ಮೈಸೂರು

ವಿದ್ಯಾರ್ಥಿ ಜೀವನ ಬಣ್ಣದಾಟವಲ್ಲ; ಪುಸ್ತಕದ ಒಡನಾಟ : ಆಧ್ಯಾತ್ಮಿಕ ಚಿಂತಕ ಶಂಕರ ದೇವನೂರು

ಮೈಸೂರು,ಜೂ.17:- ಎಸ್.ಬಿ.ಆರ್.ಆರ್. ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ 2019-20ನೇ ಸಾಲಿನ ಪೋಷಕರ ಸಮಾವೇಶವನ್ನು  ಶಂಕರ ದೇವನೂರು, ಆಧ್ಯಾತ್ಮಿಕ ಚಿಂತಕರು, ಮುಖ್ಯ ಇಂಜಿನಿಯರ್ (ಸಿವಿಲ್ ವಿನ್ಯಾಸ) ಕರ್ನಾಟಕ ವಿದ್ಯುತ್ ನಿಗಮ ಬೆಂಗಳೂರು ಇವರು  ಉದ್ಘಾಟಿಸಿದರು.

ಬಳಿಕ ಜ್ಯೋತಿ ಬೆಳಗುವುದರ ಅರ್ಥ ತಿಳಿಸುತ್ತ, ‘ಜ್ಯೋತಿ ಅರಿವಿನ ಸಂಕೇತ ಅಂದರೆ ಅದು ಜ್ಞಾನದ ಸಂಕೇತ’   ಬದುಕು ಬೆಳಕಾಗಬೇಕು ಆರುವ ಮುನ್ನ ಬೆಳಕು ಬಿಟ್ಟುಹೋಗಬೇಕು ಎಂದು ಕಿವಿ ಮಾತನಾಡಿದರು. ಸಂಪಿಗೆ ಮರದ ಸೊಂಪಿನ ಬಗ್ಗೆ ತಿಳಿಸುತ್ತ, ಮರದಲ್ಲಿ ಮೊಗ್ಗಾಗಿ ಕಾಲಾನಂತರ ಅರಳಿ ಜಗತ್ತನ್ನು ಸುಂದರ ಮತ್ತು ಸುಗಂಧಗೊಳಿಸುವ ಹಾಗೆ ವಿದ್ಯಾರ್ಥಿಗಳ ಬದುಕು ಹೂವಿನಂತಾಗಬೇಕು .  ಉನ್ನತ ಶಿಕ್ಷಣವೆಂದರೆ, ಕೇವಲ ಮಾಹಿತಿ ಸಂಗ್ರಹಿಸುವುದಷ್ಟೇ ಅಲ್ಲ  ಅದು ಜೀವನವನ್ನು ಸಾಮರಸ್ಯದಿಂದ ಬದುಕುವುದನ್ನು ತಿಳಿಸುವುದೇ ಶಿಕ್ಷಣ ಎಂದರು. ಶಿಕ್ಷಣದ ಮಹತ್ವ ಬೇರ್ಪಡಿಸುವುದಲ್ಲ ಸೇರ್ಪಡಿಸುವುದು. ಭಾರತೀಯ ಸಂಸ್ಕೃತಿಯ ಹಿರಿಮೆಯ ಬಗ್ಗೆ ಮೆಕಾಲೆ ಬ್ರಿಟಿಷ್ ಪಾರ್ಲಿಮೆಂಟ್‍ನಲ್ಲಿ ಹೊಗಳಿದ ಬಗೆಯನ್ನು ಸ್ಮರಿಸಿ ಭಾರತದ ಸಂಸ್ಕೃತಿಯ ಶ್ರೀಮಂತಿಕೆಯನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು. ಬೋಧಕ ವೃತ್ತಿ ಎಂದರೆ ವಿದ್ಯಾರ್ಥಿಗಳಲ್ಲಿರುವ ಅಜ್ಞಾನದ ಮೇಲೆ ದಾಳಿ ಮಾಡಿ ಪ್ರಜಾಪ್ರಭುತ್ವದ ಶ್ರೀಮಂತಿಕೆಯನ್ನು ಹೆಚ್ಚಿಸುವಂತಹ ಶ್ರೀಮಂತ ವೃತ್ತಿ ಎಂದು ಪೋಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು. ಈ ಸಂದರ್ಭದಲ್ಲಿ ಗುರುಗಳ ಪ್ರಾಮುಖ್ಯತೆಯ ಬಗ್ಗೆ ಕುವೆಂಪು ಅವರ ನುಡಿಗಳಾದ ‘ಎಚ್ಚರಿಸು ಬಾ ಗುರುವೆ’ ಎಂಬ ವಾಕ್ಯವನ್ನು ಸ್ಮರಿಸಿದರು. ಮಕ್ಕಳಿಗೆ ಪೋಷಕರು ಭೂಮಿ ಮತ್ತು ನೀರಿನಂತೆ, ಶಿಕ್ಷಕರು ಗಾಳಿ ಮತ್ತು ಬೆಳಕಿನಂತೆ ಅವರ ಬೆಳವಣಿಗೆಗೆ ಪ್ರಮುಖ ಪಾತ್ರಧಾರಿಗಳು ಎಂದರು.

ವೇದಿಕೆಯಲ್ಲಿ ಮಹಾಜನ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಡಾ. ಟಿ. ವಿಜಯಲಕ್ಷ್ಮಿ ಮುರಳೀಧರ್, ಪ್ರಾಂಶುಪಾಲರಾದ ಡಾ. ಎಸ್. ವೆಂಕಟರಾಮು, ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು ಮತ್ತು ಶೈಕ್ಷಣಿಕ ಸಲಹೆಗಾರರಾದ ಡಾ. ಎಸ್.ಆರ್. ರಮೇಶ್, ಕಳೆದ ಸಾಲಿನ ಪೋಷಕರ ಸಂಘದ ಅಧ್ಯಕ್ಷರಾದ   ಬಿ.ಸಿ. ರೋಹಿಣಿ, ಕಾರ್ಯದರ್ಶಿ  ಬಿ.ಜಿ. ಉಷಾ ಅವರು ಉಪಸ್ಥಿತರಿದ್ದರು.

ಪೋಷಕರ ಸಂಘದ ಸಂಚಾಲಕರಾದ ಡಾ. ವಿನೋದಮ್ಮ   ಸ್ವಾಗತಿಸಿದರು,   ಪೂರ್ಣಿಮ ವಂದನಾರ್ಪಣೆ ಮಾಡಿದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಎಚ್.ಆರ್. ತಿಮ್ಮೇಗೌಡ ಅವರು ಕಾರ್ಯಕ್ರಮದ ನಿರೂಪಣೆ ಮಾಡಿದರು.  (ಎಸ್.ಎಚ್)

Leave a Reply

comments

Related Articles

error: