ಪ್ರಮುಖ ಸುದ್ದಿ

ಬುಡಕಟ್ಟು ಸ್ಥಾನಮಾನಕ್ಕಾಗಿ ಆಗ್ರಹ : ಸಿಎನ್‍ಸಿ ಧರಣಿ ಸತ್ಯಾಗ್ರಹ

ರಾಜ್ಯ(ಮಡಿಕೇರಿ) ಜೂ.15 :-ಕೊಡವ ಬುಡಕಟ್ಟು ಕುಲದ ಪ್ರಧಾನ ಹಕ್ಕೊತ್ತಾಯಗಳ ಬಗ್ಗೆ ಎರಡನೇ ಅವಧಿಗೆ ಅಧಿಕಾರಕ್ಕೆ ಬಂದಿರುವ ನೂತನ ಎನ್‍ಡಿಎ ಸರ್ಕಾರ ಗಮನಹರಿಸಬೇಕು ಮತ್ತು ಪ್ರಮುಖ ಮೂರು ಬೇಡಿಕೆಗಳನ್ನು ಈಡೇರಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಜಿಲ್ಲಾಧಿಕಾರಿಗಳ ಕಛೇರಿ ಎದುರು ಶಾಂತಿಯುತ ಧರಣಿ ಸತ್ಯಾಗ್ರಹ ನಡೆಸಿತು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಮಾತನಾಡಿ ಅತ್ಯಂತ ಸಣ್ಣ ಜನಾಂಗವಾಗಿರುವ ಕೊಡವ ಬುಡಕಟ್ಟು ಕುಲಕ್ಕೆ ಬುಡಕಟ್ಟು ಸ್ಥಾನಮಾನ ನೀಡುವ ಹಕ್ಕಿಗೆ ಪೂರಕವಾದ ಅಂಶಗಳನ್ನು ಸಂವಿಧಾನದಲ್ಲೆ ಉಲ್ಲೇಖಿಸಲಾಗಿದೆ. ಈ ಹಕ್ಕು ಕೊಡವರ ಪಾಲಾಗಲು ಜನಪ್ರತಿನಿಧಿಗಳು ತಮ್ಮ ಜವಾಬ್ದಾರಿಯನ್ನು ನಿಭಾಯಿಸಬೇಕಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ನೂತನ ಕೇಂದ್ರ ಸರ್ಕಾರ ಬೇಡಿಕೆಯನ್ನು ಈಡೇರಿಸಬೇಕೆಂದು ಮನವಿ ಮಾಡಿದರು.
ಅಸ್ಸಾಂ, ಮೇಘಾಲಯ, ತ್ರಿಪುರ, ಮಿಜೋರಾಂ ರಾಜ್ಯಗಳಲ್ಲಿರುವ ಸಣ್ಣ ಜನಾಂಗಗಳಿಗೆ ಅನುಕೂಲವಾಗುವ ರೀತಿಯಲ್ಲಿ ವಿಶೇಷ ಶಾಸನ ರಚಿಸಲು ಸಂವಿಧಾನದ 280 ಮತ್ತು 6ನೇ ಷೆಡ್ಯೂಲ್‍ಗೆ ತಿದ್ದುಪಡಿ ಮಸೂದೆ ತಯಾರಿಸಿದ್ದು, ಎನ್‍ಡಿಎ ಸರ್ಕಾರ ಈ ಹಿಂದೆ ಕ್ಯಾಬಿನೆಟ್ ನಿರ್ಧಾರ ಕೈಗೊಂಡಿದೆ. ಇದು ಸಧ್ಯದಲ್ಲಿಯೇ ಶಾಸನವಾಗಿ ಮಾರ್ಪಡಲಿದ್ದು, ಇದೇ ಮಾದರಿಯಲ್ಲಿ ತುರ್ತಾಗಿ ಕೊಡವರನ್ನು ಬುಡಕಟ್ಟು ಜನಾಂಗವೆಂದು ಘೋಷಿಸಲು ಶಾಸನ ರಚಿಸಬೇಕೆಂದು ನಾಚಪ್ಪ ಒತ್ತಾಯಿಸಿದರು.
ಕೊಡವ ಭೂ ರಾಜಕೀಯ ಆಶೋತ್ತರವಾದ ಸ್ವಯಂ ನಿರ್ಣಯ ಹಕ್ಕಿನ ಕೊಡವ ಲ್ಯಾಂಡ್ ಸ್ವಾಯತ್ತತೆ ನೀಡುವುದು, ಕೊಡವ ಬುಡಕಟ್ಟು ಕುಲವನ್ನು ಸಂವಿಧಾನದ ವಿಧಿ 340/342 ವಿಧಿ ಪ್ರಕಾರ ಷೆಡ್ಯೂಲ್ ಲಿಸ್ಟ್‍ಗೆ ಸೇರ್ಪಡೆಗೊಳಿಸಿ ರಾಜ್ಯಾಂಗ ಖಾತರಿ ಪಡಿಸುವುದು ಮತ್ತು ಕೊಡವ ಭಾಷೆಯನ್ನು ಸಂವಿಧಾನದ 8ನೇ ಷೆಡ್ಯೂಲ್‍ಗೆ ಸೇರಿಸಬೇಕೆಂದು ಒತ್ತಾಯಿಸಿದರು.
ಕಲಿಯಂಡ ಪ್ರಕಾಶ್, ಬಾಚರಣಿಯಂಡ ಚಿಪ್ಪಣ್ಣ, ಬೊಪ್ಪಂಡ ಬೊಳ್ಳಮ್ಮ ನಾಣಯ್ಯ, ಕಲಿಯಂಡ ಮೀನಾ ಪ್ರಕಾಶ್, ಅಪ್ಪಚ್ಚಿರ ರೀನಾ, ಅಜ್ಜಿಕುಟ್ಟಿರ ಲೋಕೇಶ್, ಪುಲ್ಲೇರ ಕಾಳಪ್ಪ, ನಂದಿನೆರವಂಡ ವಿಜು, ಕಾಟುಮಣಿಯಂಡ ಉಮೇಶ್, ಕೊಂಗೆಟ್ಟಿರ ಲೋಕೇಶ್, ಕಿರಿಯಮಾಡ ಶರಿನ್, ಬೊಟ್ಟಂಗಡ ಗಿರೀಶ್, ನಂದಪಂಡ ಮನೋಜ್, ಅಪ್ಪಾರಂಡ ಪ್ರಸಾದ್, ಬೆಪಡಿಯಂಡ ಬಿದ್ದಪ್ಪ, ಕೂಪದಿರ ಸಾಬು, ಪುದಿಯೊಕ್ಕಡ ಕಾಶಿ, ನಂದಿನೆರವಂಡ ಅಪ್ಪಯ್ಯ, ಅಯಲಪಂಡ ಮಿಟ್ಟು ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: