ಪ್ರಮುಖ ಸುದ್ದಿ

ರಸ್ತೆ, ರೈಲು ಸಂಪರ್ಕದಿಂದ ಮಾತ್ರ ಅಭಿವೃದ್ಧಿ ಸಾಧ್ಯ : ಸಂಸದ ಪ್ರತಾಪ್ ಸಿಂಹ ಅಭಿಮತ

ರಾಜ್ಯ( ಮಡಿಕೇರಿ) ಜೂ.14 :-ಕೊಡಗಿನ ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ಚತುಷ್ಪಥ ರಸ್ತೆಗಳು ನಿರ್ಮಾಣಗೊಳ್ಳಲಿವೆ. ವಿಶ್ವ ವಿಖ್ಯಾತ ಪ್ರವಾಸಿ ತಾಣ ಮೈಸೂರು ಗಮನ ಸೆಳೆದಿದ್ದರೆ, ಕೊಡಗು ಭಕ್ತಿ ಮತ್ತು ಬದುಕಿಗೆ ಹತ್ತಿರವಾದ ಕಾವೇರಿಯ ನಾಡಾಗಿದೆ. ಇದು ಹೆಚ್ಚು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಅಭ್ಯುದಯವನ್ನು ಕಾಣಬೇಕಾದರೆ ರಸ್ತೆ ಸಂಪರ್ಕ ಪ್ರಮುಖವಾಗಿ ಆಗಬೇಕಾಗಿದೆ. ಇದೇ ಕಾರಣಕ್ಕೆ ಈ ಎರಡು ಜಿಲ್ಲೆಗಳಲ್ಲಿ ರೈಲು ಮತ್ತು ರಸ್ತೆ ಸಂಪರ್ಕಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಯಾರಿಗೂ ತೊಂದರೆಯಾಗದ ರೀತಿಯಲ್ಲಿ ಚತುಷ್ಪಥ ರಸ್ತೆಗಳು ನಿರ್ಮಾಣವಾಗಲಿದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.
ಭೂ ಸ್ವಾಧೀನ ಪ್ರಕ್ರಿಯೆ ಸಂದರ್ಭ ಮೈಸೂರು ವಿಭಾಗದಲ್ಲಿ ಯಾರೂ ಕೂಡ ವಿರೋಧ ವ್ಯಕ್ತಪಡಿಸಿಲ್ಲ. ಕಾರಣ ಕೇಂದ್ರ ಸರ್ಕಾರ ಭೂಮಿಗಾಗಿ ಅತೀ ಹೆಚ್ಚು ಪರಿಹಾರವನ್ನು ನೀಡುತ್ತಿದೆ. ಒಂದು ಏಕರೆಗೆ 1.50 ಕೋಟಿ ರೂ.ಪರಿಹಾರ ನೀಡಿದ ಉದಾಹರಣೆಯೂ ಇದೆ ಎಂದ ಅವರು, ಕೊಡಗಿನಲ್ಲಿ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಯಾವುದೇ ವಿರೋಧ ವ್ಯಕ್ತವಾಗುವುದಿಲ್ಲವೆನ್ನುವ ವಿಶ್ವಾಸ ವ್ಯಕ್ತಪಡಿಸಿದರು.
ಕುಶಾಲನಗರದವರೆಗೆ ರೈಲ್ವೆ ಸಂಪರ್ಕಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರದಲ್ಲಿ ಇದ್ದಾಗಿನಿಂದಲೂ ಶೇ.50 ರಷ್ಟು ರಾಜ್ಯ ಸರ್ಕಾರದ ಅನುದಾನ ಮತ್ತು ಭೂಮಿ ನೀಡುವ ವಿಚಾರದಲ್ಲಿ ನಿರಾಸಕ್ತಿ ತೋರಲಾಗಿತ್ತು. ಕಳೆದ ಸರ್ಕಾರದಲ್ಲಿ ಕೊಡಗು ಉಸ್ತುವಾರಿ ಸಚಿವರಾಗಿದ್ದ ಸೀತಾರಾಮ್ ಅವರು ರೈಲ್ವೆ ಯೋಜನೆ ಬೇಡವೆಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದರು. ಆದರೆ, ರೈಲು ಮಾರ್ಗ ಆಗಲೇ ಬೇಕೆಂದು ತಾವು ಒತ್ತಡ ಹೇರಿ ಇದೀಗ 1,854 ಕೋಟಿ ರೂ. ವೆಚ್ಚದ ಯೋಜನೆಗೆ ಅನುಮೋದನೆ ದೊರಕಿದೆ. ಈ ಯೋಜನೆಯ ಅನುಷ್ಟಾನ ಸ್ವಲ್ಪ ವಿಳಂಬವಾಗಬಹುದೆಂದು ತಿಳಿಸಿದರು.
ಮೈಸೂರು, ಕೊಡಗು ಸೇರಿದಂತೆ ಆರು ನಗರಗಳಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಯೋಜನೆಗೆ 7,550 ಕೋಟಿ ರೂ.ಗಳನ್ನು ಕೇಂದ್ರ್ರ ಸರ್ಕಾರ ಖರ್ಚು ಮಾಡುತ್ತಿದ್ದು, ಏಳು ಪೈಸೆಯನ್ನು ಕೂಡ ರಾಜ್ಯ ಸರ್ಕಾರದಿಂದ ಪಡೆಯುತ್ತಿಲ್ಲ. ಈ ಮಹತ್ವಾಕಾಂಕ್ಷಿ ಯೋಜನೆ 2021ರ ದಸರಾ ವೇಳೆಗೆ ಸಂಪೂರ್ಣ ಗೊಳ್ಳಲಿದೆ ಎಂದು ಪ್ರತಾಪಸಿಂಹ ಹೇಳಿದರು.
ಜಿಲ್ಲೆಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಅಗತ್ಯವಿದೆ ಆದರೆ, ಈಗಾಗಲೆ ಮಡಿಕೇರಿಯಲ್ಲಿ ಮೆಡಿಕಲ್ ಕಾಲೇಜ್ ಸ್ಥಾಪನೆಯಾಗಿದ್ದು, ಅಲ್ಲಿನ ವಿದ್ಯಾರ್ಥಿಗಳು ಜಿಲ್ಲಾ ಆಸ್ಪತ್ರೆಯಲ್ಲೆ ತರಬೇತಿ ಪಡೆಯುತ್ತಾರೆ. ಪರಿಸ್ಥಿತಿ ಹೀಗಿರುವಾಗ ರಾಜ್ಯ ಸರ್ಕಾರ ಜಿಲ್ಲಾ ಆಸ್ಪತ್ರೆಯ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸಬೇಕು ಮತ್ತು ವೈದ್ಯರುಗಳನ್ನು ನೇಮಕ ಮಾಡಬೇಕು. ಈ ಕಾರ್ಯ ಸಮರ್ಪಕವಾಗಿ ನಡೆಯುತ್ತಿಲ್ಲವೆಂದು ಬೇಸರ ವ್ಯಕ್ತಪಡಿಸಿದ ಪ್ರತಾಪಸಿಂಹ, ಮಡಿಕೇರಿ ಅಥವಾ ಕುಶಾಲನಗರದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಕಳೆದ ಮಳೆಗಾಲದಲ್ಲಿ ಪ್ರಾಕೃತಿಕ ವಿಕೋಪದಿಂದ ಅನಾಹುತಗಳು ಸಂಭವಿಸಿದೆಯೇ ಹೊರತು ಯಾವುದೇ ಹೆದ್ದಾರಿ ನಿರ್ಮಾಣದಿಂದಲ್ಲ. ಹಾರಂಗಿ ಜಲಾಶಯದಿಂದ ಒಂದೇ ಬಾರಿಗೆ 1 ಲಕ್ಷ ಕ್ಯೂಸೆಕ್ ನೀರನ್ನು ಹೊರ ಬಿಟ್ಟ ಕಾರಣದಿಂದ ಕೆಲವು ಕಡೆ ಜಲ ಸ್ಫೋಟ ಉಂಟಾಗಿದೆ ಎಂದು ಸ್ಪಷ್ಟಪಡಿಸಿದರು.
ಲೋಪಗಳನ್ನು ಸರಿಪಡಿಸಿಕೊಳ್ಳುವೆ
ಕಳೆದ ಐದು ವರ್ಷಗಳ ಕಾಲ ಸಂಸದನಾಗಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಮೂಲಕ ಕೇಂದ್ರ ಸರ್ಕಾರದ ಅನುದಾನವನ್ನು ಸಮರ್ಪಕವಾಗಿ ಬಳಸಿದ ರಾಷ್ಟ್ರದ ಸಂಸದರುಗಳಲ್ಲಿ 28ನೇ ಸ್ಥಾನದಲ್ಲಿ ತಾನಿರುವುದಾಗಿ ತಿಳಿಸಿದ ಪ್ರತಾಪ ಸಿಂಹ, ಹಿಂದಿನ ಐದು ವರ್ಷಗಳಲ್ಲಿ ಆಗಿರುವ ಲೋಪಗಳನ್ನು ಈಗ ಸರಿಪಡಿಸಿಕೊಳ್ಳುವುದಾಗಿ ಭರವಸೆ ನೀಡಿದರು. ಕೊಡಗಿನಲ್ಲಿ ಬಿಜೆಪಿ ಶಾಸಕರುಗಳು ಇರುವುದರಿಂದ ಮತ್ತು ಸ್ಥಳೀಯ ಸಂಸ್ಥೆಗಳಲ್ಲೆಲ್ಲ ಬಿಜೆಪಿಯೇ ಅಧಿಕಾರದಲ್ಲಿ ಇದ್ದ ಕಾರಣದಿಂದ ನಾನು ಮೈಸೂರಿನ ಅಭಿವೃದ್ಧಿಯೆಡೆಗೆ ಹೆಚ್ಚು ಗಮನ ಹರಿಸಬೇಕಾಯಿತು. ಆದರೆ, ಎಷ್ಟೇ ಅಭಿವೃದ್ಧಿ ಕಾರ್ಯಗಳನ್ನು ಮಾಡಿದರು ಗ್ರಾಮೀಣ ಜನರ ಸಂಪರ್ಕಕ್ಕೆ ದೊರೆತಿಲ್ಲ ಎನ್ನುವ ಟೀಕೆ ಇದೆ. ಈ ತಪ್ಪನ್ನು ಸರಿಪಡಿಸಿಕೊಳ್ಳುತ್ತೇನೆ ಎಂದ ಪ್ರತಾಪಸಿಂಹ, ಕೊಡಗಿನಲ್ಲಿ ಪ್ರತಿ ತಿಂಗಳಿಗೆ ಎರಡು ಬಾರಿ ಸಾರ್ವಜನಿಕರನ್ನು ಭೇಟಿಯಾಗುವುದಲ್ಲದೆ, ಆರು ತಿಂಗಳಿಗೊಮ್ಮೆ ಗ್ರಾಮ ಸಭೆಗಳಲ್ಲಿ ಪಾಲ್ಗೊಳ್ಳುವುದಾಗಿ ಭರವಸೆ ನೀಡಿದರು.
ಮಡಿಕೇರಿ ನಗರಸಭೆ ವ್ಯಾಪ್ತಿಯಲ್ಲಿ ಯುಜಿಡಿ ಯೋಜನೆಯಿಂದ ಆಗಿರುವ ಅವ್ಯವಸ್ಥೆಗಳ ಬಗ್ಗೆ ಗಮನ ಸೆಳೆದಾಗ, ಪ್ರತಿಕ್ರಿಯೆ ನೀಡಿದ ಸಂಸದ ಪ್ರತಾಪಸಿಂಹ ಇ-ಟೆಂಡರ್ ಒಳಗೊಂಡಂತೆ ಎಲ್ಲಾ ಟೆಂಡರ್ ಪ್ರಕ್ರಿಯೆಗಳು ಮೋಸದಿಂದಲೆ ಕೂಡಿದೆ ಎಂದು ಬೇಸರ ವ್ಯಕ್ತಪಡಿಸಿದರು. ರಾಜಕಾರಣಿಗಳು ಹಾಗೂ ಗುತ್ತಿಗೆದಾರರ ನಡುವಿನ ಅಪವಿತ್ರ ಮೈತ್ರಿಯೇ ಇದಕ್ಕೆ ಕಾರಣವೆಂದು ಆರೋಪಿಸಿದರು. ಇನ್ನು ಮುಂದೆ ಈ ರೀತಿಯ ತಪ್ಪುಗಳು ನಡೆಯದಂತೆ ನಿಗಾವಹಿಸುವುದಾಗಿ ತಿಳಿಸಿದರು.
ಕಮಿಷನ್ ರಾಜಕಾರಣಿಯಲ್ಲ
ನಾನು ಕಮಿಷನ್‍ಗೋಸ್ಕರ ರಾಜಕಾರಣಿಯಾಗಿಲ್ಲ, ಇಲ್ಲಿಯವರೆಗೆ ಐದು ಪೈಸೆ ಕಮಿಷನ್‍ನ್ನು ಪಡೆದಿಲ್ಲ. ಜನರು ನನ್ನನ್ನು ಕೆಲಸ ಮಾಡುವುದಕ್ಕಾಗಿ ಆಯ್ಕೆ ಮಾಡಿದ್ದಾರೆ. ಸಂಸದನಾಗಿ ಪಾರದರ್ಶಕ ಮತ್ತು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತೇನೆಯೇ ಹೊರತು ಯಾವುದೇ ಆಮಿಷ ಅಥವಾ ಮಂತ್ರಿ ಸ್ಥಾನಕ್ಕಾಗಿ ಆಸಕ್ತಿ ತೋರುವುದಿಲ್ಲ. ಪ್ರಧಾನಿ ಮೋದಿ ಅವರ ಕೈ ಕೆಳಗೆ ಕೆಲಸ ಮಾಡುವುದೇ ದೊಡ್ಡ ಗೌರವವೆಂದು ಸ್ಪಷ್ಟಪಡಿಸಿದರು.
ಮೈಸೂರು ಮತ್ತು ಕೊಡಗಿನ ಜನ ಕಳೆದ ಬಾರಿಗಿಂತ ಈ ಬಾರಿ ದೊಡ್ಡ ಲೀಡ್‍ನಲ್ಲಿ ನನ್ನನ್ನು ಗೆಲ್ಲಿಸಿದ್ದಾರೆ. ಇದಕ್ಕೆ ಮೋದಿ ಅಲೆ ಕಾರಣವೆಂದು ಒಪ್ಪಿಕೊಂಡ ಅವರು, ಇದರೊಂದಿಗೆ ನಾನು ಮಾಡಿರುವ ಅಭಿವೃದ್ಧಿ ಕೆಲಸಗಳ ಪಾಲೂ ಇದೆಯೆಂದು ಸಮರ್ಥಿಸಿಕೊಂಡರು. ನನ್ನಲ್ಲಿ ಏನೋ ಒಂದು ಯೋಗ್ಯತೆ ಇದೆ ಎನ್ನುವ ಕಾರಣಕ್ಕಾಗಿ ನನಗೆ ಟಿಕೆಟ್ ನೀಡಿದ್ದರು. ಈ ಎರಡೂ ಕಾರಣಗಳು ನನ್ನ ಗೆಲುವಿಗೆ ಕಾರಣವಾಗಿದೆ ಎಂದು ಪ್ರತಾಪ ಸಿಂಹ ಅಭಿಪ್ರಾಯಪಟ್ಟರು.
ಕಳೆದ ಐದು ವರ್ಷಗಳ ಕಾಲ ನಾನು ಗ್ರಾಮ ಪಂಚಾಯ್ತಿ ಮಟ್ಟದ ಅಭಿವೃದ್ಧಿ ಚಟುವಟಿಕೆಗಳಲ್ಲಿ ಸಕ್ರಿಯನಾಗಿರಲಿಲ್ಲ. ಈ ಬಾರಿ ಗ್ರಾಮ ಪಂಚಾಯ್ತಿ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿನ ನ್ಯೂನತೆಗಳತ್ತ ಆಸಕ್ತಿ ವಹಿಸಿ ಅವುಗಳ ಬಗೆಹರಿಕೆಯ ನಿಟ್ಟಿನಲ್ಲಿ ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಭ್ರಷ್ಟಾಚಾರ ನಿರ್ಮೂಲನೆಗಾಗಿ ಪ್ರಧಾನಿ ಮೋದಿ ಅವರು ಎತ್ತರದ ಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ತಳ ಮಟ್ಟದ ಭ್ರಷ್ಟ ವ್ಯವಸ್ಥೆಯನ್ನು ಸ್ವಚ್ಛ ಮಾಡಲು ಸಂಸದನಾಗಿ ನಾನು ಪ್ರಯತ್ನಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಡಾ. ಕಸ್ತೂರಿ ರಂಗನ್ ವರದಿಯ ವಿಚಾರದಲ್ಲಿ ಆ ಸಮಸ್ಯೆಯ ಭಾರವನ್ನು ನನ್ನ ಹೆಗಲಿಗೆ ಬಿಡಿ ಎಂದು ಕಳೆದ ಬಾರಿ ಹೇಳಿದ್ದೆ. ನಾನು ನೀಡಿದ ಮಾತಿನಂತೆ ಈ ವರದಿಯನ್ನು ಆಧರಿಸಿ ಯಾರನ್ನೂ ಒಕ್ಕಲೆಬ್ಬಿಸುವ ಕಾರ್ಯ ನಡೆದಿಲ್ಲ. ಆಕ್ಷೇಪ ವ್ಯಕ್ರಪಡಿಸಿ ರಾಜ್ಯ ಸರ್ಕಾರ ನೀಡಿರುವ ವರದಿ ಅವೈಜ್ಞಾನಿಕವಾಗಿದೆ. ಈ ಹಿನ್ನೆಲೆಯಲ್ಲಿ ವರದಿ ಜಾರಿಯಾಗುವ ಪ್ರದೇಶಗಳಲ್ಲಿ ಮರು ಸರ್ವೇ ನಡೆಸಿ ವಿಸ್ತೃತ ವರದಿಯನ್ನು ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ತಿಳಿಸಲಾಗಿದೆ ಎಂದರು.
ಕಾಡಾನೆ ಹಾವಳಿ ತಡೆಗೆ ಆನೆ ಕಂದಕ ಮತ್ತು ರೈಲ್ವೆ ಹಳಿಗಳನ್ನು ಅಳವಡಿಸುವುದೊಂದೇ ಪರಿಹಾರವೆಂದು ಅಭಿಪ್ರಾಯಪಟ್ಟ ಪ್ರತಾಪಸಿಂಹ, ಬಿಎಸ್‍ಎನ್‍ಎಲ್ ಸೇವೆಯ ಅವ್ಯವಸ್ಥೆ ಬಗ್ಗೆ ಅಸಹಾಯಕತೆ ವ್ಯಕ್ತಪಡಿಸಿದರು.(ಕೆಸಿಐ,ಎಸ್.ಎಚ್)

Leave a Reply

comments

Related Articles

error: