
ಪ್ರಮುಖ ಸುದ್ದಿ
ಮರ, ಮರಳು ಸಾಗಾಟ : ನಿರ್ಬಂಧ ಸಡಿಲಿಸಲು ಆಗ್ರಹ
ರಾಜ್ಯ(ಮಡಿಕೇರಿ) ಜೂ.18 :- ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಮರ ಮತ್ತು ಮರಳು ಸಾಗಾಣಿಕೆಗೆ ವಿಧಿಸಲಾಗಿರುವ ನಿರ್ಬಂಧವನ್ನು ಸಡಿಲಿಸುವಂತೆ ಕೊಡಗು ಜಿಲ್ಲಾ ಭೂ ಮಾಲೀಕರು ಮತ್ತು ಮರ ವ್ಯಾಪಾರಿಗಳ ಸಂಘ, ಲಾರಿ ಮಾಲೀಕರ ಸಂಘ ಹಾಗೂ ಕ್ರೈನ್ ಮಾಲೀಕರ ಸಂಘ ಜಿಲ್ಲಾಡಳಿತವನ್ನು ಒತ್ತಾಯಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭೂ ಮಾಲೀಕರ ಮತ್ತು ಮರ ವ್ಯಾಪಾರಿಗಳ ಸಂಘದ ಉಪಾಧ್ಯಕ್ಷ ಕೆ.ಎ.ಆದಂ, ಈ ಸಂಬಂಧ ಜೂ.18 ರಂದು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದಲ್ಲದೆ, ಇದಕ್ಕೆ ಸೂಕ್ತ ಸ್ಪಂದನ ದೊರಕದಿದ್ದಲ್ಲಿ ಎಲ್ಲಾ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಜಿಲ್ಲಾಧಿಕಾರಿಗಳ ಕಛೇರಿ ಎದುರು ಧರಣಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಲೋಕೋಪಯೋಗಿ ಮತ್ತು ಪೊಲೀಸ್ ಇಲಾಖೆಗಳ ಶಿಫಾರಸ್ಸಿನ ಮೇರೆಗೆ ಜಿಲ್ಲಾಧಿಕಾರಿಗಳು ಜೂ.12 ರಿಂದ ಆಗಸ್ಟ್ 8 ರವರೆಗೆ ಜಿಲ್ಲೆಯಾದ್ಯಂತ ಮರಳು ಮತ್ತು ಮರದ ದಿಮ್ಮಿಗಳ ಸಾಗಾಣಿಕೆ ನಿರ್ಬಂಧಿಸಿ ಆದೇಶ ಹೊರಡಿಸಿದ್ದಾರೆ. ಆದರೆ, ಅರಣ್ಯ ಇಲಾಖೆಯು ಮರ ವ್ಯಾಪಾರಿಗಳಿಗೆ ಮರ ಕಡಿದು ಸಾಗಾಟ ಮಾಡುವುದಕ್ಕೆ ಜೂನ್ ಅಂತ್ಯದವರೆಗೂ ಪರವಾನಗಿಯನ್ನು ನೀಡಿ ಆಗಿದೆ.
ಹೀಗಿದ್ದರೂ ಜಿಲ್ಲಾಡಳಿತ ಇವುಗಳ ಸಾಗಾಟಕ್ಕೆ ನಿರ್ಬಂಧ ವಿಧಿಸಿರುವುದು ಅವೈಜ್ಞಾನಿಕ ಕ್ರಮವಾಗಿದೆ. ಸರ್ಕಾರದ ಎರಡು ಇಲಾಖೆಗಳು ಈ ರೀತಿ ವಿಭಿನ್ನ ಧೋರಣೆಗಳನ್ನು ತಳೆಯುವುದರಿಂದ ಜಿಲ್ಲೆಯ ಭೂ ಮಾಲೀಕರು, ಮರ ವ್ಯಾಪಾರಿಗಳು, ಲಾರಿ ಮತ್ತು ಕ್ರೈನ್ ಮಾಲೀಕರು ಹಾಗೂ ಕಾರ್ಮಿಕ ಸಮೂಹ ತೀವ್ರ ಸಂಕಷ್ಟಕೆ ಗುರಿಯಾಗುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಮರಳು ಮತ್ತು ಮರದ ದಿಮ್ಮಿಗಳ ಹಾಗೂ 16,200 ಕೆ.ಜಿ. ಮೇಲಿನ ಸರಕು ಸಾಗಾಣಿಕೆಗೆ ನಿರ್ಬಂಧ ವಿಧಿಸಲಾಗಿದೆ. ಆದರೆ, ಹೊರ ಜಿಲ್ಲೆಗಳಿಂದ ಸಿಮೆಂಟ್, ಕಬ್ಬಿಣ ಮತ್ತಿತರ ಹತ್ಯಾರುಗಳು ನಿಗದಿತ ಮಿತಿಯನ್ನು ಮೀರಿ ಜಿಲ್ಲೆಯನ್ನು ಪ್ರವೇಶಿಸುತ್ತಿವೆ. ಅದರಲ್ಲೂ ಹಾಸನ ಜಿಲ್ಲೆಯಿಂದ ಸೋಮವಾರಪೇಟೆ ತಾಲ್ಲೂಕಿನ ಮೂಲಕ ಇಂತಹ ವಾಹನಗಳು ಯಥೇಚ್ಛವಾಗಿ ಕೊಡಗಿಗೆ ಆಗಮಿಸುತ್ತಿದ್ದು, ಇದನ್ನು ನಿರ್ಬಂಧಿಸುವವರು ಯಾರು ಎಂದು ಕೆ.ಎ.ಆದಂ ಪ್ರಶ್ನಿಸಿದರು.
ಹೊರ ಜಿಲ್ಲೆಗಳಿಂದ ಇಂತಹ ವಾಹನಗಳು ಜಿಲ್ಲೆಯನ್ನು ಪ್ರವೇಶಿಸಬಹುದಾದರೆ 16,200 ಕೆ.ಜಿ. ವರೆಗಿನ ಮರದ ದಿಮ್ಮಿಗಳ ಸಾಗಾಟಕ್ಕೂ ಅವಕಾಶ ಮಾಡಿಕೊಡಬೇಕು. ಇಲ್ಲವಾದಲ್ಲಿ ಎಲ್ಲಾ ಸರಕು ಸಾಗಾಟವನ್ನು ನಿರ್ಬಂಧಿಸಬೇಕೆಂದರು. ಮರ ಮತ್ತು ಮರಳು ಸಾಗಾಟದಿಂದ ರಸ್ತೆಗಳು ಹಾನಿಗೊಳಗಾಗುತ್ತದೆ ಎಂದಾದಲ್ಲಿ, ಭಾರೀ ಪ್ರಮಾಣದ ಸರಕು ಸಾಗಾಟದ ವಾಹನಗಳಿಂದಲೂ ರಸ್ತೆಗಳು ಹಾನಿಗೊಳಗಾಗಲಿವೆ. ಮರಳು ಮತ್ತು ಮರದ ದಿಮ್ಮಿಗಳ ಸಾಗಾಟಕ್ಕೆ ನಿರ್ಬಂಧ ವಿಧಿಸುವ ತೀರ್ಮಾನಕ್ಕೆ ಜಿಲ್ಲಾಧಿಕಾರಿಗಳು ಬರುವುದಕ್ಕೂ ಮೊದಲು ಲೋಕೋಪಯೋಗಿ, ಪೊಲೀಸ್ ಇಲಾಖೆ ಮತ್ತು ಅರಣ್ಯ ಇಲಾಖೆಯ ಅಭಿಪ್ರಾಯವನ್ನು ಕೂಡ ಪಡೆಯಬೇಕಾಗಿತ್ತು ಎಂದು ಆದಂ ಅಭಿಪ್ರಾಯಪಟ್ಟರು.
ಜಿಲ್ಲೆಯ ಕಾಫಿ ತೋಟಗಳಲ್ಲಿ ಬೆಳೆದಿರುವ ಸಿಲ್ವರ್, ಬಳಂಜಿ ಮತ್ತಿತರ ಜಾತಿಯ ಮರಗಳನ್ನು ಕಡಿದು ಸಾಗಾಟ ಮಾಡಲು ಅರಣ್ಯ ಇಲಾಖೆ ಮೇ ತಿಂಗಳ ಅಂತ್ಯದಲ್ಲಿ ಪರವಾನಗಿಯನ್ನು ನೀಡುತ್ತದೆ. ಕೇವಲ ಮೂರು ತಿಂಗಳ ಅವಕಾಶ ನೀಡಲಾಗುತ್ತದೆಯಾದರು, ಮಳೆಯ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮರ ಸಾಗಾಟಕ್ಕೆ ಜೂನ್ ತಿಂಗಳಿನಲ್ಲೆ ನಿರ್ಬಂಧ ವಿಧಿಸುತ್ತದೆ. ಈ ಕಾರಣದಿಂದ ಭೂ ಮಾಲೀಕರು, ಮರ ವ್ಯಾಪಾರಿಗಳು ಕೂಡ ನಷ್ಟ ಅನುಭವಿಸಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಕೊಡಗು ಜಿಲ್ಲಾ ಭೂ ಮಾಲೀಕರು ಮತ್ತು ಮರ ವ್ಯಾಪಾರಿಗಳ ಸಂಘದ ಅಧ್ಯಕ್ಷ ರವಿ ಕುಟ್ಟಪ್ಪ, ಪ್ರಧಾನ ಕಾರ್ಯದರ್ಶಿ ಮನೋರಂಜನ್, ಪ್ರಸಾದ್ ಕುಟ್ಟಪ್ಪ, ಲಾರಿ ಮಾಲೀಕರ ಸಂಘದ ರೂಪೇಶ್ ಹಾಗೂ ಕ್ರೈನ್ ಮಾಲೀಕರ ಸಂಘದ ಕಾರ್ಯದರ್ಶಿ ರತೀಶನ್ ಉಪಸ್ಥಿತರಿದ್ದರು. (ಕೆಸಿಐ,ಎಸ್.ಎಚ್)