾಬಾದ್ ಹಾಗೂ ಅಹಮದಾಬಾದ್‌ಗೆ ತೆರಳುತ್ತಿದೆ. ಮುಂಬೈ ಏರ್ ಟ್ರಾಫಿಕ್ ಕಂಟ್ರೋಲ್ ನೀಡಿರುವ ಮಾಹಿತಿ ಪ್ರಕಾರ 16 ಡೊಮೆಸ್ಟಿಕ್ ಹಾಗೂ 6 ಅಂತಾರಾಷ್ಟ್ರೀಯ ವಿಮಾನದ ಮಾರ್ಗ ಬದಲಾಯಿಸಲಾಗಿದೆ.

ಸೋಮವಾರ ರಾತ್ರಿ ನ್ಯೂಯಾರ್ಕ್‌ನಿಂದ ಮುಂಬೈಗೆ ಬರುತ್ತಿದ್ದ ಯುನೈಟೆಡ್ ಏರ್‌ಲೈನ್ಸ್ ವಿಮಾನವನ್ನು ದೆಹಲಿಗೆ ಮರು ನಿರ್ದೇಶಿಸಲಾಯಿತು. ಅಂತೆಯೇ ದೆಹಲಿಯಿಂದ ಮುಂಬೈಗೆ ಬರುತ್ತಿದ್ದ ಗೋ ಏರ್ ವಿಮಾನವನ್ನು ಅಹ್ಮದಾಬಾದ್‌ಗೆ ಮರು ನಿರ್ದೇಶಿಸಲಾಗಿದೆ ಮುಂಬೈ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದ ವಕ್ತಾರ ಹೇಳಿದ್ದಾರೆ.

ಥಾಯ್ ಏರ್‌ವೇಸ್‌ನ ವಿಮಾನವೊಂದು ರನ್‌ವೇಯಿಂದ ತೆರಳುತ್ತಿದ್ದಾಗ ಸುರಕ್ಷಾ ದೀಪಕ್ಕೆ ಬಡಿದಿದೆ. ಅವಶೇಷಗಳನ್ನು ರನ್‌ವೇನಿಂದ ಸ್ವಚ್ಛಗೊಳಿಸುತ್ತಿರುವುದು ಕಂಡುಬಂತು.

ಸಬರ್ಬನ್ ರೈಲು ಸಂಚಾರ ಸ್ಥಗಿತಗೊಂಡಿದೆ. ಬಾಂದ್ರಾದಲ್ಲಿ ಹಾಲ್ಟ್ ಆಗಿದ್ದ ಹಲವು ರೈಲುಗಳ ಸಂಚಾರ ಸ್ಥಗಿತಗೊಂಡಿದೆ. ಕೆಲವು ರೈಲುಗಳು ತಾಂತ್ರಿಕ ದೋಷದಿಂದಾಗಿ ಕಾರ್ಯಾಚರಣೆ ಸ್ಥಗಿತಗೊಳಿಸಿದೆ. ಕೇಂದ್ರ ರೈಲ್ವೆಯಲ್ಲಿ ರೈಲುಗಳು ಎಂದಿನಂತೆ ಚಲಿಸುತ್ತಿವೆ.

ಮಲಾಡ್, ಕುರ್ಲಾ, ಘಾಟ್‌ಕೋಪರ್, ವಿಕ್ರೋಲಿ ಸುತ್ತಮುತ್ತ ವಿಪರೀತ ಮಳೆಯಾಗುತ್ತಿದೆ. ಇದು ಈ ವರ್ಷದ ಮೊದಲ ಮುಂಗಾರು ಪೂರ್ವ ಮಳೆಯಾಗಿದೆ. ಹೆಚ್ಚಿನ ಮಳೆಯಾಗುವ ಸಾಧ್ಯತೆ ಇರುವುದರಿಂದ ಮುಂಬೈನ ಅಗ್ನಿ ಶಾಮಕ ಸಿಬ್ಬಂದಿಗಳು ತಯಾರಿ ನಡೆಸಿದ್ದಾರೆ.

ಮುಂಗಾರು ಪೂರ್ವ ಭಾರೀ ಮಳೆಯಾಗುತ್ತಿದ್ದು, ಇಷ್ಟು ದಿನ ಬಿಸಿಗಾಳಿಯಿಂದ ಬಳಲುತ್ತಿದ್ದ ಮುಂಬೈ ಜನತೆಗೆ ವರುಣರಾಯ ಸ್ವಲ್ಪ ತಂಪೆರೆದಿದ್ದಾನೆ. (ಎಂ.ಎನ್)

Leave a Reply

comments

Related Articles

Check Also

Close
error: