ಮೈಸೂರು

ದೇವರಾಜ ಮಾರುಕಟ್ಟೆಗೆ ಪತ್ನಿ ಸಮೇತ ರಾಜವಂಶಸ್ಥ ಯದುವೀರ್ ಒಡೆಯರ್ ದಿಢೀರ್ ಭೇಟಿ

ಮೈಸೂರು,ಜೂ.16:- ದೇವರಾಜ ಮಾರುಕಟ್ಟೆಗೆ ಸಂಬಂಧಿಸಿದಂತೆ ಕೋರ್ಟ್ ನೀಡಿದ ಆದೇಶವನ್ನು ತಪ್ಪಾಗಿ ಅರ್ಥೈಸಿಕೊಂಡು ವರದಿ ಮಾಡಿದ್ದ ಮಾಧ್ಯಮಗಳಿಗೆ ನಿನ್ನೆಯಷ್ಟೇ ಮೈಸೂರಿನ ರಾಜವಂಶಸ್ಥ ಯದುವೀರ್ ಒಡೆಯರ್ ಮಂಗಳಾರತಿ ಮಾಡಿದ್ದರು. ಇಂದು ಮುಂಜಾನೆ ದಿಢೀರನೆ ಪತ್ನಿ ಸಮೇತ ಅದೇ ದೇವರಾಜ ಮಾರುಕಟ್ಟೆಗೆ ಭೇಟಿ ನೀಡಿ ವ್ಯಾಪಾರಿಗಳಿಗೆ  ಅಚ್ಚರಿ ಮೂಡಿಸಿದರು.

ಭಾನುವಾರ ಬೆಳಿಗ್ಗೆ ನಗರದ ದೇವರಾಜ ಮಾರುಕಟ್ಟೆಯಲ್ಲಿ ಸಂಚಲನ ಮೂಡಿತು. ಕಾರಣ ರಾಜವಂಶಸ್ಥ ಯದುವೀರ್, ಮಡದಿ ತ್ರಿಷಿಕಾ ಕುಮಾರಿ ಒಡೆಯರ್ ಸಮೇತ ಮಾರುಕಟ್ಟೆಗೆ ಆಗಮಿಸಿದ್ದರು. ಮಾರುಕಟ್ಟೆಯನ್ನು ಒಂದು ಸುತ್ತು ಹಾಕಿ ವ್ಯಾಪಾರಿಗಳ ಜತೆ ಸಮಾಲೋಚನೆ ನಡೆಸಿದರು. ದಂಪತಿ ಮಾರುಕಟ್ಟೆಯಲ್ಲಿ ಸಾಗುತ್ತಿದ್ದರೆ ವ್ಯಾಪಾರಿಗಳು ಸ್ವಪ್ರೇರಣೆಯಿಂದ ಎದ್ದು ನಿಂತು ಗೌರವ ತೋರಿಸಿದ್ದು ವಿಶೇಷವಾಗಿತ್ತು.

ಇದೇ ವೇಳೆ ತ್ರಿಷಿಕಾ ಅವರು ಮಾರುಕಟ್ಟೆಯಲ್ಲಿ ತಾಜಾ ತರಕಾರಿ, ಸೊಪ್ಪುಗಳನ್ನು ಖರೀದಿಸಿದರು. ಜತೆಗೆ ನೇರಳೆ ಹಣ್ಣು, ನಂಜನಗೂಡಿನ ರಸಬಾಳೆಯನ್ನು ಖರೀದಿಸಿದರು.   ಮಾರುಕಟ್ಟೆಯಲ್ಲಿ ಖರೀದಿಗೆ ಮುಂದಾದಾಗ ವ್ಯಾಪಾರಿಗಳು ದುಡ್ಡು ಪಡೆಯಲು ಹಿಂದೇಟು ಹಾಕಿದರು. ಕೈ ಮುಗಿದು ಹಣವನ್ನು ನಯವಾಗಿ ನಿರಾಕರಿಸಿದರು. ಆದರೆ ಇದಕ್ಕೆ ಬಗ್ಗದ ದಂಪತಿ, ಬಲವಂತವಾಗಿಯೇ ಹಣ ನೀಡಿ ತರಕಾರಿ, ಸೊಪ್ಪು, ಹಣ್ಣುಗಳನ್ನು ಖರೀದಿಸಿದರು.

ಮೈಸೂರ್ ಪಾಕ್ ಖರೀದಿಸಿ ಯದುವೀರ್

ದೇವರಾಜ ಮಾರುಕಟ್ಟೆಯಲ್ಲಿ ಸುತ್ತುಹಾಕಿ ವ್ಯಾಪಾರ ಮುಗಿಸಿಕೊಂಡು ಹೊರ ಬಂದ ಯದುವೀರ್, ನೇರವಾಗಿ ಗುರು ಸ್ವೀಟ್ ಮಾರ್ಟ್ ಗೆ ಭೇಟಿ ನೀಡಿದರು. ಅಲ್ಲಿ ದೊರಕುವ ಪ್ರಸಿದ್ಧ ಮೈಸೂರ್ ಪಾಕ್ ಖರೀದಿಸಿದರು. ನಂತರ ಕಾರಿನ ಬಳಿ ತೆರಳಿದಾಗ ಮಾರುಕಟ್ಟೆ ಸಮೀಪ ನೆರದಿದ್ದ ಅನೇಕರು ಆಗಮಿಸಿ ಯದುವೀರ್ ಕಾಲಿಗೆ ನಮಸ್ಕರಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: