ಮೈಸೂರು

ಮೂಡಾದಿಂದ ಡಿಫಾಲ್ಟರ್ ಮನೆಯನ್ನು ಇ-ಹರಾಜು ಮೂಲಕ ಕಡಿಮೆ ಬೆಲೆಗೆ ಕೊಡಿಸುವುದಾಗಿ ನಂಬಿಸಿ ನಕಲಿ ದಾಖಲೆ ನೀಡಿ ವಂಚನೆ

ಮೈಸೂರು,ಜೂ.15:-  ಮೂಡಾದಿಂದ ಡಿಫಾಲ್ಟರ್ ಮನೆಯನ್ನು ಇ-ಹರಾಜು ಮೂಲಕ ಕಡಿಮೆ ಬೆಲೆಗೆ ಕೊಡಿಸಿಕೊಡುತ್ತಾರೆಂದು ತಿಳಿಸಿ ಮಹಿಳೆಯೋರ್ವರನ್ನು ಪರಿಚಯಿಸಿ, ನಕಲಿ ದಾಖಲೆ ಸೃಷ್ಟಿಸಿ ಸಂಬಂಧಿಯೇ ವಂಚಿಸಿದ ಘಟನೆ ಮೈಸೂರಿನಲ್ಲಿ ನಡೆದಿದೆ.

ಈ ಕುರಿತು ಚಂದನ್ ಎಂಬವರು ಲಕ್ಷ್ಮೀಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.  ತನ್ನ  ಸಂಬಂಧಿ ಕೃಷ್ಣಮೂರ್ತಿ ಅವರು ಒಂದೂವರೆ ವರ್ಷದ ಹಿಂದೆ ಅವರ ಪರಿಚಿತರಾದ ಅನಿತ ಅವರನ್ನು ಕರೆದುಕೊಂಡು ಬಂದು  ಪರಿಚಯಿಸಿ ಇವರು ಮೂಡಾದಲ್ಲಿ ಕೆಲಸ ಮಾಡುತ್ತಿದ್ದು ಇವರು ಮೂಡಾದಿಂದ ಡಿಫಾಲ್ಟರ್ ಮನೆಯನ್ನು ಇ-ಹರಾಜು ಮೂಲಕ ಕಡಿಮೆ ಬೆಲೆಗೆ ಕೊಡಿಸಿಕೊಡುತ್ತಾರೆಂದು ತಿಳಿಸಿದ್ದರು, ಅಲ್ಲದೇ ಇವರ ಮೂಲಕ ತಾವೂ ಸಹ ಮನೆಯನ್ನು ತೆಗೆದುಕೊಂಡಿರುವುದಾಗಿ  ನಂಬಿಸಿದ್ದು, ಅದರಂತೆ ನಾನೂ ಕೂಡ ಮೂಡಾದಿಂದ ಸ್ವತ್ತನ್ನು ಅನಿತಾ ಅವರ ಮೂಲಕ ಕೊಂಡುಕೊಳ್ಳುವ ಸಲುವಾಗಿ ಒಟ್ಟು 73ಲಕ್ಷ ರೂಪಾಯಿಗಳನ್ನು ನಗದು ಮತ್ತು ಬ್ಯಾಂಕ್ ಮೂಲಕ ಅನಿತಾ ಹಾಗೂ ಅವರ ಗಂಡ ದೇವೇಂದ್ರರವರಿಗೆ ನೀಡಿದ್ದೆ, ನಂತರ ಮೂಡಾದಿಂದ ನೀಡಿರುವಂತೆ ನಕಲು ಮಂಜೂರಾತಿ ಪತ್ರವನ್ನು ಸೃಷ್ಟಿ ಮಾಡಿ ಸದರಿ ದಾಖಲೆಗಳನ್ನು ಸದ್ಯದಲ್ಲೇ ನೋಂದಣಿ ಮಾಡಿಸಿ ಕೊಡುತ್ತೇನೆಂದು ನಂಬಿಸಿ ನಕಲಿ ದಾಖಲೆಗಳನ್ನು ಕೊಟ್ಟು ಹೋಗಿದ್ದಾರೆ. ನಂತರ  ಅನುಮಾನಗೊಂಡು ಮೂಡಾ ಕಚೇರಿಗೆ ಹೋಗಿ ವಿಚಾರಿಸಲಾಗಿ ಈ ದಾಖಲೆಗಳು ನಕಲಿ ದಾಖಲೆಗಳಾಗಿದ್ದು, ಮೂಡಾದಿಂದ ನೀಡಿರುವ ದಾಖಲೆಗಳಾಗಿರುವುದಿಲ್ಲ ಎಂದು ತಿಳಿದು ಬಂದಿದೆ. 7-6-2019 ರಂದು   ಅನಿತ, ದೇವೇಂದ್ರ, ಕೃಷ್ಣಮೂರ್ತಿ ಅವರುಗಳನ್ನು ಭೇಟಿ ಮಾಡಿ ವಿಚಾರಿಸಲಾಗಿ ಅನಿತಾ  ಹೌದು ಕಣೋ ಇದು ನಕಲಿ ದಾಖಲೆ ನೀನು ಏನು ಮಾಡುತ್ತೀಯಾ ಮಾಡಿಕೋ ಎಂದು ಬೆದರಿಕೆ ಹಾಕಿದ್ದಾರೆ. ಮುಡಾದಿಂದ ಸ್ವತ್ತನ್ನು ಕೊಡಿಸಿಕೊಡುವುದಾಗಿ ತಿಳಿಸಿ ಹಣ ಪಡೆದುಕೊಂಡು ನಕಲಿ ದಾಖಲೆಗಳನ್ನು ನೀಡಿ ಮೋಸ ಮಾಡಿರುವ ಅನಿತ, ಕೃಷ್ಣಮೂರ್ತಿ, ದೇವೇಂದ್ರ ಅವರುಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ತಿಳಿಸಿದ್ದಾರೆ.

ಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: