ಪ್ರಮುಖ ಸುದ್ದಿಮೈಸೂರು

ವರ್ಷಕ್ಕೊಮ್ಮೆಯಾದರು ಕ್ರೀಡಾ ಚಟುಟಿಕೆಗಳನ್ನು ಆಯೋಜಿಸಿ : ಮೇಯರ್ ಪುಷ್ಪಲತಾ

ಪತ್ರಕರ್ತರ ವಾರ್ಷಿಕ ಕ್ರೀಡಾ ಕೂಟಕ್ಕೆ ಮೇಯರ್ ವಿದ್ಯುಕ್ತ ಚಾಲನೆ

ಮೈಸೂರು, ಜೂ.15 : ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಆಯೋಜಿಸಿದ್ದ ಪತ್ರಕರ್ತರ ವಾರ್ಷಿಕ ಕ್ರೀಡಾಕೂಟಕ್ಕೆ ಮೇಯರ್ ಪುಷ್ಪಲತಾ ಜಗನ್ನಾಥ್ ಅವರು ಶನಿವಾರ ಬೆಳಗ್ಗೆ ಚಾಲನೆ ನೀಡಿದರು.

ಮೈಸೂರು ವಿವಿ ಹಾಕಿ ಮೈದಾನದಲ್ಲಿ ಎರಡು ದಿನಗಳ ಕ್ರೀಡಾ ಕೂಟದ ಅಂಗವಾಗಿ ಮೊದಲ ದಿನ ಆಯೋಜಿಸಲಾಗಿದ್ದ ಸೀಮಿತ ಓವರ್‌ಗಳ ಟೆನಿಸ್‌ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಬ್ಯಾಟ್ ಹಿಡಿದು ನಾಲ್ಕೈದು ಬಾರಿ ಚೆಂಡನ್ನು ಬಾರಿಸುವ ಮೂಲಕ ಅವರು ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ತಾವು ಅಧಿಕಾರಕ್ಕೆ ಹಿಡಿದ ಸಂದರ್ಭ 68 ಜನ ನಗರಪಾಲಿಕೆ ಸದಸ್ಯರನ್ನೂ ಒಟ್ಟುಗೂಡಿಸಿ ಅಭಿನಂದನೆ ಸಲ್ಲಿಸಿದ ಮೊದಲ ಕಾರ‍್ಯಕ್ರಮವನ್ನು ನೆನಪಿಸಿಕೊಂಡರಲ್ಲದೇ ನಗರಪಾಲಿಕೆ ವತಿಯಿಂದ ಕೈಗೊಳ್ಳಲಾಗುವ ಯಾವುದೇ ಅಭಿವೃದ್ಧಿ ಕಾರ‍್ಯಕ್ರಮಗಳನ್ನು ನಿಷ್ಪಕ್ಷಪಾತವಾಗಿ ವರದಿ ಮಾಡಿ ಪಾಲಿಕೆಯ ಹಾಗೂ ನಗರದ ಗೌರವವನ್ನು ಎತ್ತಿಹಿಡಿಯುತ್ತಿರುವ ಪತ್ರಕರ್ತರಿಗೆ ನಾನು ಅಭಿನಂದನೆ ಸಲ್ಲಿಸುವೆ ಎಂದರು.

ಬಿಡುವಿಲ್ಲದ ಕೆಲಸ ಕಾರ‍್ಯ, ಒತ್ತಡಗಳಿದ್ದರೂ ವರ್ಷಕ್ಕೆ ಎರಡು ದಿನವಾದರೂ ಇಂತಹ ಕ್ರೀಡಾ ಚಟುಟಿಕೆಗಳನ್ನು ಆಯೋಜಿಸಿ ಮಕ್ಕಳು ಹಾಗೂ ಕುಟುಂಬದವರೊಂದಿಗೆ ಕಾಲ ಕಳೆಯುವ ನಿರ್ಧಾರ ತೆಗೆದುಕೊಂಡಿರುವುದು ನಿಜಕ್ಕೂ ಉತ್ತಮ ಬೆಳವಣಿಗೆ. ಇಂತಹ ಕಾರ‍್ಯಕ್ರಮಗಳು ಮುಂದೆಯೂ ಇದೇ ರೀತಿ ಯಶಸ್ವಿಯಾಗಿ ನಡೆಯಲಿ ಎಂದು ಅವರು ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕರ್ನಾಟಕ ರಾಜ್ಯ ಪೆಟ್ರೋಲ್ ಹಾಗೂ ಡೀಸೆಲ್ ಡೀಲರ‍್ಸ್ ಅಸೋಸಿಯೇಷನ್ ರಾಜ್ಯ ಪ್ರಧಾನ ಕಾರ‍್ಯದರ್ಶಿ ರಂಜಿತ್ ಹೆಗಡೆ ಅವರು ಮಾತನಾಡಿ, ಕ್ರೀಡೆಗಳು ವ್ಯಕ್ತಿಗೆ ಉಲ್ಲಾಸವನ್ನು ತಂದುಕೊಡುತ್ತವೆ. ಅಲ್ಲದೇ ಒಂದೇ ಸಮನೆ ಅಥವಾ ಒಂದೇ ರೀತಿಯ ಕೆಲಸ ಕಾರ‍್ಯಗಳ ಒತ್ತಡಗಳಿಗೆ ಪರಿಹಾರವಾಗಿ ಕ್ರೀಡೆ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತದೆ. ವ್ಯಕ್ತಿಯು ಶಿಸ್ತಿನ ಜೀವನ ರೂಪಿಸುಕೊಳ್ಳುವಲ್ಲಿ ಕ್ರೀಡೆ ಸಹಕಾರಿಯಾಗಿರುವುದು. ಹಾಗಾಗಿ ಸದಾ ಕಾಲ ಒತ್ತಡದಲ್ಲೇ ಕೆಲಸ ಮಾಡುವಂತಹ ಪತ್ರಕರ್ತರಿಗೆ ನವೋಲ್ಲಾಸ ತಂದು ಕೊಡುವ ನಿಟ್ಟಿನಲ್ಲಿ ಇಂತಹ ಕ್ರೀಡಾ ಕೂಟಗಳು ನಿರಂತರವಾಗಿ ನಡೆಯಲಿ ಎಂದು ಶುಭ ಕೋರಿದರು.

ಮತ್ತೊಬ್ಬ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಪಿ.ಕೃಷ್ಣಯ್ಯ ಅವರು ಮಾತನಾಡಿ, ಸಮಾಜದ ಅಂಕುಡೊಂಕುಗಳನ್ನು ತಿದ್ದುವಲ್ಲಿ ತಮ್ಮ ಅಮೂಲ್ಯ ಕೊಡುಗೆ ನೀಡುವ ಪತ್ರಕರ್ತರಿಗೆ ಅವರ ಕಾರ‍್ಯದಲ್ಲಿ ಹೆಚ್ಚಿನ ಕಾರ‍್ಯಕ್ಷಮತೆಯನ್ನು ಕ್ರೀಡೆಯು ಮೂಡಿಸುವುದರಲ್ಲಿ ಯಾವುದೇ ಸಂದೇಹವಿಲ್ಲ. ಪ್ರತಿ ವರ್ಷ ಜಿಲ್ಲಾ ಪತ್ರಕರ್ತರ ಸಂಘ ಆಯೋಜಿಸುವ ಕ್ರೀಡಾ ಕೂಟಕ್ಕೆ ವಿವಿಯ ಸಹಕಾರ ಇದ್ದೇ ಇರುತ್ತದೆ. ಸಾಧನೆಯ ಹಾದಿಯಲ್ಲಿ ನಡೆಯುವ ಕ್ರೀಡಾ ಚಟುವಟಿಕೆಗಳಿಗೆ ವಿವಿಯಲ್ಲಿ ಲಭ್ಯವಿರುವ ಎಲ್ಲ ರೀತಿಯ ಮೂಲಸೌಕರ‍್ಯಗಳನ್ನು ನೀಡುವುದಾಗಿ ಅವರು ಆಶ್ವಾಸನೆ ನೀಡಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ‍್ಯದರ್ಶಿ ಕೆ.ಜೆ.ಲೋಕೇಶ್‌ಬಾಬು ಮತ್ತಿತರ ಪದಾಧಿಕಾರಿಗಳು, ಪತ್ರಕರ್ತರು ಉಪಸ್ಥಿತರಿದ್ದರು. (ವರದಿ : ಕೆ.ಎಂ.ಆರ್)

 

Leave a Reply

comments

Related Articles

error: