ಕರ್ನಾಟಕಪ್ರಮುಖ ಸುದ್ದಿ

ಅಕೇಶಿಯಾ, ನೀಲಗಿರಿ ಬೆಳೆಯಲು ಅವಕಾಶವಿಲ್ಲ; ಲಾಬಿ ಹಿಂದೆ ದೊಡ್ಡ ಜಾಲವಿದೆ: ಸರ್ಕಾರ

ಬೆಂಗಳೂರು : ರಾಜ್ಯದಲ್ಲಿ ಅಕೇಶಿಯಾ ಮತ್ತು ನೀಲಗಿರಿ ಬೆಳೆಯುವುದಕ್ಕೆ ಅವಕಾಶವಿಲ್ಲ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ.

ವಿಧಾನಸಭೆಯಲ್ಲಿ ಶಾಸಕ ಪುಟ್ಟಣ್ಣಯ್ಯ ಅವರ ಗಮನ ಸೆಳೆಯುವ ಸೂಚನೆಗೆ ಸಚಿವ ರಮಾನಾಥ ರೈ ಗೈರುಹಾಜರಿಯಲ್ಲಿ ಸರ್ಕಾರದ ಪರವಾಗಿ ಉತ್ತರಿಸಿದ ಸಚಿವ ರಮೇಶ್ ಕುಮಾರ್ ಅವರು, ರಾಜ್ಯದಲ್ಲಿ ಅಕೇಶಿಯಾ ಮತ್ತು ನೀಲಗಿರಿ ಬೆಳೆಯುವುದನ್ನು ನಿಷೇಧಿಸಿ ಮಸೂದೆ ಅಂಗೀಕರಿಸಲಾಗಿದೆ. ಆದರೆ ಅರಣ್ಯ ಇಲಾಖೆ ಇತ್ತೀಚೆಗೆ ಹೊರಡಿಸಿರುವ ಆದೇಶದಲ್ಲಿ ಬೆಳೆಯಲು ಅವಕಾಶ ನೀಡಲಾಗಿದೆ. ಇದು ಅಚಾತುರ್ಯದಿಂದ ಆಗಿದ್ದು ತಕ್ಷಣ ಸರಿಪಡಿಸುವುದಾಗಿ ಭರವಸೆ ನೀಡಿದರು.

‘ಆಗಿರುವ ತಪ್ಪನ್ನು ಇನ್ನೆರಡು ದಿನಗಳಲ್ಲಿ ಸರಿಪಡಿಸುತ್ತೇವೆ. ಕೆಲವು ಸಂಗತಿಗಳನ್ನು ಇಲ್ಲಿ  ಹೇಳಿಕೊಳ್ಳಲು ಸಾಧ್ಯವಿಲ್ಲ’ ಎಂದು ಸ್ವಯಂ ಪ್ರೇರಣೆಯಿಂದ ಪ್ರತಿಕ್ರಿಯಿಸಿದ  ರಮೇಶ್‌ ಕುಮಾರ್‌, ನಿಷೇಧ ಇದ್ದರೂ ಆದೇಶ ಹೊರಡಿಸಿರುವುದು ತಿಳಿದು ನನಗೆ ಆಶ್ಚರ್ಯವಾಗಿದೆ. ಅಕೇಶಿಯಾ, ನೀಲಗಿರಿ ಪರವಾಗಿ ದೊಡ್ಡ  ಜಾಲವೇ ಇದೆ. ರಾಜ್ಯದಲ್ಲಿ ಭೀಕರ ಬರಕ್ಕೆ ಇವರ ಕಾಣಿಕೆ ಇದೆ ಎಂದರು.

ಹಿಂದಿನ ಅಧಿವೇಶನದಲ್ಲಿ ಇವೆರಡೂ ಸಸಿಗಳನ್ನು ಬೆಳೆಯುವುದಕ್ಕೆ ನಿಷೇಧಿಸುವ ಮಸೂದೆ ಅಂಗೀಕರಿಸಲಾಗಿತ್ತು. ಆದರೂ ಕೆಲವು ಕಡೆ ಬೆಳೆಯಲು ಅವಕಾಶ ನೀಡಿದ್ದು  ಹೇಗೆ ಎಂದು ಪುಟ್ಟಣ್ಣಯ್ಯ ಪ್ರಶ್ನಿಸಿದರು. ಇದಕ್ಕೆ ಬಿಜೆಪಿಯ ಬೋಪಣ್ಣ, ವಿಶ್ವೇಶ್ವರ ಹೆಗಡೆ ಕಾಗೇರಿ, ಜೀವರಾಜ್‌  ಧ್ವನಿಗೂಡಿಸಿದರು.

Leave a Reply

comments

Related Articles

error: