ಪ್ರಮುಖ ಸುದ್ದಿ

ಕೊಡಗಿನ ಭೂಮಿಯನ್ನು ಕೊಡಗಿನವರಿಗೇ ಮಾರಾಟ ಮಾಡಿ : ಉದ್ಯಮ ಶೀಲತೆಗೆ ಆದ್ಯತೆ ನೀಡಿ : ಸಂಸದ ಪ್ರತಾಪ್ ಸಿಂಹ ಸಲಹೆ

ರಾಜ್ಯ(ಮಡಿಕೇರಿ) ಜೂ.14 :- ಕೊಡಗಿನ ಭೂಮಿ, ಸಂಸ್ಕೃತಿ, ಆಚಾರ ವಿಚಾರದ ಮೇಲೆ ಹೊರ ರಾಜ್ಯದವರು ಹಿಡಿತ ಸಾಧಿಸಬಾರದೆಂದಾದರೆ ಕೊಡಗಿನ ಮೂಲ ನಿವಾಸಿಗಳು ತಮ್ಮ ಭೂಮಿಯನ್ನು ಹೊರ ರಾಜ್ಯದವರಿಗೆ ಮಾರಾಟ ಮಾಡದೆ, ತಮ್ಮವರಿಗೇ ಮಾರಾಟ ಮಾಡುವ ಕಟು ನಿರ್ಧಾರವನ್ನು ಕೈಗೊಳ್ಳಬೇಕು ಮತ್ತು ಸ್ಥಳೀಯ ಯುವ ಸಮೂಹ ಜಿಲ್ಲೆಯಲ್ಲೇ ಉದ್ಯಮ ಶೀಲತೆಗೆ ಆದ್ಯತೆ ನೀಡಬೇಕು ಎಂದು ಕೊಡಗು, ಮೈಸೂರು ಕ್ಷೇತ್ರದ ಸಂಸದ ಪ್ರತಾಪ ಸಿಂಹ ಕರೆ ನೀಡಿದ್ದಾರೆ.
ಕೊಡಗು ಪ್ರೆಸ್‍ಕ್ಲಬ್ ವತಿಯಿಂದ ನಗರದ ಪತ್ರಿಕಾ ಭವನ ಸಭಾಂಗಣದಲ್ಲಿ ನಡೆದ ಸಂಸದರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸುತ್ತಾ, ಜಿಲ್ಲೆಯ ಅಭಿವೃದ್ಧಿಗೆ ಪೂರಕವಾದ ಭರವಸೆಗಳನ್ನು ನೀಡಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಪ್ರತಾಪಸಿಂಹ, ಹೊರ ರಾಜ್ಯದ ಉದ್ಯಮಿಗಳಿಂದ ಕೊಡಗಿನ ಪರಿಸರ, ಭೂಮಿ, ಸಂಸ್ಕೃತಿ ಹಾಳಾಗುವುದನ್ನು ತಡೆಯಲು ಕೇವಲ ಜನಪ್ರತಿನಿಧಿಗಳು ಹಾಗೂ ಕಾನೂನಿನಿಂದ ಮಾತ್ರ ಸಾಧ್ಯವಿಲ್ಲ. ಬದಲಿಗೆ ಜಿಲ್ಲೆಯ ಮೂಲ ನಿವಾಸಿಗಳು ಮೊದಲು ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ಅಭಿಪ್ರಾಯಪಟ್ಟರು. ಕಾಫಿ ಫಸಲಿನ ಕೊಯ್ಲಿನಿಂದ ಆರಂಭಗೊಂಡು ಪ್ರತಿಯೊಂದು ವ್ಯವಹಾರಕ್ಕೂ ಕೊಡಗಿನ ಜನ ಬೇರೆಯವರ ಮೇಲೆ ಅವಲಂಬಿತರಾಗುತ್ತಿದ್ದು, ಯುವ ಸಮೂಹ ಏಳು ಎಂಟು ಸಾವಿರ ರೂಪಾಯಿ ಸಂಬಳಕ್ಕಾಗಿ ಹೊರ ಜಿಲ್ಲೆ, ರಾಜ್ಯದಲ್ಲಿ ದುಡಿಯುತ್ತಿದ್ದಾರೆ. ಹೀಗೆ ಮಾಡುವುದರಿಂದಲೇ ಹೊರಗಿನವರು ಜಿಲ್ಲೆಯ ಮೇಲೆ ಹಿಡಿತ ಸಾಧಿಸುತ್ತಿದ್ದಾರೆ ಎಂದು ಇಂದಿನ ಜಮ್ಮು, ಕಾಶ್ಮೀರದ ಪರಿಸ್ಥಿತಿಯನ್ನು ಉಲ್ಲೇಖಿಸಿ ಅವರು ಎಚ್ಚರಿಕೆಯ ಮಾತುಗಳನ್ನಾಡಿದರು.
ಕೊಡಗಿನಲ್ಲಿ ಒಗ್ಗಟ್ಟಿನ ಕೊರತೆ ಇರುವುದರಿಂದಲೆ ಈ ರೀತಿಯ ಹಿನ್ನಡೆ ಉಂಟಾಗುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.
ಕೊಡಗಿನ ಯುವ ಸಮೂಹ ತವರು ಜಿಲ್ಲೆಯಲ್ಲೆ ಉದ್ಯಮಗಳನ್ನು ಆರಂಭಿಸಲು ಮುಂದಾಗಬೇಕು. ಇದಕ್ಕಾಗಿ ಕೇಂದ್ರ ಸರ್ಕಾರದ ಕಡೆಯಿಂದ ಯಾವುದೇ ನೆರವು ಅಥವಾ ಸಾಲದ ಸಹಕಾರವನ್ನು ನೀಡಲು ಸಿದ್ಧವಿರುವುದಾಗಿ ಪ್ರತಾಪ್‍ಸಿಂಹ ಭರವಸೆ ನೀಡಿದರು. ಸಾಲಮೇಳವನ್ನು ಆಯೋಜಿಸಿ ವ್ಯಾಪಾರ, ಉದ್ಯಮಶೀಲತೆಗೆ ಪ್ರೋತ್ಸಾಹ ನೀಡುವುದಾಗಿ ಹೇಳಿದರು.
ಕೇರಳದವರು ಹೆಚ್ಚು ಹಣ ನೀಡುತ್ತಾರೆ ಎಂದು ಕೊಡಗಿನ ಮಂದಿ ಕೇರಳದವರಿಗೆ ಭೂಮಿಯನ್ನು ಮಾರಾಟ ಮಾಡುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲವೆಂದು ಅಭಿಪ್ರಾಯಪಟ್ಟ ಅವರು, ಜಿಲ್ಲೆಯ ಮೂಲ ನಿವಾಸಿಗಳೆ ಒಂದು ಒಡಂಬಡಿಕೆ ಮಾಡಿಕೊಂಡು ಕೊಡಗಿನ ಭೂಮಿಯನ್ನು ಕೊಡಗಿನವರಿಗೇ ಮಾರಾಟ ಮಾಡುವ ನಿರ್ಧಾರಕ್ಕೆ ಬರಬೇಕು. ಹಾಗಾದಾಗ ಮಾತ್ರ ಕೊಡಗಿನೊಂದಿಗೆ ಪರಿಸರವೂ ಉಳಿಯುತ್ತದೆ ಎಂದು ತಿಳಿಸಿದರು.
ಹೊರ ರಾಜ್ಯದವರು ಬಂದು ಇಲ್ಲಿ ಐಶಾರಾಮಿ ರೆಸಾರ್ಟ್‍ಗಳನ್ನು ನಿರ್ಮಿಸುತ್ತಾರೆ. ಆದರೆ, ಇಲ್ಲೇ ಇರುವ ಮಂದಿ ಉದ್ಯೋಗವನ್ನು ಅರಸಿಕೊಂಡು ಹೊರ ಪ್ರದೇಶಗಳಿಗೆ ತೆರಳುತ್ತಾರೆ. ಸರ್ಕಾರ ಸಾಕಷ್ಟು ಆರ್ಥಿಕ ನೆರವನ್ನು ನೀಡಲು ಸಿದ್ಧ ಇರುವಾಗ ಸ್ಥಳೀಯರೆ ಯಾಕೆ ರೆಸಾರ್ಟ್ ಸೇರಿದಂತೆ ಇನ್ನಿತರ ವ್ಯಾಪಾರ ವಹಿವಾಟುಗಳನ್ನು ಆರಂಭಿಸಬಾರದು ಎಂದು ಪ್ರತಾಪಸಿಂಹ ಪ್ರಶ್ನಿಸಿದರು. ಜಿಲ್ಲೆಯಲ್ಲಿ ತನ್ನದೇ ಬ್ರಾಂಡ್‍ನೊಂದಿಗೆ ವ್ಯಾಪಾರ ವಹಿವಾಟು ಮತ್ತು ಉದ್ಯಮಗಳನ್ನು ಆರಂಭಿಸುವುದಾದರೆ ಅಗತ್ಯ ಸಹಕಾರ ನೀಡುವುದಾಗಿ ಪ್ರತಾಪ್‍ಸಿಂಹ ಭರವಸೆ ನೀಡಿದರು.
ಜಮ್ಮಾಬಾಣೆ ಹಕ್ಕು ಇಲ್ಲದೆ ಇದ್ದಾಗ ಭೂಮಿ ಮಾರಾಟ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಆದರೆ, ಹೋರಾಟದ ಮೂಲಕ ಹಕ್ಕನ್ನು ಪಡೆದುಕೊಂಡು ಇದೀಗ ಭೂಮಿಯನ್ನು ಪರರಿಗೆ ಮಾರಾಟ ಮಾಡುತ್ತಿರುವುದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: