
ದೇಶ
ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರ ಕುಟುಂಬಕ್ಕೆ 5 ಲಕ್ಷ ರೂ. ನೆರವು ನೀಡಿದ ಅಮಿತಾಬ್ ಬಚ್ಚನ್
ಮುಂಬೈ,ಜೂ.14-ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರ ಕುಟುಂಬಕ್ಕೆ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ತಲಾ 5 ಲಕ್ಷ ರೂ. ಆರ್ಥಿಕ ನೆರವು ನೀಡಿದ್ದಾರೆ.
ನನ್ನ ಮತ್ತೊಂದು ಭರವಸೆ ಈಡೇರಿದೆ. ಹುತಾತ್ಮ ಯೋಧರ ಕುಟುಂಬ ಸದಸ್ಯರಿಗೆ ಸ್ವಲ್ಪ ಧನಸಹಾಯ ಮಾಡಬೇಕೆಂದು ಬಯಸಿದ್ದೆ. ಅದು ಈಡೇರಿದೆ. ಸಿಆರ್ ಪಿಎಫ್ ಹುತಾತ್ಮ ಯೋಧರ ಕುಟುಂಬಸ್ಥರ ಹೆಸರು, ವಿಳಾಸ ತಿಳಿದುಕೊಳ್ಳಲು ಸ್ವಲ್ಪ ಸಮಯ ಹಿಡಿಯಿತು. ಆದರೂ ನಮ್ಮ ಪ್ರಯತ್ನಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ. ಭಾರತ ಸರ್ಕಾರ ಮತ್ತು ಸಿಆರ್ ಪಿಎಫ್ ಹಿರಿಯ ಅಧಿಕಾರಿಗಳು ಮತ್ತು ಸಂಸ್ಥೆಗಳು ನಮ್ಮ ನೆರವಿಗೆ ಬಂದವು ಎಂದು ಅಮಿತಾಬ್ ಬಚ್ಚನ್ ಅವರು ತಮ್ಮ ಬ್ಲಾಗ್ ನಲ್ಲಿ ಬರೆದುಕೊಂಡಿದ್ದಾರೆ.
ಎರಡು ದಿನಗಳ ಹಿಂದೆ ನಡೆದ ಕಾರ್ಯಕ್ರಮದಲ್ಲಿ ಅಮಿತಾಬ್ ಬಚ್ಚನ್ ಅವರು ಈ ವಿಷಯ ಪ್ರಕಟಿಸಿದರು. ಈ ಸಂದರ್ಭದಲ್ಲಿ ಅವರ ಮಕ್ಕಳಾದ ಅಭಿಷೇಕ್ ಬಚ್ಚನ್, ಶ್ವೇತಾ ನಂದನ್ ಮತ್ತು ಪುಲ್ವಾಮಾ ದಾಳಿಯ ಹುತಾತ್ಮ ಯೋಧರ ಕೆಲವು ಕುಟುಂಬ ಸದಸ್ಯರು ಹಾಜರಿದ್ದರು.
ಕಳೆದ ಫೆಬ್ರವರಿಯಲ್ಲಿ ಪುಲ್ವಾಮಾ ದಾಳಿ ನಡೆದಾಗಲೇ ಬಚ್ಚನ್ ಆರ್ಥಿಕ ನೆರವು ನೀಡುವುದಾಗಿ ತಿಳಿಸಿದ್ದರು. ಆರ್ಥಿಕ ನೆರವನ್ನು ಯಾವ ರೀತಿ ಸರಿಯಾಗಿ ತಲುಪಿಸಬೇಕು ಎಂಬ ಚರ್ಚೆ ಮಾಡಿದ್ದರು. ಸರ್ಕಾರ ಇದಕ್ಕಾಗಿ ಒಂದು ವ್ಯವಸ್ಥೆ ಮಾಡಿದರೆ ಆ ಮೂಲಕ ತಮ್ಮ ಹಣವನ್ನು ತಲುಪಿಸುವ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಬಚ್ಚನ್ ಪಿಆರ್ ಒ ತಿಳಿಸಿದ್ದರು.
ಅಮಿತಾಬ್ ಬಚ್ಚನ್ ಈ ಹಿಂದೆ ಉತ್ತರ ಪ್ರದೇಶದ 1 ಸಾವಿರಕ್ಕೂ ಅಧಿಕ ರೈತರ ಸಾಲವನ್ನು ತೀರಿಸಲು ನೆರವಾಗಿದ್ದರು. (ಎಂ.ಎನ್)