ಮೈಸೂರು

ರಾಷ್ಟ್ರೀಯ ಜಲನೀತಿ ಜಾರಿಯಾದರೆ ಮಾತ್ರ ಕಾವೇರಿಗೆ ಶಾಶ್ವತ ಪರಿಹಾರ: ಕೆ.ಎಸ್. ಭಗವಾನ್

ರಾಷ್ಟ್ರೀಯ ಜಲನೀತಿ ಜಾರಿಯಾದರೆ ಮಾತ್ರ ಕಾವೇರಿ ಜಲವಿವಾದ ಸಂಕಷ್ಟಕ್ಕೆ ಶಾಶ್ವತ ಪರಿಹಾರ ಸಾಧ್ಯವೆಂದು ಸಾಹಿತಿ, ಚಿಂತಕ ಕೆ.ಎಸ್. ಭಗವಾನ್ ತಿಳಿಸಿದರು.

ಕೆ.ಎಸ್. ಭಗವಾನ್
ಕೆ.ಎಸ್. ಭಗವಾನ್

ಅವರು ನಗರದ ಪತ್ರಕರ್ತರ ಭವನದಲ್ಲಿ (ಶುಕ್ರವಾರ) ಸೆ.23ರಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 425 ಟಿ.ಎಂ.ಸಿ. ನೀರು ರಾಜ್ಯದಿಂದ ಸಂಗ್ರಹವಾಗುತ್ತಿದೆ, ಬಳಕೆಗೆ ಕೇವಲ 205 ಟಿ.ಎಂ.ಸಿ. ಮಾತ್ರ ಲಭ್ಯವಾಗುತ್ತಿದ್ದು ಘೋರ ಅನ್ಯಾಯವಾಗಿದೆ. ಆಯಾಯ ಪ್ರದೇಶದಲ್ಲಿ ಸಂಗ್ರಹವಾಗುವ ನೀರು ಆ ಪ್ರದೇಶದ ಹಕ್ಕು ಎನ್ನುವ ರಾಷ್ಟ್ರೀಯ ಜಲನೀತಿ ಜಾರಿಗೊಳಿಸುವುದರಿಂದ ಕಾವೇರಿ ಜಲಾಶಯಗಳಿಂದ 425 ಟಿ.ಎಂ.ಸಿ. ನೀರು ಲಭ್ಯವಾಗಲಿದ್ದು ರಾಜ್ಯ ಸುಭಿಕ್ಷೆ ಹೊಂದುವುದು. ಅದರಂತೆ ಮಹದಾಯಿ ವಿವಾದವು ಬಗೆಹರಿಯುವುದು. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಪಕ್ಷಬೇಧ, ಪ್ರದೇಶಬೇಧ ಮರೆತು ಒಗ್ಗಟ್ಟಿನಿಂದ ಹೋರಾಡುವುದಕ್ಕೆ ಇದು ಸೂಕ್ತ ಸಮಯ ಎಂದರು.

ನೈಸರ್ಗಿಕ ಹಕ್ಕು

ರಾಜ್ಯದಲ್ಲಿ ಸಂಗ್ರಹವಾಗುವ ಸಂಪೂರ್ಣ ನೀರು ನಮಗೇ ಸೇರಿದ್ದು. ಇದು ನೈಸರ್ಗಿಕ ನ್ಯಾಯ. ಅಂದಿನ ಬ್ರಿಟಿಷ್ ಮತ್ತು ಮೈಸೂರು ಸಂಸ್ಥಾನದ ನಡುವಿನ ಒಪ್ಪಂದದಂತೆ ಇಂದಿಗೂ ನಡೆಯುತ್ತಿರುವುದು ಅವೈಜ್ಞಾನಿಕವಾಗಿದ್ದು ನಮ್ಮ ದೌರ್ಬಲ್ಯ ಅವರ ಶಕ್ತಿಯಾಗಿದೆ ಎಂದು ಕಿಡಿಕಾರಿದರು.

ಕಾವೇರಿಯು ರಾಜ್ಯದಲ್ಲಿ 380 ಕಿಮೀ ಹರಿಯುವಳು, ಶೇ.58ರಷ್ಟು ನೀರು ಈ ಭಾಗದಲ್ಲಿ ಸಂಗ್ರಹವಾಗುವುದು ಉಳಿದಂತೆ ಕೇವಲ ಶೇ. 28 ರಿಂದ 30ರಷ್ಟು ಮಾತ್ರ ತಮಿಳುನಾಡಿನಲ್ಲಿ ಸಂಗ್ರಹವಾಗಲಿದೆ. ತಮಿಳುನಾಡಿಗಿಂತ 2 ಸಾವಿರ ಅಡಿ ರಾಜ್ಯ ಎತ್ತರದಲ್ಲಿದ್ದೂ ಇಳಿಜಾರಿನಲ್ಲಿರುವ ತಮಿಳುನಾಡಿಗೆ ನೀರಿನ ಹರಿವು ಹೆಚ್ಚು, ರಾಜ್ಯಕ್ಕೆ ಹೋಲಿಸಿದಲ್ಲಿ ತಮಿಳುನಾಡಿನಲ್ಲಿ ಅಂತರ ಜಲಮಟ್ಟ ಹೆಚ್ಚು. ನ್ಯಾಯಾಲಯ ಈ ಭೌಗೋಳಿಕ ಅಂಶವನ್ನೇ ಪರಿಗಣಿಸದೆ ತೀರ್ಪು ನೀಡಿರುವುದು ಅರ್ಥಹೀನ,

ಒಪ್ಪಂದದಂತೆ ತಮಿಳುನಾಡು ಕೇವಲ 11,500 ಲಕ್ಷ ಹೆಕ್ಟೇರ್ ನೀರಾವರಿ ಮಾಡಬೇಕು, ಆದರೆ ಇಂದು 33 ಲಕ್ಷ ಹೆಕ್ಟೇರ್ ಗೂ ಹೆಚ್ಚು ಪ್ರದೇಶವನ್ನು ನೀರಾವರಿಯಾಗಿ ಅಭಿವೃದ್ಧಿಪಡಿಸಿದೆ. ನ್ಯಾಯಾಧೀಕರಣ ಹಾಗೂ ಮೇಲ್ತುಸುವಾರಿ ಸಮಿತಿಯಲ್ಲಿರುವ ದೀಪಕ್ ಕೃಷ್ಣ ಹಾಗೂ ಶೇಖರ್ ತಮಿಳುನಾಡಿನ ಮೂಲದವರಾಗಿದ್ದು ತಮಿಳುನಾಡಿನ ಹಿತ ಕಾಪಾಡಿದ್ದಾರೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಅಭಿನಂದನೆ

ಸರ್ವಪಕ್ಷಗಳ ಸಭೆಯ ಒಮ್ಮತದಂತೆ ತಮಿಳುನಾಡಿಗೆ ನೀರು ಹರಿಸುವುದಿಲ್ಲ ಎನ್ನುವ ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ಧಾರ ಪ್ರಶಂಶಾರ್ಹ. ನ್ಯಾಯಾಂಗನಿಂದನೆ ಮುಖ್ಯಮಂತ್ರಿಗಳಿಗಷ್ಟೇ ಬರುವುದಿಲ್ಲ, ನ್ಯಾಯಾಂಗ ನಿಂದನೆಗೆ ಇಡೀ ರಾಜ್ಯವೇ ಗುರಿಯಾಗುವುದು ಆ ಬಗ್ಗೆ ತಲೆಕೆಡಿಸಿಕೊಳ್ಳದೆ ರಾಜ್ಯದ ಹಿತ ಕಾಪಾಡಿ ಎಂದು ಕೋರಿದರು.

ರಾಷ್ಟ್ರೀಯ ಜಲನೀತಿ ಜಾರಿಯಾಗಲಿ

ರಾಷ್ಟ್ರೀಯ ಜಲನೀತಿ ಜಾರಿಯಾದರೆ ರಾಷ್ಟ್ರದ ಎಲ್ಲ ನದಿ ವಿವಾದಗಳಿಗೂ ಸ್ವಯಂ ಪರಿಹಾರ ಲಭಿಸುವುದು, ಕಳೆದ 50 ವರ್ಷಗಳಿಂದ ಕಾವೇರಿ ಸಮಸ್ಯೆ ಉಲ್ಬಣಿಸುತ್ತಿದ್ದು  ರಾಷ್ಟ್ರೀಯ ಜಲನೀತಿ ಜಾರಿಯಾದರೆ ಮಾತ್ರ ಶಾಶ್ವತ ಪರಿಹಾರ ಸಿಗುವುದು.

ಕಾವೇರಿ ನಿರ್ವಹಣಾ ಪ್ರಾಧಿಕಾರ ರಚನೆಯಿಂದ ಕಾವೇರಿ ವಿವಾದ ಇನ್ನಷ್ಟು ಗಂಭೀರವಾಗುವುದು. ಈ ಭಾಗದ ರೈತರಿಗೆ ತೀವ್ರ ಅನ್ಯಾಯವಾಗುವುದು. ಕಾವೇರಿ ನಿರ್ವಹಣಾ ಪ್ರಾಧಿಕಾರವು ಕೇಂದ್ರ ಸರ್ಕಾರದ ಹತೋಟಿಯಲ್ಲಿರುವುದರಿಂದ ಸಮಸ್ಯೆ ಇನ್ನಷ್ಟು ಜಟಿಲವಾಗುವುದು.

ಸಾಮಾನ್ಯರಿಗೆ ಅರಿವು ಮೂಡಿಸಿ

‘ಅವರಿಗೆ ಅವರ ಪಾಲು ನಮಗೆ ನಮ್ಮ ಪಾಲು’ ಹೋರಾಟದ ಉದ್ದೇಶವಾಗಲಿ, ಕಾವೇರಿ ನೀರು ಹಂಚಿಕೆ ಬಗ್ಗೆ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಿ ಹೋರಾಡಲೂ ಪ್ರೋತ್ಸಾಹಿಸಬೇಕು. 200 ವರ್ಷಗಳ ಕಾಲ ಹೋರಾಟ ನಡೆಸಿ ಸ್ವಾತಂತ್ರ್ಯ ಪಡೆದ ದೇಶ ನಮ್ಮದು, ಶಾಂತಿಯುತ ಹೋರಾಟದಿಂದ ಮಾತ್ರ ಯಶಸ್ಸು ಸಾಧ್ಯ, ಆದ್ದರಿಂದ ಹೋರಾಟಗಾರರು ದೊಂಬಿ, ಗಲಾಟೆ, ಹಲ್ಲೆ, ದೌರ್ಜನ್ಯವೆಸಗದೆ ಶಾಂತಿಯಿಂದ ಗೌರವಯುತವಾಗಿ ಹೋರಾಡಬೇಕು. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿ ಎಂದು ಆಶಿಸಿದರು.

ಸುದ್ದಿಗೋಷ್ಠಿಯಲ್ಲಿ ಕನ್ನಡ ಕ್ರಿಯಾ ಸಮಿತಿಯ ಶ್ರೀನಿವಾಸ್ ಹಾಗೂ ಸುರೇಶ್ ಉಪಸ್ಥಿತರಿದ್ದರು.

Leave a Reply

comments

Related Articles

error: