ಪ್ರಮುಖ ಸುದ್ದಿಮೈಸೂರು

ವೈದ್ಯರ ಹಲ್ಲೆ ಖಂಡಿಸಿ ನಗರ ವೈದ್ಯರಿಂದ ಇಂದು ಕರಾಳ ದಿನಾಚರಣೆ

ದೇಶಾದ್ಯಂತ ವೈದ್ಯರಿಂದ ಕರಾಳ ದಿನ : ಸೂಕ್ತ ಕಾನೂನು ಜಾರಿಗೆ ಒತ್ತಾಯ

ಮೈಸೂರು, ಜೂ.14 :  ಪಶ್ಚಿಮ ಬಂಗಾಳದ ಕೊಲ್ಕತಾದಲ್ಲಿನ ಎನ್.ಆರ್.ಎಸ್. ವೈದ್ಯಕೀಯ ಮಹಾ ವಿದ್ಯಾಲಯದಲ್ಲಿ ಕರ್ತವ್ಯ ನಿರತ ವೈದ್ಯರೊಬ್ಬರ ಮೇಲೆ ಹಲವರು ಹಲ್ಲೆ ಮಾಡಿ ಜೀವನ್ಮರಣದ ನಡುವೆ ಹೋರಾಡುವ ಪರಿಸ್ಥಿತಿಗೆ ತಳ್ಳಿದ ಘಟನೆಯನ್ನು ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾ ಶಾಖೆ ತೀವ್ರವಾಗಿ ಖಂಡಿಸುವುದಲ್ಲದೆ ಕೇಂದ್ರ ಶಾಖೆ ಸೂಚನೆ ಮೇರೆಗೆ ಕರಾಳ ದಿನ ಆಚರಿಸುತ್ತಿದೆ ಎಂದು ಶಾಖೆಯ ಅಧ್ಯಕ್ಷ ಡಾ.ಬಿ.ಎಸ್. ಪ್ರಕಾಶ್ ತಿಳಿಸಿದರು.

ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವೃದ್ಧರೊಬ್ಬರು ಚಿಕಿತ್ಸೆ ಪಡೆಯುವಾಗ ಮೃತಪಟ್ಟ ಘಟನೆ ಬಳಿಕ ಪ್ರತಿಭಟನೆ ನಡೆಸಿ ವಾಪಸಾದವರು ಸುಮಾರು ಅರ್ಧಗಂಟೆ ಬಳಿಕ ದೊಡ್ಡ ಗುಂಪು ಕಟ್ಟಿಕೊಂಡು ಬಂದು ಡಾ ಪರಿಬಹ ಮುಖರ್ಜಿ ಅವರ ಮೇಲೆ ಗಂಭೀರ ಹಲ್ಲೆ ಮಾಡಿದ್ದಾರೆ.

ಈ ಘಟನೆಗೆ ಯಾರದೋ ಕುಮ್ಮಕ್ಕು ಇರಬಹುದಾಗಿದ್ದು, ಇದೇ ವೇಳೆ ಪಶ್ಚಿಮ ಬಂಗಾಳ ಸಹಾ ಅಲ್ಲಿನ ವೈದ್ಯರ ವಿರುದ್ಧ ತಾಳಿರುವ ಧೋರಣೆ ಖಂಡನೀಯವಾಗಿದೆ. ಈ ನಿಟ್ಟಿನಲ್ಲಿ ಭಾರತೀಯ ವೈದ್ಯಕೀಯ ಸಂಘ ತೀವ್ರ ಆಘಾತ ಹಾಗೂ ಖಂಡನೆ ವ್ಯಕ್ತಪಡಿಸಿದ್ದು, ಒಂದು ವೇಳೆ ಅಲ್ಲಿನ ಸರ್ಕಾರ ಈಗ ಕರ್ತವ್ಯದ ವೇಳೆ ಸೂಕ್ತ ರಕ್ಷಣೆ ಬೇಕೆಂದು ಮುಷ್ಕರದ ಕಾರಣ ಬೀದಿಗಿಳಿದಿರುವ ವೈದ್ಯರನ್ನು ಕೆಲಸದಿಂದ ತೆಗೆದಲ್ಲಿ ದೇಶದ ಇತರೆ ಭಾಗಗಳ ಯಾವ ವೈದ್ಯರೂ ಸಹಾ ಆ ರಾಜ್ಯಕ್ಕೆ ಹೋಗಿ ಸೇವೆ ಸಲ್ಲಿಸುವುದಿಲ್ಲ ಎಂಬ ಎಚ್ಚರಿಕೆಯನ್ನು ಅಲ್ಲಿನ ಮುಖ್ಯಮಂತ್ರಿಗೆ ನೀಡಲಾಗಿದೆ ಎಂದರು.

ಜೊತೆಗೆ, ಕೇಂದ್ರ ಸಂಘದ ಸೂಚನೆ ಮೇರೆಗೆ ದೇಶಾದ್ಯಂತ ವೈದ್ಯರು ಕೋಲ್ಕತಾ ಹಲ್ಲೆ ಘಟನೆ ಖಂಡಿಸಿ ಶುಕ್ರವಾರ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದ್ದು, ಅದೇ ರೀತಿ ನಗರದಲ್ಲಿಯೂ ಎಲ್ಲ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ವೈದ್ಯರೂ ಸಹಾ ಕಪ್ಪುಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸುತ್ತಿದ್ದಾರೆಂದರು.

ಇದೇ ವೇಳೆ, ದೇಶದ ಎಲ್ಲ ವೈದ್ಯ ಸಮೂಹ ಪಶ್ಚಿಮ ಬಂಗಾಳದ ಮುಷ್ಕರ ನಿರತ ವೈದ್ಯರ ಪರ ಇದ್ದು, ಹಲ್ಲೆ ನಡೆಸಿದವರ ವಿರುದ್ಧ ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕು. ಈ ರೀತಿಯ ಘಟನೆ ಮರುಕಳಿಸದಂತ ನೋಡಿಕೊಳ್ಳಲು ದೇಶಾದ್ಯಂತ ಏಕರೂಪದ ಕಠಿಣ ಕಾನೂನು ಜಾರಿಗೆ ತಂದು ವೈದ್ಯರಿಗೆ ರಕ್ಷಣೆ ನೀಡಬೇಕೆಂದು ಆಗ್ರಹಿಸಿದರು.

ಜೊತೆಗೆ, ತಮ್ಮ ಶಾಖೆ ವತಿಯಿಂದ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಆಯುಕ್ತರ ಮೂಲಕ ಪ್ರಧಾನ ಮಂತ್ರಿ ಹಾಗೂ ಗೃಹ ಸಚಿವರಿಗೆ ತಮ್ಮ ಒತ್ತಾಯ ಕುರಿತಂತೆ ಮನವಿಪತ್ರ ಸಲ್ಲಿಸಲಾಗುತ್ತಿದೆ ಎಂದು ತಿಳಿಸಿದರು.

ಪದಾಧಿಕಾರಿಗಳಾದ ಡಾ.ಎಂ.ಎಸ್. ಜಯಂತ್, ಸುರೇಶ್ ರುದ್ರಪ್ಪ, ಡಾ. ಸುಜಾತ ಎಸ್. ರಾವ್, ಸಂಜಯ್ ಹಾಜರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: