ಪ್ರಮುಖ ಸುದ್ದಿ

ಚಿಕಾಗೋ ಭಾಷಣದ 125ನೇ ವರ್ಷಾಚರಣೆ : ಸಂಕಷ್ಟದಲ್ಲಿರುವವರ ನೋವುಗಳಿಗೆ ಸ್ಪಂದಿಸುವುದೇ ಮಹಾಯಜ್ಞ : ಮುಕ್ತಿದಾನಂದ ಮಹಾರಾಜ್ ಅಭಿಮತ

ರಾಜ್ಯ( ಮಡಿಕೇರಿ) ಜೂ.12 :- ಸಂಕಷ್ಟದಲ್ಲಿರುವವರ ನೋವುಗಳಿಗೆ ಸ್ಪಂದಿಸುವುದನ್ನೇ ‘ಮಹಾಪೂಜೆ’ ಎಂದು ಭಾವಿಸಬೇಕು, ತಮ್ಮಿಂದ ಸಾಧ್ಯವಾದ ಸೇವೆಯನ್ನು ಸಮಾಜಕ್ಕೆ ಸಲ್ಲಿಸುವುದೇ ನಿಜವಾದ ‘ಯಜ್ಞ’ವೆಂದು ವಿಶ್ಲೇಷಿಸಿರುವ ಮೈಸೂರು ರಾಮಕೃಷ್ಣ ಶಾರದಾಶ್ರಮದ ಅಧ್ಯಕ್ಷರಾದ ಮುಕ್ತಿದಾನಂದ ಮಹಾರಾಜ್, ಪ್ರತಿಯೊಬ್ಬರು ತಾನು ಎನ್ನುವ ಅಹಂ ತೊರೆದು ಇತರರ ಸೇವೆಗೆ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದ್ದಾರೆ.
ಪೊನ್ನಂಪೇಟೆ ಶ್ರೀ ರಾಮಕೃಷ್ಣ ಶಾರದಾಶ್ರಮದ ವತಿಯಿಂದ ನಗರದ ಶ್ರೀನಿಕೇತನದ ಸದ್ಗುರು ಎಜುಕೇಷನ್ ಟ್ರಸ್ಟ್‍ನ ಕೂರ್ಗ್ ಇನ್‍ಸ್ಟಿಟ್ಯೂಟ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ಹೊಲಿಗೆ ತರಬೇತಿ ಮತ್ತು ಕಂಪ್ಯೂಟರ್ ತರಬೇತಿ ಪಡೆಯುತ್ತಿರುವ ಸಂತ್ರಸ್ತ ಹೆಣ್ಣು ಮಕ್ಕಳಿಗೆ ‘ಸಂಕಟಗಳ ಮಧ್ಯೆ ಯಶಸ್ಸಿನ ಸೂತ್ರಗಳು’ ವಿಷಯದಡಿ ಆಯೋಜಿತ ‘ಪ್ರಸ್ತುತ ವಿಕಸನ ತರಬೇತಿ ಶಿಬಿರ’ ಹಾಗೂ ಸ್ವಾಮಿ ವಿವೇಕಾನಂದರ ಚಿಕಾಗೋ ಭಾಷಣದ 125ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ತರಬೇತಿಯಿಂದ ಪಡೆದ ಜ್ಞಾನದಿಂದ ಸಮಾಜಕ್ಕೆ ಉತ್ತಮವಾದ ಸೇವೆಯನ್ನು ಸಲ್ಲಿಸುವಂತೆ ತಿಳಿಸಿದ ಅವÀರು, ಸಮಾಜಕ್ಕೆ ಪ್ರಾಮಾಣಿಕವಾಗಿ ನೀಡಬೇಕಿರುವುದನ್ನು ವಂಚಿಸಿ, ಅದನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಂಡಲ್ಲಿ ಅದು ಸಮಾಜಘಾತುಕವೆನಿಸಿಕೊಳ್ಳುತ್ತದೆ. ಅತ್ಯುತ್ತಮವಾಗಿ ಯಾವುದೇ ಕೆಲಸವನ್ನು ನಿರ್ವಹಿಸುವ ಮಾನಸಿಕ ಶಕ್ತಿಯನ್ನು ಪ್ರತಿಯೊಬ್ಬರು ವೃದ್ಧಿಸಿಕೊಳ್ಳುವುದರೊಂದಿಗೆ, ಪ್ರತಿಯೊಂದು ಕೆಲಸವನ್ನು ಪರಿಪೂರ್ಣವಾಗಿ ನಿರ್ವಹಿಸಬೇಕು.ಕಾಯಕವೇ ನಿಜವಾದ ಐಶ್ವರ್ಯವಾಗಿದ್ದು, ಕೆಲಸ ಕಾರ್ಯಗಳಲ್ಲಿ ಪ್ರಾಮಾಣಿಕವಾಗಿ ಪ್ರತಿಯೊಬ್ಬರು ತೊಡಗಿಸಿಕೊಂಡಲ್ಲಿ ಭಾರತ ಅಮೇರಿಕಾ ದೇಶಕ್ಕಿಂತಲೂ ಸಮೃದ್ಧಿಯನ್ನು ಕಾಣಲು ಸಾಧ್ಯವೆಂದು ತಿಳಿಸಿದರು.
ಕಾರ್ಯಕ್ರಮವನ್ನು ಜ್ಯೋತಿ ಪ್ರಜ್ವಲನದ ಮೂಲಕ ಉದ್ಘಾಟಿಸಿದ ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿಗಳು, ಸರ್ವರ ಹಿತವನ್ನು ತನ್ನ ಹಿತವೆಂದು ಪರಿಭಾವಿಸಿ ಸಂತ್ರಸ್ತರಿಗೆ ಶ್ರೀ ರಾಮಕೃಷ್ಣ ಶಾರದಾಶ್ರಮದಿಂದ ಸೌಲಭ್ಯಗಳನ್ನು ಒದಗಿಸುವುದರೊಂದಿಗೆ, ಸಂತ್ರಸ್ತರನ್ನು ಅವರ ಕಾಲಮೇಲೆ ಅವರನ್ನು ನಿಲ್ಲಿಸುವ ಇಂತಹ ತರಬೇತಿ ಕಾರ್ಯಕ್ರಮಗಳ ಆಯೋಜನೆ ಶ್ಲಾಘನೀಯ. ಇಂತಹ ಕಾರ್ಯಕ್ರಮಗಳ ಮೂಲಕ ಸಂತ್ರಸ್ತರು ಅಂತಃಶಕ್ತಿಯನ್ನು ತುಂಬಿಕೊಂಡು ಉತ್ತಮ ಬದುಕಿನತ್ತ ಹೆಜ್ಜೆಯನ್ನಿಡುವಂತೆ ಹಾರೈಸಿದರು.
75 ಲಕ್ಷ ಮೌಲ್ಯದ ನೆರವು ವಿತರಣೆ- ಶ್ರೀ ರಾಮಕೃಷ್ಣ ಶಾರದಾಶ್ರಮದ ಅಧ್ಯಕ್ಷರಾದ ಶ್ರೀ ಬೋಧಸ್ವರೂಪಾನಂದ ಮಹಾರಾಜ್ ಪ್ರಾಸ್ತಾವಿಕವಾಗಿ ಮಾತನಾಡಿ, ಆಶ್ರಮದ ಮೂಲಕ ದಾನಿಗಳ ಸಹಕಾರವನ್ನು ಬಳಸಿಕೊಂಡು ಸಂತ್ರಸ್ತರಿಗೆ 75 ಲಕ್ಷಕ್ಕೂ ಹೆಚ್ಚಿನ ಮೌಲ್ಯದ ಸಾಮಗ್ರಿಗಳನ್ನು ವಿತರಿಸಲಾಗಿದ್ದು, ಸಂತ್ರಸ್ತರ ಸ್ವಾವಲಂಬಿ ಬದುಕಿಗೆ ಪೂರಕವಾಗಿ ಹೊಲಿಗೆ, ಕಂಪ್ಯೂಟರ್ ತರಬೇತಿ, ಜೇನು ಕೃಷಿಯ ತರಬೇತಿಗಳನ್ನು, ಆಹಾರ ಪದಾರ್ಥಗಳ ತಯಾರಿಯ ಕೌಶಲ್ಯಗಳನ್ನು ನೀಡುವ ಕಾರ್ಯನಡೆಯುತ್ತಿದೆ. ಆ ಮೂಲಕ ಸಂಕಷ್ಟದಲ್ಲಿರುವವರಲ್ಲಿ ಆತ್ಮವಿಶ್ವಾಸವನ್ನು ಮೂಡಿಸಿ, ಸ್ವಾವಲಂಬಿ ಬದುಕಿಗೆ ಉತ್ತೇಜನವನ್ನು ನೀಡಲಾಗುತ್ತಿದೆಯೆಂದರು.
ಕಾರ್ಯಕ್ರಮದಲ್ಲಿ ಶ್ರೀ ರಾಮಕೃಷ್ಣ ಮಿಷನ್‍ನ ಶ್ರೀ ಗೋಪೇಂದ್ರ ನಂದಜೀ ಮಹರಾಜ್, ಪೊನ್ನಂಪೇಟೆಯ ಶ್ರೀ ರಾಮಕೃಷ್ಣ ಶಾರದಾಶ್ರಮದ ಶ್ರೀ ಪರಹಿತಾನಂದ ಮಹರಾಜ್, ಮೈಸೂರು ಶ್ರೀ ರಾಮಕೃಷ್ಣ ಮಿಷನ್‍ನ ಹಳೇ ವಿದ್ಯಾರ್ಥಿ ಹಾಗೂ ಅಮೇರಿಕಾದ ನಾರ್ತ್ ಟೆಕ್ಸಾಸ್ ವಿವಿಯ ಪ್ರೊ. ಡಾ. ನಿಖಿಲ್ ಮೋರೋ ಮಾತನಾಡಿದರು. ಹಿರಿಯ ನಾಗರಿಕರ ವೇದಿಕೆಯ ಮುಖ್ಯಸ್ಥರಾದ ಜಿ.ಟಿ.ರಾಘವೇಂದ್ರ ಉಪಸ್ಥಿತರಿದ್ದರು. ರಕ್ಷಿತಾ ಮತ್ತು ನೇತ್ರಾ ಪ್ರಾರ್ಥಿಸಿದರು. ಶೋಭಾನಂದ್ ಸ್ವಾಗತಿಸಿ, ಚಿ.ನಾ.ಸೋಮೇಶ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: