ಪ್ರಮುಖ ಸುದ್ದಿ

ಕೊಡಗಿನ ಸಂಸ್ಕೃತಿಯೊಂದಿಗೆ ಸಸ್ಪೆನ್ಸ್ ಕಥಾನಕ : “ನಂದನವನದೊಳ್” ಚಿತ್ರ ಜು.12 ರಂದು ತೆರೆಗೆ

ರಾಜ್ಯ( ಮಡಿಕೇರಿ) ಜೂ.15 :- ಕೊಡಗಿನ ಸುಂದರ ಪರಿಸರದೊಂದಿಗೆ, ಇಲ್ಲಿನ ಸಂಸ್ಕೃತಿ, ಹಾಕಿ ಕ್ರೀಡೆ ಮತ್ತು ಯೋಧ ಪರಂಪರೆಯನ್ನು ಆಧರಿಸಿ, ಜಿಲ್ಲೆಯ ಪ್ರತಿಭಾವಂತ ಕಲಾವಿದರುಗಳ ತಂಡದೊಂದಿಗೆ ನಿರ್ಮಿಸಲಾಗಿರುವ ‘ನಂದನವನದೊಳ್’ ಚಲನಚಿತ್ರ ಜು.12ರಂದು ರಾಜ್ಯವ್ಯಾಪಿ ಬಿಡುಗಡೆಗೊಳ್ಳಲಿದೆ.
ಸುದ್ದಿಗೋಷ್ಠಿಯಲ್ಲಿ ಚಿತ್ರ ನಿರ್ದೇಶಕ ಸಂದೀಪ್ ಶೆಟ್ಟಿ ಮಾತನಾಡಿ, ಸಸ್ಪೆನ್ಸ್ ಕಥೆಯಾಧಾರಿತ ನಂದನವನದೊಳ್ ಕನ್ನಡ ಚಲನಚಿತ್ರದ ಚಿತ್ರೀಕರಣ ಪೂರ್ಣಗೊಂಡು ಸೆನ್ಸಾರ್ ಮಂಡಳಿಯಿಂದ ಯಾವುದೇ ಆಕ್ಷೇಪಗಳಿಲ್ಲದೆ ‘ಯು’ ಅರ್ಹತಾಪತ್ರ ಪಡೆದಿದೆ. ಚಿತ್ರವನ್ನು ಅಧಿಕೃತವಾಗಿ ಜು.12 ರಂದು ಮಡಿಕೇರಿಯ ಕಾವೇರಿ ಮಹಲ್ ಸೇರಿದಂತೆ ರಾಜ್ಯದ 100 ಚಿತ್ರ ಮಂದಿರಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದರು.
ಬಹುತೇಕ ಚಿತ್ರೀಕರಣ ಕೊಡಗಿನಲ್ಲೇ ನಡೆದಿದ್ದು, ಕೊಡಗಿನ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಚಲನಚಿತ್ರ 5 ಹಾಡುಗಳನ್ನು ಹೊಂದಿದ್ದು, ಇದರಲ್ಲಿನ ಒಂದು ಹಾಡು ‘ಉಪ್ಪು ಖಾರ ಉಪ್ಪು ಖಾರ’ ಈಗಾಗಲೇ ಜನ ಮೆಚ್ಚುಗೆ ಪಡೆದಿದೆ ಎಂದರು.
ಹೊಸತನ ಮತ್ತು ನೈಜತೆಯನ್ನು ಹೊಂದಿರುವ “ನಂದನವನದೊಳ್” ಚಿತ್ರವನ್ನು ಎಲ್ಲಾ ವರ್ಗದ ಪ್ರೇಕ್ಷಕರು ವೀಕ್ಷಿಸಬಹುದಾಗಿದೆ. ಪ್ರೇಕ್ಷಕರನ್ನು ರಂಜಿಸುವಲ್ಲಿ ಚಿತ್ರ ಯಶಸ್ವಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಸಂದೀಪ್ ಶೆಟ್ಟಿ, ಚಿತ್ರೀಕರಣದ ಸಂದರ್ಭ ಕೊಡಗಿನ ಜನ ಸಾಕಷ್ಟು ಪ್ರೋತ್ಸಾಹ ನೀಡಿರುವುದಾಗಿ ತಿಳಿಸಿದರು.
ಚಿತ್ರ ನಿರ್ಮಾಪಕ ಶರಣ್ ಪೂಣಚ್ಚ ಮಾತನಾಡಿ, ಅಂದಾಜು 1.50 ಕೊಟಿ ವೆಚ್ಚದಲ್ಲಿ ಚಿತ್ರವನ್ನು ನಿರ್ಮಿಸಲಾಗಿದ್ದು, ಕೊಡಗು, ಮೈಸೂರು, ಬೆಂಗಳೂರು, ಚಿಕ್ಕಮಗಳೂರು ಭಾಗದಲ್ಲಿ ಚಿತ್ರೀಕರಣ ಮಾಡಲಾಗಿದೆ ಎಂದರು. ಈ ಚಿತ್ರ ನಾಯಕ ಮತ್ತು ನಾಯಕಿಯರನ್ನು ಕೇಂದ್ರೀಕರಿಸಿಲ್ಲ, ಬದಲಾಗಿ ಕಥೆಯೇ ಇಲ್ಲಿ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಚಿತ್ರವನ್ನು ಆಸ್ಟ್ರೇಲಿಯ, ಜರ್ಮನಿಯಲ್ಲು ಬಿಡುಗಡೆ ಮಾಡುವ ಚಿಂತನೆ ಇದೆ ಎಂದು ತಿಳಿಸಿದರು.
ಕ್ಷಣ, ಕ್ಷಣಕ್ಕೂ ಕುತೂಹಲ ಕೆರಳಿಸುವ “ನಂದನವನದೊಳ್” ಚಿತ್ರದಲ್ಲಿ ಯೋಧರು, ಕಾಫಿ ಬೆಳೆ ಮತ್ತು ಹಾಕಿ ಕ್ರೀಡೆಯ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಮಾಡಲಾಗಿದೆ ಎಂದು ಶರಣ್ ಪೂಣಚ್ಚ ಮಾಹಿತಿ ನೀಡಿದರು.
ಯಕ್ಷಸಿರಿ ಕ್ರಿಯೇಷನ್ಸ್‍ನ ಅವರೆಮಾದಂಡ ಶರಣ್ ಪೂಣಚ್ಚ ನಿರ್ಮಾಪಕರಾಗಿರುವ ಚಿತ್ರಕ್ಕೆ ಸಂದೀಪ್ ಶೆಟ್ಟಿ ವಿಟ್ಲ ಅವರು ಕಥೆ ಒದಗಿಸಿ ನಿರ್ದೇಶನ ಮಾಡಿದ್ದಾರೆ. ಶಿವಸತ್ಯ ಸಂಗೀತ ನೀಡಿದ್ದು, ದೇವೂ ಛಾಯಾಗ್ರಹಣ, ಕಾರ್ತಿಕ್ ಕೆ.ಎಂ. ಸಂಕಲನ ಮಾಡಿದ್ದಾರೆ.
ವಾಂಚಿರ ವಿಠಲ ನಾಣಯ್ಯ, ಭರತ್ ರೈ, ತಾತಂಡ ಪ್ರಭಾ ನಾಣಯ್ಯ, ಆನಂದ್ ಯಾದವಾಡ್, ಅಮ್ಮಣಿಚಂಡ ಪ್ರವೀಣ್, ತಾತಂಡ ಪ್ರತಾಪ್ ಬೆಳ್ಳಿಯಪ್ಪ, ಸಂತೋಷ್ ಶೆಟ್ಟಿ, ಬಲ್ಲಚಂಡ ಭಜನ್ ಬೋಪಣ್ಣ, ವಾಂಚಿರ ಜಯಾನಂಜಪ್ಪ, ಪಟ್ಟಡ ಧನು, ನಾರಾಯಣಸ್ವಾಮಿ ಗೌಡ, ಸೋಮೆಯಂಡ ಬೋಸ್ ಬೆಳ್ಳಿಯಪ್ಪ, ಕಾಳಿಮಾಡ ದಿನೇಶ್ ನಾಚಪ್ಪ, ಹಂಸ ವೀರಾಜಪೇಟೆ, ಸುನಿಲ್ ಮಂಡಲ್, ಕೈಬುಲಿರ ಸ್ಮಿತಾ ಕುಶಾಲಪ್ಪ ಅವರುಗಳು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಹಿರಿಯ ಕಲಾವಿದರು ಹಾಗೂ ವೀರಾಜಪೇಟೆ ಕೊಡವ ಸಮಾಜದ ಅಧ್ಯಕ್ಷರಾದ ವಾಂಚಿರ ವಿಠಲ ನಾಣಯ್ಯ, ಛಾಯಾಗ್ರಾಹಕ ದೇವೂ, ಕಲಾವಿದರಾದ ಭರತ್ ರೈ ಹಾಗೂ ಅಮ್ಮಣಿಚಂಡ ಪ್ರವೀಣ್ ಉಪಸ್ಥಿತರಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: